ಶನಿವಾರ, ಜನವರಿ 28, 2023
20 °C
ದಿಶಾ ಸಮಿತಿ ಸಭೆ; ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಆಕ್ರೋಶ

ಡ್ರೋಣ್‌ ಸರ್ವೆ: ಸಂಸದೆ ಸುಮಲತಾ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ನೀಡಿದ ‘ಡ್ರೋಣ್‌ ಸರ್ವೆ’ ಮಾಹಿತಿ ಸಂಸದೆ ಸುಮಲತಾ ಅವರ ಅಸಮಾಧಾನಕ್ಕೆ ಕಾರಣವಾಯಿತು.

ಹಿರಿಯ ಭೂವಿಜ್ಞಾನಿ ಪದ್ಮಜಾ ವಿಷಯ ಪ್ರಸ್ತಾಪಿಸಿ ‘ಕೆಆರ್‌ಎಸ್‌ ಆಸುಪಾಸಿನಲ್ಲಿ ಅಕ್ರಮ ಗಣಿಗಾರಿಕೆಯಿಂದ ಉಂಟಾಗಿರುವ ರಾಜಧನ ನಷ್ಟ ಪತ್ತೆ ಮಾಡಲು ಡ್ರೋಣ್‌ ಸರ್ವೆ ನಡೆಸಲಾಗುವುದು. ಕರ್ನಾಟಕ ರಾಜ್ಯ ದೂರ ಸಂವೇದಿ ಕೇಂದ್ರ (ಕೆಎಸ್‌ ಆರ್‌ಎಸ್‌ಎಸಿ)ದ ಸಿಬ್ಬಂದಿ ಭೇಟಿ ನೀಡಿ ಜನವರಿ ತಿಂಗಳಲ್ಲೇ ಸಮೀಕ್ಷೆ ನಡೆಸಲಿದ್ದಾರೆ’ ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದೆ ಸುಮಲತಾ ‘ಕಳೆದ 3 ವರ್ಷಗಳಿಂದಲೂ ಡ್ರೋಣ್‌ ಸರ್ವೆ ಮಾಹಿತಿ ಕೇಳಿ ನನಗೂ ಸಾಕಾಗಿದೆ. ಇದು ನಡೆಯುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ಬೇಬಿಬೆಟ್ಟ ಪ್ರದೇಶದಲ್ಲಿ ನಿರಂತರವಾಗಿ ಕಲ್ಲು ಸಾಗಣೆ ಮಾಡಲಾಗುತ್ತಿದೆ. ಗಣಿ ಕಂಪನಿಗಳಿಂದ ರಾಜಧನ ಕೂಡ ವಸೂಲಿಯಾಗಿಲ್ಲ. ಇದರಲ್ಲಿ ಗಣಿ ಇಲಾಖೆ ಅಧಿಕಾರಿಗಳೇ ಶಾಮೀಲಾಗಿರುವ ಆರೋಪವಿದೆ’ ಎಂದರು.

‘ಹಲವು ಕಂಪನಿಗಳು ಕೋಟ್ಯಂತರ ರೂಪಾಯಿ ರಾಜಧನ ಬಾಕಿ ಉಳಿಸಿಕೊಂಡಿದ್ದು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣಗಳ ಸಂಬಂಧ ಅಧಿಕಾರಿಗಳು ಸರಿಯಾಗಿ ಕಾನೂನು ಪ್ರಕ್ರಿಯೆ ಮುಂದುವರಿಸಿಲ್ಲ’ ಎಂದರು.

ಇದಕ್ಕೆ ಉತ್ತರಿಸಿ ಗಣಿ ಇಲಾಖೆ ಅಧಿಕಾರಿಗಳು ‘ಜಿಲ್ಲೆಯಲ್ಲಿ ಒಟ್ಟು ₹ 63.80 ಕೋಟಿ ರಾಜಧನ ಬಾಕಿ ಇದೆ. ಕಳೆದ ವರ್ಷ ₹ 54 ಕೋಟಿ ವಸೂಲಿ ಮಾಡಲಾಗಿದೆ. ಗಣಿ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳ ಸಂಬಂಧ ಸರ್ಕಾರಿ ವಕೀಲರು ಕಾನೂನು ಪ್ರಕ್ರಿಯೆ ಮುಂದುವರಿಸುತ್ತಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಮಾತನಾಡಿ ‘ರಾಜಧನ ವಸೂಲಿ ಗಣಿ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ. ರಾಜಧನ ಪಾವತಿಸದ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಕಂದಾಯ, ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಆದಷ್ಟು ಬೇಗ ಡ್ರೋಣ್‌ ಸಮೀಕ್ಷೆ ನಡೆಸಬೇಕು’ ಎಂದು ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಚರ್ಮಗಂಟು ರೋಗದಿಂದ ಮೃತಪಟ್ಟಿರುವ ರಾಸುಗಳ ಸಂಖ್ಯೆ ಹಾಗೂ ಪರಿಹಾರ ವಿತರಣೆ ಕುರಿತು ಮಾಹಿತಿ ಕೇಳಿದರು. ಉತ್ತರ ನೀಡಿದ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಸುರೇಶ್‌ ‘ಜಿಲ್ಲೆಯಲ್ಲಿ 335 ಜಾನುವಾರುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿವೆ. ಇಲ್ಲಿಯವರೆಗೆ ₹ 18 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. ಇನ್ನೂ 200 ರಾಸುಗಳಿಗೆ ಪರಿಹಾರ ಬಾಕಿ ಇದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣ ಕುಮಾರ್‌ ಮಾಹಿತಿ ನೀಡಿ ‘ನಿರಂತರವಾಗಿ ರೈಸ್‌ಮಿಲ್‌ಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು ಅಕ್ರಮ ಅಕ್ಕಿ ದಾಸ್ತಾನು ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿಯವರೆಗೆ 9 ಪ್ರಕರಣ ದಾಖಲು ಮಾಡಲಾಗಿದ್ದು ₹ 2 ಕೋಟಿ ಮೌಲ್ಯದ 1,444 ಕ್ವಿಂಟಲ್‌ ಅಕ್ಕಿ, 14,839 ಕ್ವಿಂಟಲ್‌ ರಾಗಿ ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಜಿ.ಪಂ ಸಿಇಒ ಶಾಂತಾ ಎಲ್‌ ಹುಲ್ಮನಿ ಇದ್ದರು.

'ಪ್ರಜಾವಾಣಿ' ವರದಿ ಪ್ರಸ್ತಾಪ
ಮಿಮ್ಸ್‌ ಆವರಣದಲ್ಲಿರುವ ಕಿದ್ವಾಯಿ ಕ್ಯಾನ್ಸರ್‌ ಕೇಂದ್ರ ಸ್ಥಗಿತಗೊಂಡಿರುವ ಬಗ್ಗೆ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿರುವ ‘ಕಿದ್ವಾಯಿ ಕೇಂದ್ರಕ್ಕೆ ಕಂಟಕ’ ಸರಣಿ ಸಭೆಯಲ್ಲಿ ಪ್ರಸ್ತಾಪವಾಯಿತು. ಸಮಿತಿ ಸದಸ್ಯೆ ಕೆ.ಪಿ.ಅರುಣಾಕುಮಾರಿ ವಿಷಯ ಪ್ರಸ್ತಾಪಿಸಿದರು. ಸಂಸದೆ ಸಮಲತಾ ಮಾತನಾಡಿ ‘ಕ್ಯಾನ್ಸರ್‌ ಕೇಂದ್ರದ ಯಂತ್ರಗಳು ಹಾಳಾಗುತ್ತಿವೆ ಎಂಬ ಮಾಹಿತಿ ಇದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಮಾತನಾಡಿ ‘ಬೆಂಗಳೂರಿನ ಕೇಂದ್ರ ಕಿದ್ವಾಯಿ ಆಸ್ಪತ್ರೆಯಿಂದ ವಿಕಿರಣ ತಜ್ಞರನ್ನು ನಿಯೋಜನೆ ಮಾಡುವ ಸಂಬಂಧ ಮಾತನಾಡಲಾಗುವುದು. ಬಾಕಿ ಇರುವ ಹಣ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.

ಕಾಲು ಕತ್ತರಿಸಿ ಕೈಗೆ ಕೊಟ್ಟರು...
ಮಿಮ್ಸ್‌ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಕಾಲು ಕತ್ತರಿಸಿ ಅದನ್ನು ಸಂಬಂಧಿಕರ ಕೈಗೆ ಕೊಟ್ಟ ಪ್ರಕರಣ ಸಭೆಯಲ್ಲಿ ಪ್ರತಿಧ್ವನಿಸಿತು. ಕತ್ತರಿಸಿದ ಕಾಲು ನೀಡುವುದಕ್ಕಾಗಿ ಆಸ್ಪತ್ರೆ ಸಿಬ್ಬಂದಿ ಹಣ ಕೇಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳ್ಳಿ ಹರಿದಾಡುತ್ತಿರುವ ವಿಷಯ ಪ್ರಸ್ತಾಪವಾಯಿತು.

ಇದಕ್ಕೆ ಉತ್ತರಿಸಿದ ಮಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್‌ ‘ಕತ್ತರಿಸಿದ ಕಾಲನ್ನು ಸಂಬಂಧಿಕರ ಒತ್ತಾಯದ ಮೇರೆಗೆ ನೀಡಲಾಗಿತ್ತು. ಹಣ ಕೇಳಿದ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ’ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದೆ ಸುಮಲತಾ ‘ಕೇವಲ ಎಚ್ಚರಿಕೆ ನೀಡಿರುವುದು ಸರಿಯಲ್ಲ, ಅವರ ವಿರುದ್ಧ ಕ್ರಮ ಜರುಗಿಸಿ’ ಎಂದು ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು