ನಾಟಿ ವೈದ್ಯಕೀಯ ಪದ್ಧತಿ ಉಳಿಯಲಿ

ಮಂಡ್ಯ: ‘ನಮ್ಮ ಜನಪದ ಮಹಿಳೆಯರು ತಮ್ಮೊಳಗಿನ ವಿದ್ಯೆಯನ್ನು ಇಂದಿನ ಪೀಳಿಗೆಯ ಯುವಜನರಿಗೆ ಕಲಿಸಬೇಕು. ನಾಟಿ ವೈದ್ಯಕೀಯ ಪದ್ಧತಿ ಅತ್ಯಂತ ಅಮೂಲ್ಯವಾಗಿದ್ದು ಅದು ಉಳಿಯಬೇಕು’ ಎಂದು ಸಾಹಿತಿ ಡಾ.ಸುಜಾತಾ ಅಕ್ಕಿ ಹೇಳಿದರು.
ತಾಲ್ಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಜಾನಪದ ಜನ್ನೆಯರು ಸಂಘಟನೆ ವತಿಯಿಂದ ಭಾನುವಾರ ನಡೆದ 4ನೇ ವರ್ಷದ ‘ಜಾನಪದ ಜನ್ನೆ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜಾನಪದ ಜನ್ನೆ ಪ್ರಶಸ್ತಿ ಪಡೆಯುತ್ತಿರುವ ಸಾಕಮ್ಮ ಅವರು ಜನಪದ ಗೀತೆಗಳ ಹಾಡುಗಾರ್ತಿ ಹಾಗೂ ನಾಟಿ ಔಷಧಿ ನೀಡುವ ಜಾನಪದ ಜನ್ನೆಯಾಗಿದ್ದಾರೆ. ಅವರು ತಮ್ಮೊಳಗಿನ ಜ್ಞಾನವನ್ನು ಧಾರೆ ಎರೆದು ಕೊಡಬೇಕು. ಮುಖ್ಯವಾಗಿ ನಾಟಿ ಔಷಧ ನೀಡುವುದನ್ನು ಇತರರಿಗೆ ಕಲಿಸಿಕೊಡಬೇಕು. ಯಾವ ಗಿಡದಲ್ಲಿ ಯಾವ ಔಷಧೀಯ ಗುಣವಿದೆ, ಯಾವ ಸಮಸ್ಯೆಗೆ ಯಾವ ಮೂಲಿಕೆ ಕೊಡಬೇಕು ಎಂಬ ವಿಚಾರವನ್ನು ತಿಳಿಸಬೇಕು’ ಎಂದರು.
‘ನಾಟಿ ಔಷಧ ನೀಡುವವರಲ್ಲಿ ಒಂದು ಮೂಢನಂಬಿಕೆ ಇದೆ. ಇತರರಿಗೆ ಅದನ್ನು ಹೇಳಿಕೊಟ್ಟರೆ ಅದು ಕೈಗೂಡುವುದಿಲ್ಲ, ಅದರ ಮೌಲ್ಯ ಹಾಳಾಗುತ್ತದೆ ಎಂಬ ನಂಬಿಕೆಯಿಂದ ಅದನ್ನು ಬೇರೆಯವರಿಗೆ ಕಲಿಸುವುದಿಲ್ಲ. ಇದು ಮೂಢನಂಬಿಕೆಯಾಗಿದ್ದು ಇದನ್ನು ತೊರೆಯಬೇಕು. ಇತರರಿಗೆ ತಮ್ಮ ವಿದ್ಯೆಯನ್ನು ಕಲಿಸಿದರೆ ಅದು ಬಹುಕಾಲ ಉಳಿಯಲು ಸಾಧ್ಯವಾಗುತ್ತದೆ’ ಎಂದರು.
‘ಜಾನಪದ ಜನ್ನೆಯರು ಸಂಘಟನೆ ಸಮಾನ ಮನಸ್ಕ ಮಹಿಳೆಯರಿಂದ ಹುಟ್ಟಿ ಬಂದ ಸಂಘಟನೆಯಾಗಿದೆ. ಗ್ರಾಮೀಣ ಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಷಯವಾಗಿದೆ. ಕಳೆದ ಕೋವಿಡ್ ಸಂಕಷ್ಟದ ದಿನಗಳನ್ನು ದಾಟಿ ಸಂಘಟನೆ ಮುನ್ನಡೆಯುತ್ತಿದೆ, ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ’ ಎಂದರು.
ಜಾನಪದ ಜನ್ನೆಯರು ಸಂಘಟನೆ ಉಪಾಧ್ಯಕ್ಷೆ ಡಾ.ಎಸ್.ಸಿ.ಮಂಗಳಾ ಮಾತನಾಡಿ ‘ಎಲ್ಲಾ ಉದ್ಯೋಗಸ್ಥ ಮಹಿಳೆಯರು ಸೇರಿ ಜಾನಪದ ಜನ್ನೆಯರು ಸಂಘಟನೆ ಮಾಡಿಕೊಂಡಿದ್ದೇವೆ. ಎಲೆಮರೆ ಕಾಯಿಯಂತೆ ಇರುವ ಮಹಿಳಾ ಸಾಧಕರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿದ್ದೇವೆ. ಪ್ರಶಸ್ತಿ ಪಡೆಯುತ್ತಿರುವ ಸಾಕಮ್ಮ ಅವರು ಅಪಾರ ಜನಪದ ಗೀತೆಗಳಿಗೆ ಜೀವ ತುಂಬಿದ್ದಾರೆ. ಕೃಷಿ ಜೀವನದ ಜೊತೆಜೊತೆಗೆ ನಾಟಿ ಔಷಧ ಪದ್ಧತಿಯನ್ನು ಉಳಿಸಿಕೊಂಡು ಬಂದಿದ್ದಾರೆ’ ಎಂದರು.
‘ಹಿಂದೆ ಹೆಣ್ಣು ಮಕ್ಕಳು ಸಾಧನೆ ಮಾಡುವುದೆಂದರೆ ಕಷ್ಟವೇ ಆಗಿತ್ತು, ಆದರೆ ಈಚೆಗೆ ಕಾಲ ಬದಲಾಗಿದೆ. ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಗುಣಗಳು ಇದ್ದಾಗ ಯಾರೇ ಆದರೂ ಸಾಧನೆ ಮಾಡಬಹುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳುತ್ತಾರೆ. ಹೆಣ್ಣುಮಕ್ಕಳು ವಿಶಾಲವಾದ ಮನೋಭಾವವನ್ನು ಬೆಳೆಸಿಕೊಳ್ಳಬೇಕು’ ಎಂದರು.
ಗಾಣದಾಳು ಗ್ರಾ.ಪಂ ಅಧ್ಯಕ್ಷೆ ರೂಪಾರಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯರಾದ ರೇಖಾ ಅವರು ಸಾಕಮ್ಮ ಅವರಿಗೆ ‘ಜಾನಪದ ಜನ್ನೆ’ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಯುವರಾಜು, ಎಂ.ಬಿ.ಶ್ರೀಧರ್, ಶ್ವೇತಾ, ಸಂಸ್ಥೆಯ ಕಾರ್ಯದರ್ಶಿ ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ, ಖಜಾಂಚಿ ಆರ್.ಪಿ.ಛಾಯಾ, ದೇವಿಕಾ, ರಮ್ಯಾ, ತೇಜಸ್ವಿನಿ, ಉಷಾರಾಣಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.