ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆಗೆ ಅಡ್ಡಿ ಪಡಿಸಬೇಡಿ ಕೈಮುಗಿಯುತ್ತೇನೆ

1
Last Updated 22 ಅಕ್ಟೋಬರ್ 2019, 11:42 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕಿನ 125 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಬಹುಗ್ರಾಮ ಕುಡಿಯುವ ಯೋಜನೆಯಿಂದ ಜಲಾಶಯದ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಶಾಸಕ ಸುರೇಶ್ ಗೌಡ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರು.

ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ಕುಣಿಗಲ್, ನಾಗಮಂಗಲ ಶಾಸಕರು ಮತ್ತು ಮಂಡ್ಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕುಣಿಗಲ್ ಪರ ವಾದ ಮಂಡಿಸಿದ ಮಾಜಿ ಸಚಿವ ನಾಗರಾಜಯ್ಯ ಈ ಯೋಜನೆಗೆ ಆಯ್ಕೆ ಮಾಡಿಕೊಂಡೊರುವ ಜಾಗ ಸೂಕ್ತವಲ್ಲ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು , ಅಣೆಕಟ್ಟೆಗೆ ಅಪಾಯ ಎದುರಾಗಿ ಕುಣಿಗಲ್ ತಾಲ್ಲೂಕಿನ ರೈತರಿಗೆ ಅನ್ಯಾಯವಾಗುತ್ತದೆ ಆದ್ದರಿಂದ ಯೋಜನೆಯನ್ನು ಮತ್ತೆ ತಜ್ಞರಿಂದ ಪರಿಶೀಲನೆ ನಡೆಸಿ ವರದಿ ನೀಡುವವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, ಅಣೆಕಟ್ಟೆಗೆ ಯಾವುದೇ ತಜ್ಞರ ತಂಡ ಭೇಟಿ ನೀಡದೆ ಎಲ್ಲೋ ಕುಳಿತು ಯೋಜನೆಗೆ ಒಪ್ಪಿಗೆ ನೀಡಿದ್ದಾರೆ‌. ಅಲ್ಲದೇ ಸಂಬಂಧಿಸಿದ ಇಲಾಖೆಯಿಂದ ಯಾವುದೇ ಒಪ್ಪಿಗೆ ಇಲ್ಲದೇ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ನನಗೆ ಮೊದಲು ನನ್ನ ಕ್ಷೇತ್ರದ ರೈತರ ಹಿತ ಮುಖ್ಯ ಎಂದರು.

ಆರೋಪ ತಿರಸ್ಕರಿಸಿದ ಶಾಸಕ ಸುರೇಶ್ ಗೌಡ, ‘ಇದೊಂದು ರಾಜ್ಯ ಸರ್ಕಾರದ ಬಹು ಪ್ರಮುಖ ಯೋಜನೆ. ಅಲ್ಲದೇ, ನೀವು ಹೇಳಿದಂತೆ ಎಲ್ಲೋ ಕುಳಿತು, ಸಾಧಕಭಾದಕ ಚರ್ಚಿಸದೇ ಮಾಡಿರುವ ಯೋಜನೆಯಲ್ಲ. ತಜ್ಞರ ತಂಡದೊಂದಿಗೆ ನಾವು ಜಲಾಶಯಕ್ಕೆ ಭೇಟಿ ನೀಡಿ ತೆಪ್ಪಗಳ ಮೂಲಕ ಸಮೀಕ್ಷೆ ನಡೆಸಿದ್ದೇವೆ. ಅನುಮಾನವಿದ್ದರೆ ಅಗತ್ಯವಾದ ಫೋಟೋ ಮತ್ತು ವಿಡಿಯೊಗಳನ್ನು ನೀಡುತ್ತೇವೆ ನೋಡಿಕೊಳ್ಳಿ ಎಂದರು.

ಅಲ್ಲದೇ, ಈ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ಜಾಕ್‌ವೆಲ್ ಅಳವಡಿಕೆ ಮಾಡುತ್ತಿರುವ ಜಾಗದಿಂದ ಯಾವುದೇ ತೊಂದರೆ ಅಣೆಕಟ್ಟೆಗೆ ಆಗುವುದಿಲ್ಲ ಎಂದು ಮುಖ್ಯ ಎಂಜಿನಿಯರ್‌ಗಳು ವರದಿ ನೀಡಿದ್ದಾರೆ ಎಂಬುದನ್ನು ಸಭೆಯ ಗಮನಕ್ಕೆ ತಂದರು.

ಅಲ್ಲದೇ, ಜಲಾಶಯದಲ್ಲಿನ ಶೇ 70 ಭಾಗ ನಮ್ಮ ತಾಲ್ಲೂಕಿನ ಭೂಮಿ ಸೇರಿದೆ. ಈ ಯೋಜನೆಯಿಂದ ನಾವು ಬಳಕೆ ಮಾಡುವುದು ಕೇವಲ ಶೇ 0.17 ನಷ್ಟು ನೀರು ಮಾತ್ರ. ಇದರಿಂದಾಗಿ ಕುಣಿಗಲ್ ರೈತರಿಗಾಗಲೀ , ಅಣೆಕಟ್ಟೆಗಾಗಲೀ ಯಾವುದೇ ಅಪಾಯವಿಲ್ಲ. ನಿಮಗೇನಾದರೂ ಅನುಮಾನವಿದ್ದರೆ ತಜ್ಞರಿಂದ ಪರಿಶೀಲನೆ ನಡೆಸಿ ವರದಿ ನೀಡಿ, ತೊಂದರೆ ಆಗುತ್ತದೆ ಎಂಬ ವರದಿ ಬಂದರೆ ನಾವು ಕಾಮಗಾರಿ ಮುಂದುವರಿಸುವುದಿಲ್ಲ ಎಂದರು.

‘ನನ್ನ ತಾಲ್ಲೂಕಿನ ಜನರಿಗೆ ಇಂದಿಗೂ ಕೆಲವು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೇ,ತಾಲ್ಲೂಕಿನಲ್ಲಿ ಲಭ್ಯವಿರುವ ನೀರಿನಲ್ಲಿ ಪ್ಲೋರೈಡ್ ಅಂಶ ಅಧಿಕವಾಗಿದ್ದು ನನ್ನ ಕ್ಷೇತ್ರದ ಜನ ಹಲವಾರು ತೊಂದರೆಯಿಂದ ಸಾಯುತ್ತಿದ್ದಾರೆ. ದಯಮಾಡಿ ಯೋಜನೆಗೆ ಅಡ್ಡಿ ಪಡಿಸಬೇಡಿ ನಿಮಗೆ ಕೈಮುಗಿಯುತ್ತೇನೆ’ ಎಂದು ಶಾಸಕ ಸುರೇಶ್ ಗೌಡ ಮನವಿ ಮಾಡಿದರು.

ಜೆಡಿಎಸ್ ಮುಖಂಡ ನೆಲ್ಲಿಗೆರೆ ಬಾಲು ಮಾತನಾಡಿ, ಕುಡಿಯುವ ನೀರಿಗೆ ಏಕೆ ಇಷ್ಟು ಅಡ್ಡಿ ಪಡಿಸುತ್ತಿದ್ದೀರಾ ಅಣೆಕಟ್ಟಿನ ಶೇ 70 ಭಾಗ ನಮ್ಮ ತಾಲ್ಲೂಕಿನ ರೈತರ ಜಮೀನು ಇದೆ. ಕುಣಿಗಲ್ ಶಾಸಕರು ಹೇಗೆ ಇದು ನಮ್ಮ ಅಣೆಕಟ್ಟು ಎಂದು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಕುಣಿಗಲ್ ಮತ್ತು ನಾಗಮಂಗಲದ ಬಾಂಧವ್ಯ ಹೊಸದೇನಲ್ಲ. ಇತಿಹಾಸ ಕಾಲದಿಂದಲೂ ಉತ್ತಮ ಸಂಬಂಧ ಇದೆ. ನಿಮ್ಮ ರೈತರಿಗೆ ತೊಂದರೆ ಕೊಟ್ಟು ನಾವು ನೀರು ಕುಡಿಯುವುದಿಲ್ಲ. ನೀವು ದಯಮಾಡಿ ವಾಸ್ತವ ಸ್ಥಿತಿಯನ್ನು ಅರಿಯಬೇಕು. ನಮ್ಮ ಜನರ ಬಾಯಾರಿಕೆ ತಣಿಸಬೇಕು ಎಂದು ನಾಗಮಂಗಲದ ಮುಖಂಡ ರಾಜೇಗೌಡ ಮನವಿ ಮಾಡಿದರು.

ಸಭೆಯಲ್ಲಿ ಎರಡೂ ತಾಲ್ಲೂಕಿನ ಪರ ವಿರೋಧ ಆಲಿಸಿದ ನಂತರ ಮಾತನಾಡಿದ ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್, ‘ನಮ್ಮ ಭಾಗದಲ್ಲಿ ಲಭ್ಯವಿರುವ ನೀರಿನ‌ ಪ್ರಮಾಣ ತುಂಬ ಕಡಿಮೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ. ಸತತ ಪ್ರಯತ್ನದಿಂದ ₹168 ಕೋಟಿಯ ಈ ಯೋಜನೆ ಮಾಡಲಾಗುತ್ತಿದೆ. ಪ್ರತಿವರ್ಷ ಕೇವಲ 8 ರಿಂದ 10 ಎಂಸಿಪಿಟಿ (0.17%) ನೀರನ್ನು ಯೋಜನೆಯಲ್ಲಿ ಬಳಕೆ ಮಾಡಲಾಗುತ್ತದೆ ಅಷ್ಟೇ. ಒಟ್ಟು ನೀರಿಗೆ ಹೋಲಿಸಿದರೆ ತುಂಬಾ ಕಡಿಮೆ. ಅಣೆಕಟ್ಟೆಗೆ ಹಾನಿಯಾಗುವಂತೆ ಮಾಡಲು ಅಧಿಕಾರಿಗಳು ಬುದ್ಧಿಹೀನರಲ್ಲ. ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ನೀವೂ ಸಹ ಯೋಜನೆ ಫಲಕಾರಿಯಾಗಲು ಸಹಕರಿಸಿ’ ಎಂದರು.

ನಾಗಮಂಗಲ ತಹಶಿಲ್ದಾರ್ ಎಂ.ವಿ.ರೂಪಾ, ಉಪವಿಭಾಗಾಧಿಕಾರಿ ಶೈಲಜಾ, ಕುಣಿಗಲ್ ತಹಶೀಲ್ದಾರ್ ವಿಶ್ವನಾಥ್, ತುಮಕೂರು ಜಿಲ್ಲೆ ಎಡಿಸಿ ಚನ್ನಬಸಪ್ಪ, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ವೀರಭದ್ರಯ್ಯ ಮತ್ತು ಎರಡೂ ತಾಲ್ಲೂಕಿನ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT