ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಗಾಡಿ ಬಿಡದ ಪೊಲೀಸ್‌, ಸಿಗ್ನಲ್‌ನಲ್ಲೇ ಪರದಾಡಿದ ತಾಯಿ– ಮಗು

ಹಸುಗೂಸು ಚಳಿಯಲ್ಲಿ ನಡುಗುತ್ತಿದ್ದರೂ ಗಾಡಿ ಬಿಡದ ಪೊಲೀಸ್‌; ಆಕ್ರೋಶ
Last Updated 3 ನವೆಂಬರ್ 2022, 14:47 IST
ಅಕ್ಷರ ಗಾತ್ರ

ಮಂಡ್ಯ: ದಂಡ ಕಟ್ಟದೇ ಮುಂದೆ ತೆರಳಲು ಬಿಡುವುದಿಲ್ಲ ಎಂದು ಟ್ರಾಫಿಕ್‌ ಪೊಲೀಸ್‌ ಪಟ್ಟುಹಿಡಿದ ಕಾರಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಂಪತಿ ಗುರುವಾರ ನಗರದ ಮಹಾವೀರ ವೃತ್ತದಲ್ಲಿ ಪರದಾಡಬೇಕಾಯಿತು. ಎಟಿಎಂನಿಂದ ಹಣ ತರುವವರೆಗೂ ತಾಯಿ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಹಸುಗೂಸು ಸೋನೆಯಲ್ಲೇ ನೆನೆಯುವ ಪರಿಸ್ಥಿತಿ ಉಂಟಾಯಿತು.

ಕೆ.ಆರ್.ಪೇಟೆ ತಾಲ್ಲೂಕಿನ ಯಗಚಕುಪ್ಪೆ ಗ್ರಾಮದ ಅಭಿಷೇಕ್ ಹಾಗೂ ಪತ್ನಿ ತಮ್ಮ ಏಳು ತಿಂಗಳ ಹಸುಗೂಸನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಮಹಾವೀರ ವೃತ್ತದಲ್ಲಿ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದ ಎಎಸ್‌ಐ ರಘುಪ್ರಕಾಶ್‌ ಹೆಲ್ಮೆಟ್‌ ಧರಿಸಿಲ್ಲ ಎಂಬ ಕಾರಣಕ್ಕೆ ದಂಪತಿಯನ್ನು ತಡೆದರು.

‘ಮಗು ಅನಾರೋಗ್ಯದಿಂದ ಬಳಲುತ್ತಿದ್ದು ಗಾಬರಿಯಲ್ಲಿ ಹೆಲ್ಮೆಟ್‌ ತಂದಿಲ್ಲ. ದಂಡ ಕಟ್ಟಲು ಕೂಡ ಹಣ ಇಲ್ಲ, ಗಾಡಿ ಬಿಡಿ’ ಎಂದು ದಂಪತಿ ಪರಿಪರಿಯಾಗಿ ಕೇಳಿಕೊಂಡರು. ₹ 500 ದಂಡ ಕಟ್ಟದಿದ್ದರೆ ಗಾಡಿ ಬಿಡುವುದಿಲ್ಲ, ಮಗುವನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಂತೆ ಎಎಸ್‌ಐ ಪಟ್ಟು ಹಿಡಿದರು.

ಇದರಿಂದ ಗೊಂದಲಕ್ಕೀಡಾದ ಅಭಿಷೇಕ್‌ ಸಿಗ್ನಲ್‌ನಲ್ಲೇ ಮಗು, ಪತ್ನಿಯನ್ನು ಬಿಟ್ಟು ಎಟಿಎಂನಿಂದ ಹಣ ತರಲು ತೆರಳಿದರು. ಹಲವು ಎಟಿಎಂ ಕೇಂದ್ರಗಳಲ್ಲಿ ತಾಂತ್ರಿಕ ತೊಂದರೆ ಇದ್ದ ಕಾರಣ ಹಣ ತರಲು ಅರ್ಧ ಗಂಟೆ ಹಿಡಿಯಿತು. ಈ ವೇಳೆ ತಾಯಿ, ಮಗು ತುಂತುರು ಮಳೆಯಲ್ಲೇ ನೆನೆಯುತ್ತಾ ಪರದಾಡುವಂತಾಯಿತು.

‘ಚಳಿಯಿಂದ ನಡುಗುತ್ತಿದ್ದ ಮಗುವನ್ನು ನೋಡಿದರೂ ಪೊಲೀಸ್‌ ಅಧಿಕಾರಿ ದುರ್ವರ್ತನೆ ತೋರಿದರು. ತಿಂಗಳಲ್ಲಿ 2–3 ದಿನ ಮಾತ್ರ ಹೆಲ್ಮೆಟ್‌ ತಪಾಸಣೆ ಮಾಡುತ್ತಾರೆ, ಈ ವೇಳೆ ಸಿಕ್ಕಿಬಿದ್ದ ಬಡವರ ಜೀವ ಹಿಂಡುತ್ತಾರೆ’ ಎಂದು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT