ಬುಧವಾರ, ಸೆಪ್ಟೆಂಬರ್ 18, 2019
23 °C
ಕಡೇ ಶ್ರಾವಣ ಶನಿವಾರದ ಪ್ರಯುಕ್ತ ವಿಶೇಷ ಪೂಜೆ, ಸಹಸ್ರಾರು ಭಕ್ತರಿಂದ ದೇವರ ದರ್ಶನ

ಮೇಲುಕೋಟೆ: ಸಂಭ್ರಮದ ಕೃಷ್ಣ ಜಯಂತಿ

Published:
Updated:
Prajavani

ಮೇಲುಕೋಟೆ: ಇಲ್ಲಿನ ಚೆಲುವ ನಾರಾಯಣಸ್ವಾಮಿ ಮತ್ತು ಯೋಗ ನರಸಿಂಹಸ್ವಾಮಿ ದೇವಾಲಯಕ್ಕೆ ಕಡೆಯ ಶ್ರಾವಣ ಶನಿವಾರದಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಕೃಷ್ಣ ಜಯಂತಿಯೂ ಜೊತೆಯಾಗಿ ಬಂದಿದ್ದ ಕಡೆಯ ಶ್ರಾವಣದಂದು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಭಕ್ತರ ಅನುಕೂಲಕ್ಕಾಗಿ ಬೆಳಿಗ್ಗೆ 5ರಿಂದ ದೇವಾಲಯದ ಪೂಜಾ ಕೈಂಕರ್ಯ ಆರಂಭಿಸಿ 6 ಗಂಟೆಯಿಂದಲೇ ಎರಡೂ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅನುವು ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಲ್ಲಲಾರದ ಭಕ್ತರು ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗದ ಗರುಡಗಂಬದ ಗರುಡದೇವ ಮತ್ತು ಆಂಜನೇಯನಿಗೆ ಪೂಜೆ ಸಲ್ಲಿಸಿ ತೆರಳುತ್ತಿದ್ದರು.

ಮನೆ ದೇವರ ಒಕ್ಕಲಿನ ಭಕ್ತರು ಕುಟುಂಬದೊಂದಿಗೆ ತಂಡೋಪ ತಂಡವಾಗಿ ಆಗಮಿಸಿ ಕಲ್ಯಾಣಿಯಲ್ಲಿ ಮುಡಿಹರಕೆ ಸಲ್ಲಿಸಿದರು. ಬಿಳಿ ನಾಮ ಬಳಿದುಕೊಂಡು ‘ಗೋವಿಂದ, ಗೋವಿಂದ...’ ಎಂಬ ನಾಮಪಠಿಸುತ್ತಾ ದೇವರ ದರ್ಶನ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಕಡಲೆಪುರಿ, ಸಿಹಿ ತಿಂಡಿಗಳು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳು ಭರ್ಜರಿ ವ್ಯಾಪಾರ ನಡೆಸಿದರು. ಮುಸ್ಲಿಂ ವ್ಯಾಪಾರಿಗಳೂ ಸಹ ರಾಜಬೀದಿಯುದ್ದಕ್ಕೂ ಪಾತ್ರೆ, ಪಾದರಕ್ಷೆ ಇತರ ಸಣ್ಣಪುಟ್ಟ ಅಂಗಡಿ ಇಟ್ಟು ವ್ಯಾಪಾರ ಮಾಡಿದರು.

ಚೆಲುವ ನಾರಾಯಣಸ್ವಾಮಿ ದೇವಾಲಯದ ಮುಂದೆ ಗರುಡಗಂಬದ ಬಳಿ ಪೂಜೆ ಸಲ್ಲಿಸುತ್ತಿದ್ದ ವೇಳೆ ನಾಲ್ಕೈದು ಬೀಡಾಡಿ ದನಗಳು ಭಕ್ತರಿಗೆ ತೀವ್ರ ತೊಂದರೆ ನೀಡುತ್ತಿದ್ದವು. ದನಗಳು ಗರುಡದೇವರ ಮೇಲೆ ಹಾಕಿದ್ದ ಹೂವು, ತುಳಸಿ ಹಾರಗಳನ್ನೇ ಎಳೆದು ತಿನ್ನುತ್ತಾ ಭಕ್ತರಿಗೆ ಕಿರಿಕಿರಿ ಉಂಟುಮಾಡುತ್ತಿದ್ದವು. ಮತ್ತೊಂದೆಡೆ ಕೋತಿಗಳ ಉಪಟಳವೂ ಹೆಚ್ಚಾಗಿತ್ತು. ಯೋಗಾ ನರಸಿಂಹಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರ ಪೂಜಾ ಸಾಮಗ್ರಿಗಳ ತಟ್ಟೆ ಮತ್ತು ಕವರ್‌ಗಳನ್ನು
ಕೋತಿಗಳು ಕಸಿದು ಪರಾರಿಯಾಗುತ್ತಿದ್ದವು.

ಮೇಲುಕೋಟೆಯ ಪ್ರಸನ್ನ ಆಂಜನೇಯ ಸ್ವಾಮಿ ಸನ್ನಿಧಿ, ಮುಕ್ತಿನಾಥ ದೇವಾಲಯ, ಶನಿದೇವರ ದೇಗುಲದಲ್ಲೂ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ಆಂಜನೇಯಸ್ವಾಮಿ ಜಯಂತಿ ಸೇವಾ ಸಮಿತಿ ವತಿಯಿಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಮೇಲುಕೋಟೆ ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಭಕ್ತರ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಎಸ್‌ಐ ಚಿದಾನಂದ ಮಾರ್ಗದರ್ಶನ
ದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು.

ಭಕ್ತರಿಗೆ ಅನ್ನದಾನ

ರಾಮಾನುಜಾಚಾರ್ಯರೇ ಸ್ವತಃ ಭಿಕ್ಷೆ ಸ್ವೀಕರಿಸುತ್ತಿದ್ದ ಇತಿಹಾಸವಿರುವ ಯತಿರಾಜದಾಸರ್ ಗುರುಪೀಠದಲ್ಲಿ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್‌ ಗುರೂಜಿ ಅವರು 2 ಸಾವಿರಕ್ಕೂ ಅಧಿಕ ಭಕ್ತರಿಗೆ ಸಿಹಿಯೊಂದಿಗೆ ಅನ್ನದಾನ ಮಾಡಿದರು. ಬೆಳಿಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ನಿರಂತರವಾಗಿ ಅನ್ನದಾನ ನೆರವೇರಿತು. ಮತ್ತೊಂದೆಡೆ, ಆಂಧ್ರಪ್ರದೇಶದ ನಾರಾಯಣಚಿನ್ನಜೀಯರ್ ಮಠದಲ್ಲೂ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

Post Comments (+)