ಮಂಡ್ಯ: ‘ಇಲ್ಲಿನ ನಗರಸಭೆ ಚುನಾವಣೆ ಮತದಾನದ ವೇಳೆಯಲ್ಲೇ ಚುನಾವಣಾಧಿಕಾರಿ ಸಮಕ್ಷಮದಲ್ಲಿಯೇ ಸ್ಥಳೀಯ ಶಾಸಕರು (ಪಿ.ರವಿಕುಮಾರ್) ನಮ್ಮ ಪಕ್ಷದ ಸದಸ್ಯರಿಗೆ ಅಡ್ಡ ಮತದಾನಕ್ಕೆ ಕುಮ್ಮಕ್ಕು ನೀಡಿ ಕಣ್ಸನ್ನೆ, ಕೈಸನ್ನೆ ಮೂಲಕ ಹಣದ ಆಮಿಷ ಒಡ್ಡಿದರು’ ಎಂದು ಮಂಡ್ಯ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
‘ವಾಮಮಾರ್ಗದಲ್ಲಿ ಜೆಡಿಎಸ್– ಬಿಜೆಪಿ ಪಕ್ಷಗಳು ಅಧಿಕಾರ ಹಿಡಿದವು’ ಎಂದು ಶಾಸಕ ಪಿ.ರವಿಕುಮಾರ್ ನೀಡಿರುವ ಹೇಳಿಕೆಗೆ ಬುಧವಾರ ಮಾಧ್ಯಮದವರ ಜೊತೆ ಮಾತನಾಡುವ ವೇಳೆ ತಿರುಗೇಟು ನೀಡಿದರು.
ಶಾಸಕರ ಪ್ರಕಾರ ವಾಮಮಾರ್ಗದ ಅರ್ಥವೇನು? ಮತದಾನದ ವೇಳೆಯಲ್ಲಿಯೂ ಕಣ್ಸನ್ಸೆ, ಕೈಸನ್ಸೆ ಮೂಲಕ ನಮ್ಮ ಸದಸ್ಯರಿಗೆ ಹಣದ ಆಮಿಷ ಒಡ್ಡಿದ್ದು ವಾಮಮಾರ್ಗ ಅಲ್ಲದೆ ಮತ್ತೇನು? ಎಂದು ಖಾರವಾಗಿ ಪ್ರಶ್ನಿಸಿದರು.
‘ನನ್ನ ಜೀವನದಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ ಹಾಕಲು ಬಂದಿದ್ದೇನೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿ ನಾನು ಬರಲೇಬೇಕಾಯಿತು. ದೆಹಲಿಯಲ್ಲಿ ಸಚಿವ ಸಂಪುಟದ ಸಭೆ ನಿಗದಿ ಆಗಿತ್ತು. ನಾನು ಪ್ರಧಾನಮಂತ್ರಿಗಳ ಕಚೇರಿಯ ಅನುಮತಿ ಪಡೆದು ಮತದಾನದಲ್ಲಿ ಭಾಗವಹಿಸಿದೆ. ಕಾಂಗ್ರೆಸ್ ಈ ಜಿಲ್ಲೆಯಲ್ಲಿ ಅಷ್ಟರ ಮಟ್ಟಿಗೆ ಕೆಟ್ಟ ರಾಜಕೀಯ ಮಾಡುತ್ತಿದೆ’ ಎಂದು ಟೀಕಿಸಿದರು.
ಚುನಾವಣೆ ಸೋಲಿನ ಭಯದಲ್ಲಿ ಚುನಾವಣೆ ಮುಂದೂಡುವುದರಲ್ಲಿ ಕಾಂಗ್ರೆಸ್ ಎಕ್ಸ್‌ಪರ್ಟ್. ಶಾಂತಿಯುತವಾಗಿ ಚುನಾವಣೆ ನಡೆಯಲು ಅಧಿಕಾರಿಗಳು ಸಹಕರಿಸಿದ್ದಾರೆ. ಆದರೆ, ಏನಾದರೂ ಕಿತಾಪತಿ ಮಾಡಲು ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಹಿಂದಿನ ಅಧ್ಯಕ್ಷರು ವ್ಯಾಪಾರ ಶುರು ಮಾಡಿದರು. ನಮ್ಮ ಪಕ್ಷದಿಂದ ಗೆದ್ದು ಯಾವ ರೀತಿ ನಡೆದುಕೊಂಡರು ಎನ್ನುವುದು ಗೊತ್ತಿದೆ. ಮಹದೇವು ನಿಷ್ಠಾವಂತ ಜೆಡಿಎಸ್ ಸದಸ್ಯರು. ಪಕ್ಷ ನಿಷ್ಠೆಗೆ ಬೆಲೆ ಕೊಟ್ಟು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿಲ್ಲ. ಕಾಂಗ್ರೆಸ್ ನಾಯಕರು ಇವರ ಕುಟುಂಬದ ಸದಸ್ಯರನ್ನು ಬ್ಲ್ಯಾಕ್‌ಮೇಲ್ ಮಾಡಿದರು. ಮಹದೇವು ಅವರು ತೆಗೆದುಕೊಂಡ ನಿರ್ಧಾರ ಪಕ್ಷನಿಷ್ಠೆಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡ್ಯ ನಗರಸಭೆ ಚುನಾವಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು (ಎನ್.ಚಲುವರಾಯಸ್ವಾಮಿ) ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ರು. ನಾವು ಆ ಸವಾಲು ಸ್ವೀಕಾರ ಮಾಡಿ ಗೆಲುವು ಸಾಧಿಸಿದ್ದೇವೆ. ನಮ್ಮ ಸದಸ್ಯರು ಯಾವುದೇ ಆಮಿಷಕ್ಕೆ ಒಳಗಾಗಲಿಲ್ಲ. ರಾಜಕೀಯ ಅಂದರೆ ಆಮಿಷ ಎಲ್ಲಾ ಸಹಜ. ಅಂತಿಮವಾಗಿ ನಂಬರ್ ಎನ್ನುವುದು ಮುಖ್ಯ. ನಾವು ಆ ನಂಬರ್ ಅನ್ನು ಮುಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇತರೆ ಚುನಾವಣೆಗಳಲ್ಲಿ ಎನ್‌ಡಿಎ ಗೆಲ್ಲುತ್ತೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಎರಡು ಬಣದವರು ಪ್ರತ್ಯೇಕ ವಾಹನಗಳಲ್ಲಿ ಮಂಡ್ಯ ನಗರಸಭೆ ಆವರಣಕ್ಕೆ ಬಂದರು. ಈ ಸಂದರ್ಭ ಗೇಟ್‌ನಲ್ಲಿ ನಿಂತಿದ್ದ ಕಾರ್ಯಕರ್ತರು, ಬೆಂಬಲಿಗರ ನಡುವೆ ತೀವ್ರ ನೂಕುನುಗ್ಗಲು ಉಂಟಾಯಿತು.
ಕಾಂಗ್ರೆಸ್ ಸದಸ್ಯರ ವಾಹನವನ್ನು ಶಾಸಕ ರವಿಕುಮಾರ್ ಅವರ ನೇತೃತ್ವದಲ್ಲಿ ಆವರಣದೊಳಕ್ಕೆ ಕರೆತರಲಾಯಿತು. ನಂತರ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸರ್ಕಾರಿ ಕಾರಿನಲ್ಲಿ ಆಗಮಿಸಿದರು. ಅವರ ಹಿಂದೆಯೇ ಬರುತ್ತಿದ್ದ ಜೆಡಿಎಸ್ ಸದಸ್ಯರ ವಾಹನವನ್ನು ಕಾಂಗ್ರೆಸ್ ಕಾರ್ಯಕರ್ತರು ಗೇಟಿನ ಬಳಿ ಅಡ್ಡಗಟ್ಟಿದರು.
ಇದರಿಂದ ಕೆಲಕಾಲ ಪೊಲೀಸರು ಮತ್ತು ಜೆಡಿಎಸ್ ಬೆಂಬಲಿಗರ ನಡುವೆ ವಾಗ್ವಾದ ಮತ್ತು ನೂಕುನುಗ್ಗಲು ಉಂಟಾಯಿತು. ಇದರಿಂದ ಬೇಸತ್ತ ಕುಮಾರಸ್ವಾಮಿ ಸ್ವತಃ ಗೇಟಿನ ಬಳಿ ತೆರಳಿ ಸದಸ್ಯರ ವಾಹನವನ್ನು ಪೊಲೀಸರ ಭದ್ರತೆಯಲ್ಲಿ ಆವರಣದೊಳಕ್ಕೆ ಕರೆ ತರುವಲ್ಲಿ ಯಶಸ್ವಿಯಾದರು.
ಈ ಮಧ್ಯೆ ಶಾಸಕ ರವಿಕುಮಾರ್ ಅವರು ಜೆಡಿಎಸ್ ಸದಸ್ಯರ ಬಳಿಗೆ ಅವರ ಪೋಷಕರನ್ನು ಮಾತನಾಡಿಸಲು ಬಿಡುವಂತೆ ಆಗ್ರಹಿಸಿದರು. ಇದಕ್ಕೆ ಅವಕಾಶ ನೀಡದ ಪೊಲೀಸರು ಜೆಡಿಎಸ್ ಸದಸ್ಯರನ್ನು ನಗರಸಭೆಯ ಸಭಾಂಗಣದೊಳಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು. ನಂತರ ಚುನಾವಣಾ ಪ್ರಕ್ರಿಯೆ ಆರಂಭವಾಯಿತು.
‘ಮಂಡ್ಯ ನಗರಸಭೆ ಚುನಾವಣೆಯನ್ನು ನಾವು ಗೆದ್ದೇ ಗೆಲ್ಲುತ್ತಿದ್ದೆವು. ಜೆಡಿಎಸ್‌ನವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಗೆದ್ದಿದ್ದಾರೆ. ಜೆಡಿಎಸ್‌ನ ಇಬ್ಬರು ಸದಸ್ಯರು ನಮಗೆ ಮತ ಹಾಕಲು ಕೇಳಿದ್ರು. ಆದರೆ ಒಬ್ಬನನ್ನು ಕಿಡ್ನಾಪ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ’ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್ ಆರೋಪಿಸಿದರು.
ಸದಸ್ಯರಿಗೆ ಅವರ ಮನೆಯವರ ಜೊತೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ಸಿನಿಮಾ ಸ್ಟೈಲ್‌ನಲ್ಲಿ ರಾಜಕೀಯ ಮಾಡಿ ಗೆದ್ದಿದ್ದಾರೆ. ವಾಮ ಮಾರ್ಗದಿಂದ ಅಧಿಕಾರ ಹಿಡಿದಿದ್ದಾರೆ. 14ನೇ ವಾರ್ಡ್ ಸದಸ್ಯ ಮಹದೇವು ಉಪಾಧ್ಯಕ್ಷ ಸ್ಥಾನಕ್ಕೆ ನಾಮಿನೇಷನ್ ಹಾಕಬೇಕು ಅಂತ ಬಂದಿದ್ದು. ಆಗ ಅವರನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ದೂರಿದರು. ನಮ್ಮ ಜನಪ್ರಿಯತೆಯಿಂದ ನಮಗೆ 18 ಮತಗಳು ಸಿಕ್ಕಿವೆ. ಗೆದ್ದಿರುವ ಜೆಡಿಎಸ್‌ನವರು ಉತ್ತಮ ಆಡಳಿತ ನೀಡಲಿ. ನಾವು ಅವರಿಗೆ ಸಹಕಾರ ಕೊಡುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.