ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ | ತುರ್ತು ಕಾಮಗಾರಿ ಕೈಗೊಳ್ಳಲು ಸಚಿವ ಸೂಚನೆ

ಪ್ರವಾಹಕ್ಕೆ ಕೊಚ್ಚಿ ಹೋದ ರಸ್ತೆ, ನದಿಯ ತಡೆಗೋಡೆ
Published 3 ಆಗಸ್ಟ್ 2024, 6:24 IST
Last Updated 3 ಆಗಸ್ಟ್ 2024, 6:24 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಕಾವೇರಿ ನದಿ ಉಕ್ಕಿ ಹರಿದು ಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಪಕ್ಕದಲ್ಲಿ ನದಿಯ ತಡೆಗೋಡೆ ಮತ್ತು ಸಂಪರ್ಕ ರಸ್ತೆ ಕೊಚ್ಚಿ ಹೋಗಿದ್ದು, ತುರ್ತಾಗಿ ದುರಸ್ತಿ ಕಾರ್ಯ ಆರಂಭಿಸಬೇಕು ಎಂದು ಸಚಿವ ಎನ್‌. ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಉಂಟಾಗಿರುವ ಹಾನಿಯ ಸ್ಥಳಕ್ಕೆ ಶುಕ್ರವಾರ ಶಾಸಕ ರಮೇಶ ಬಂಡಿಸಿದ್ದೇಗೌಡ ಮತ್ತು ಜಿಲ್ಲಾಧಿಕಾರಿ ಕುಮಾರ ಅವರ ಜತೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿ ಅವರು ಮಾತನಾಡಿದರು.

‘ಸದ್ಯಕ್ಕೆ ವೆಲ್ಲೆಸ್ಲಿ ಸೇತುವೆ ಬಡಾವಣೆ ಇತರೆಡೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿ ಕಾರ್ಯವನ್ನು ಆರಂಭಿಸಬೇಕು. ವಾಹನ ಸಂಚಾರಕ್ಕೆ ಅನುವಾಗುವಂತೆ ಕ್ರಮ ಕೈಗೊಳ್ಳಬೇಕು. ಮಳೆಗಾಲ ಮುಗಿದ ಬಳಿಕ ನದಿಯ ತಡೆಗೋಡೆ ನಿರ್ಮಾಣ ಕಾರ್ಯ ಆರಂಭಿಸಬೇಕು. ಮುಂದಿನ ದಿನಗಳಲ್ಲಿ ಪ್ರವಾಹ ಬಂದರೂ ಸೇತುವೆ ಮತ್ತು ರಸ್ತೆಗೆ ಯಾವುದೇ ತೊಂದರೆಯಾಗದಂತೆ ಯೋಜನೆ ರೂಪಿಸಬೇಕು’ ಎಂದು ತಿಳಿಸಿದರು.

ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ‘ವೆಲ್ಲೆಸ್ಲಿ ಸೇತುವೆ ಈಗಲೂ ಗಟ್ಟಿಮುಟ್ಟಾಗಿದೆ. ಅದರ ಪಕ್ಕದಲ್ಲಿ ನದಿಯ ಸುರಕ್ಷತಾ ಗೋಡೆ ಕುಸಿದೆ. ಸೇತುವೆಯ ಒಂದು ಸಾಮಾನ್ಯ ಗಾತ್ರದ ಕಲ್ಲು ಮಾತ್ರ ಕುಸಿದಿದೆ. ಸೇತುವೆಯ ಎರಡೂ ಬದಿಯಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆಗೆದು ಮತ್ತೆ ಬೆಳೆಯದಂತೆ ಮಾಡಲಾಗುವುದು. 220 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಕಲ್ಲಿನ ಸೇತುವೆಯು ಸ್ಮಾರಕವೂ ಆಗಿದ್ದು, ಅದನ್ನು ಸಂರಕ್ಷಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪುರಸಭೆ ಸದಸ್ಯ ಎಂ.ಎಲ್‌. ದಿನೇಶ್‌ ಮಾತನಾಡಿ, ‘ಕಾವೇರಿ ನದಿಯಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ವೆಲ್ಲೆಸ್ಲಿ ಸೇತುವೆಯ ಪಕ್ಕದಲ್ಲಿ ನೀರು ಹರಿದು ಹೋಗಲು ಮತ್ತೊಂದು ಕಾಲುವೆ ಮಾದರಿಯ ರಚನೆ ಇದೆ. ಈಗ ಅದಕ್ಕೆ ಕಾಯಕಲ್ಪ ನೀಡದರೆ ಸೇತುವೆ ಮೇಲಿನ ಒತ್ತಡ ಕಡಿಮೆಯಾಗಲಿದೆ’ ಎಂದು ಗಮನ ಸೆಳೆದರು.

ಜಿಲ್ಲಾಧಿಕಾರಿ ಕುಮಾರ, ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ, ಲೋಕೋಪಯೋಗಿ ಇಲಾಖೆ ಎಇಇ ಜಸ್ವಂತ್‌, ಪುರಸಭೆ ಸದಸ್ಯ ದಯಾನಂದ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಪ್ರಕಾಶ್‌, ಎಸ್‌ಸಿ ಘಟಕದ ಅಧ್ಯಕ್ಷ ಕೆ.ಶೆಟ್ಟಹಳ್ಳಿ ಗಂಗಾಧರ್‌, ಕಾಂಗ್ರೆಸ್‌ ಮಾಧ್ಯಮ ವಿಭಾಗದ ಜಿಲ್ಲಾ ಸಂಚಾಲಕ ಎಂ. ಪುಟ್ಟೇಗೌಡ, ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಎಂ. ಸುರೇಶ್‌, ಗೌರವಾಧ್ಯಕ್ಷ ಎಂ. ಲೋಕೇಶ್‌, ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ರಜಿನಿ, ಉಪಾಧ್ಯಕ್ಷ ರವಿಕುಮಾರ್‌, ಮುಂಡುಗದೊರೆ ಮೋಹನಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT