ಮಂಗಳವಾರ, ಜನವರಿ 25, 2022
28 °C
ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ; ಉಪ ವಿಭಾಗಾಧಿಕಾರಿ ಐಶ್ವರ್ಯಾ ಹೇಳಿಕೆ

ಇತಿಹಾಸ, ಸಂಸ್ಕೃತಿ ಸಾರುವ ಶಿಲ್ಪಕಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಅಮರಶಿಲ್ಪಿ ಜಕಣಚಾರಿ ಅವರ ಶಿಲ್ಪಕಲಾ ಕೆತ್ತನೆಗಳು ಮಾತನಾಡುತ್ತವೆ. ಸ್ಮಾರಕ, ಗುಡಿ, ಗೋಪುರಗಳಲ್ಲಿ ಅವರ ಕೆತ್ತನೆಗಳನ್ನು ನೋಡಿದರೆ ಪುಸ್ತಕ ಓದಿದ ರೀತಿಯಲ್ಲಿ ಭಾಸವಾಗುತ್ತದೆ. ಅವರ ಶಿಲ್ಪಕಲೆ ಇತಿಹಾಸ, ಸಂಸ್ಕೃತಿಯನ್ನು ಸಾರುತ್ತವೆ’ ಎಂದು ಉಪವಿಭಾಗಾಧಿಕಾರಿ ಐಶ್ವರ್ಯಾ ಹೇಳಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಲೆಯಲ್ಲ ಇದು ಕೆಲೆಯ ಬಲೆಯು ಎಂಬ ಕವಿವಾಣಿ ಶಿಲ್ಪಕಲೆಗಳ ಮಹತ್ವವನ್ನು ಸಾರುತ್ತದೆ. ಬೇಲೂರು, ಹಳೇಬೀಡು ಸೇರಿದಂತೆ ವಿವಿಧ ಕ್ಷೇತ್ರಗಳನ್ನು ನೋಡಿದಾಗ ಕಲ್ಲುಗಳಿಗೆ ಜೀವ ತುಂಬಿರುವುದು ದರ್ಶನವಾಗುತ್ತದೆ. ಸುಂದರ ರಮಣೀಯವಾದ ರೂಪ ಕೊಟ್ಟ ಅಮರ ಶಿಲ್ಷಿ ಜಕಣಾಚಾರಿ ಸೇರಿದಂತೆ ಇತರೆ ಶಿಲ್ಷಿಗಳ ಕೆತ್ತನೆಯು ಇತಿಹಾಸವನ್ನು ತಿಳಿಸುತ್ತವೆ. ವೈಜ್ಞಾನಿಕ ನೈಪುಣ್ಯತೆಯನ್ನು ಸಹ ವಿಗ್ರಹಗಳಲ್ಲಿ ಕಾಣಬಹುದು’ ಎಂದರು.

‘ನಮ್ಮ ಶಿಲ್ಪಕಲೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಪ್ರತಿ ದೇವಾಲಯದಲ್ಲೂ ಶಿಲ್ಪಕಲೆ ರಾರಾಜಿಸುತ್ತದೆ. ರಾಜ ಮನೆತನ, ಸಾಮಾನ್ಯ ಜನರ ಜೀವನ, ಸಮಾಜ, ಸಂಸ್ಕೃತಿ ಶಿಲ್ಪಕಲೆಯ ಮೂಲಕ ತೆರೆದುಕೊಳ್ಳುತ್ತವೆ. ಭಾರತೀಯ ಶಿಲ್ಪ ಕಲೆಯನ್ನು ಉನ್ನತ ಮಟ್ಟಕ್ಕೆ ಏರಿಸಿದ ಜಕಣಾಚಾರಿ ಅವರು ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ’ ಎಂದರು.

‘ಬಾದಾಮಿ, ಐಹೊಳೆಯಲ್ಲಿ ಒಂದೂವರೆ ಸಾವಿರದಷ್ಟೂ ಹಳೆಯ ಸಂಸ್ಕೃತಿ ಇದೆ. ಪಾಶ್ಚಿಮಾತ್ಯ ಶಿಲ್ಪಕಲೆಗಳಿಗೆ ಕೇವಲ 100ರಿಂದ 300 ವರ್ಷಗಳ ಹಿಂದಿನ ಇತಿಹಾಸ ಇರಬಹುದು. ಆದರೆ ನಮ್ಮ ಭಾರತೀಯ ಶಿಲ್ಪಕಲೆಗಳಿಗೆ ಸಾವಿರಾರು ವರ್ಷಗಳ ಹಿಂದಿನ ಗತವೈಭವ ಇದೆ. ಅಲೌಖಿಕವಾದ ವಿದ್ಯೆಯನ್ನೇ ಶಿಲ್ಪಿಗಳು ತಮ್ಮದಾಗಿಸಿಕೊಂಡಿದ್ದರು ಎನಿಸುತ್ತದೆ’ ಎಂದರು.

‘ಅಜಂತಾ, ಎಲ್ಲೋರಾ, ಕೈಲಾಸನಾಥನ ದೇವಸ್ಥಾನ ನೋಡಿದರೆ ಅಂತಹ ಪ್ರತಿಕೃತಿಗಳು ಇಡೀ ಪ್ರಪಂಚದಲ್ಲಿ ಎಲ್ಲೂ ನೋಡಲು ಸಾಧ್ಯವಿಲ್ಲ. ಬೆಟ್ಟವನ್ನೇ ಕೊರದು ರಾಮಾಯಣವನ್ನು ಕಡೆದು ನಿಲ್ಲಿಸಲಾಗಿದೆ. ಶಿಲ್ಪಕಲೆಯ ಶ್ರೀಮಂತಿಕೆ ನಮ್ಮ ದೇಶದಲ್ಲಿ ಎಷ್ಟು ದೊಡ್ಡದಾಗಿತ್ತು ಎಂಬುದು ಶಿಲ್ಪಕಲೆಯ ದರ್ಶನ ಮಾಡಿದಾಗ ತಿಳಿಯುತ್ತದೆ’ ಎಂದರು.

ನಗರಸಭೆ ಅಧ್ಯಕ್ಷ ಎಚ್.ಎಸ್‌.ಮಂಜು ಮಾತನಾಡಿ ‘ಹೊಯ್ಸಳರ ಕಾಲದ ದೇಗುಲಗಳ ವಾಸ್ತು ವಿಸ್ಮಯದ ಜಾದೂಗಾರ ಅಮರಶಿಲ್ಪಿ ಜಕಣಾಚಾರಿ. ಜಗತ್‌ ಪ್ರಸಿದ್ಧ ಬೇಲೂರು, ಹಳೇಬೀಡು ದೇಗುಲಗಳನ್ನು ಶಿಲೆಗಳಲ್ಲಿ ಆಕರ್ಷಿಸುವಂತೆ ಕೆತ್ತನ ಮಾಡಿದ ಕಲಾರಾಧಕರು ಅವರು. ವಿಸ್ಮಯ ಲೋಕವನ್ನೇ ತೆರೆದಿಟ್ಟ ಶಿಲ್ಪಿಯನ್ನು ಇಂದಿಗೂ ಎಂದೆಂದಿಗೂ ನೆನೆಯಬೇಕಿದೆ, ಕೆತ್ತನೆಯ ಮೂಲಕವೇ ಅಮರರಾದ ಜಕಣಾಚಾರಿಯ ಸ್ಮರಣೆಯೇ ಅವಿಸ್ಮರಣಿಯ ಸಂದರ್ಭ ’ಎಂದರು.

ಅಮರಶಿಲ್ಪಿ ಜಕಣಾಚಾರಿ ಕುರಿತು ಪ್ರಾಧ್ಯಾಪಕ ಯೋಗಾನಂದ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಿರುಮಲಾಚಾರ್, ಸತೀಶ್, ಆನಂದ್, ಜಿಲ್ಲಾಧಿಕಾರಿ ಆಪ್ತ ಸಹಾಯಕ ಸ್ವಾಮಿಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.