ಮಂಗಳವಾರ, ಜುಲೈ 27, 2021
28 °C
ವಾರದಿಂದೀಚೆಗೆ 200ಕ್ಕೂ ಹೆಚ್ಚು ಜನರ ಕ್ವಾರಂಟೈನ್‌, ಮತ್ತೆ ಕೋವಿಡ್‌ ಪತ್ತೆ ಸಾಧ್ಯತೆ

ಮತ್ತೆ ಮಂಡ್ಯ ಕಡೆಗೆ ಮುಂಬೈ ವಲಸಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಲಾಕ್‌ಡೌನ್‌ ಸಡಿಲಿಕೆಯಾದ ನಂತರ ಮತ್ತೆ ಜಿಲ್ಲೆಯತ್ತ ಮುಂಬೈ ವಲಸಿಗರು ಹೆಜ್ಜೆ ಇಟ್ಟಿದ್ದಾರೆ. ವಾರದಿಂದೀಚೆಗೆ 200ಕ್ಕೂ ಹೆಚ್ಚು ವಲಸಿಗರು ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿಗೆ ಬಂದಿದ್ದು ಎಲ್ಲರನ್ನೂ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮುಂಬೈ ವಲಸಿಗರು ಜಿಲ್ಲೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿತ್ತು. ಬೆಳಗಾವಿ ಜಿಲ್ಲೆಯ ರಾಜ್ಯದ ಗಡಿಯಲ್ಲೇ ವಲಸಿಗರನ್ನು ತಡೆಯಲಾಗುತ್ತಿತ್ತು. ಸೇವಾಸಿಂಧು ಪೋರ್ಟಲ್‌ನಲ್ಲಿ ಸಲ್ಲಿಸಿದ ಅರ್ಜಿಗೆ ಜಿಲ್ಲಾಡಳಿತ ಅನುಮೂದನೆ ನೀಡಿರಲಿಲ್ಲ. ಆದರೆ ಲಾಕ್‌ಡೌನ್‌ ಸಡಿಲಗೊಂಡ ನಂತರ ಮುಕ್ತ ಅವಕಾಶ ಕಲ್ಪಿಸಲಾಗಿದ್ದು ವಲಸಿಗರು ಜಿಲ್ಲೆಯತ್ತ ಬರುತ್ತಿದ್ದು ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ಕಾರ್ಯಸೂಚಿಯಂತೆ ವಲಸಿಗರಿಗೆ ಈಗ ಸೇವಾಸಿಂಧು ಅನುಮೋದನೆಯ ಅವಶ್ಯಕತೆ ಇಲ್ಲವಾಗಿದೆ. ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡು ರಾಜ್ಯಕ್ಕೆ ಬರಬಹುದಾಗಿದೆ. ಅವರು ಜಿಲ್ಲೆಯ ಕಡೆ ಬರುತ್ತಿರುವ ಮಾಹಿತಿ ದೊರೆಯುತ್ತಿರುವ ಕಾರಣ ಎಲ್ಲರನ್ನೂ ಚೆಕ್‌ಪೋಸ್ಟ್‌ನಲ್ಲೇ ತಡೆದು ಕ್ವಾರಂಟೈನ್‌ ಮಾಡಲಾಗುತ್ತಿದೆ. ಆನೆಗೊಳ ಹಾಗೂ ಬೆಳ್ಳೂರು ಕ್ರಾಸ್‌ ಚೆಕ್‌ಪೋಸ್ಟ್‌ಗೆ ವಲಸಿಗರು ಬರುತ್ತಿದ್ದು ಎಲ್ಲರನ್ನೂ ಪರಿಶೀಲನೆ ನಡೆಸಲಾಗುತ್ತಿದೆ.

‘ಈಗ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ ಕಡಿಮೆಯಾಗಿದ್ದು ಹೊಸದಾಗಿ ವಲಸಿಗರು ಬಂದರೂ ಎಲ್ಲರನ್ನೂ ನಿರ್ವಹಣೆ ಮಾಡಬಹುದು. ಹೊಸ ವಲಸಿಗರ ಕೋವಿಡ್‌ ಪರೀಕ್ಷೆಗೆ ಆದ್ಯತೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

ಕ್ವಾರಂಟೈನ್‌ ಅವಧಿ ಪೂರ್ಣ: ಮೇ ತಿಂಗಳಲ್ಲಿ ಬಂದ ಬಹುತೇಕ ವಲಸಿಗರೆಲ್ಲರೂ ಕ್ವಾರಂಟೈನ್‌ ಅವಧಿ ಮುಗಿಸಿದ್ದು ಮನೆಗೆ ತೆರಳಿದ್ದಾರೆ. ಈಗ ಹೊಸದಾಗಿ ಬರುತ್ತಿರುವ ವಲಸಿಗರನ್ನು ಕೆ.ಆರ್‌.ಪೇಟೆಯ ಸ್ಕೂಲ್‌ ಆಫ್‌ ಇಂಡಿಯಾ ಕಟ್ಟಡದಲ್ಲಿ ಕ್ವಾರಂಟೈನ್‌ ಮಾಡಲಾಗುತ್ತಿದೆ.  ತೀವ್ರಗತಿಯಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದ್ದು 419 ಮಾದರಿಗಳ ಪರೀಕ್ಷೆ ನಿರೀಕ್ಷಿಸಲಾಗುತ್ತಿದೆ.

ಬುಧವಾರವೂ ಇಲ್ಲ: ಜಿಲ್ಲೆಯಲ್ಲಿ ಬುಧವಾರ ಕೂಡ ಒಂದೂ ಕೋವಿಡ್‌–19 ಪ್ರಕರಣ ಪತ್ತೆಯಾಗಿಲ್ಲ. ಇಲ್ಲಿಯವರೆಗೂ 11,951 ಗಂಟಲು ದ್ರವ ಮಾದರಿ ಸಂಗ್ರಹ ಮಾಡಲಾಗಿದೆ. ಅವರಲ್ಲಿ 334 ಮಂದಿಗೆ ಕೋವಿಡ್‌ ಪಾಸಿಟಿವ್‌ ಬಂದಿದ್ದು 11,200 ಮಂದಿಗೆ ನೆಗೆಟಿವ್‌ ಬಂದಿದೆ.

ಮತ್ತೆ 11 ಮಂದಿ ಬಿಡುಗಡೆ

ಕೋವಿಡ್‌–19 ನಿಂದ ಗುಣಮುಖರಾದ 11 ಮಂದಿಯನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೂ 247 ಮಂದಿ ಗುಣಮುಖರಾಗಿದ್ದು 87 ಪ್ರಕರಣಗಳು ಸಕ್ರಿಯವಾಗಿವೆ.

‘ಕೋವಿಡ್‌ ಆಸ್ಪತ್ರೆಯಲ್ಲಿರುವ ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರವಾಗಿ ಎಲ್ಲರೂ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು