ಬುಧವಾರ, ಆಗಸ್ಟ್ 17, 2022
23 °C
ಕಂಬದಹಳ್ಳಿ ಗ್ರಾಮದಲ್ಲಿ ನಡೆದ ಘಟನೆ

ಕೌಟುಂಬಿಕ ಕಲಹ: ಅತ್ತಿಗೆಯ ಕೊಲೆ ಮಾಡಿ ನಾದಿನಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರಗೋಡು: ಕೌಟುಂಬಿಕ ಕಲಹದ ಕಾರಣದಿಂದ ಗರ್ಭಿಣಿ ಅತ್ತಿಗೆಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ನಾದಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲ್ಲೂಕು ಕಂಬದಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದ ಗಿರೀಶ್‌ ಎಂಬವರ ಪತ್ನಿ ಪ್ರಿಯಾಂಕ (32) ಹಾಗೂ ಸಹೋದರಿ ಗೀತಾ (37) ಮೃತಪಟ್ಟವರು.

ಘಟನೆಯ ವಿವರ: ಮಂಡ್ಯ ತಾಲ್ಲೂಕು ಕಂಬದಹಳ್ಳಿ ಗ್ರಾಮದ ಯಜ ಮಾನ ಡಿ.ರಾಮೇಗೌಡ ಅವರ ಪುತ್ರ ಗಿರೀಶ್ ಜತೆ, ಪಾಂಡವಪುರ ತಾಲ್ಲೂಕಿನ ಚೀಕನಹಳ್ಳಿ ಗ್ರಾಮದ ಪ್ರಿಯಾಂಕ ಜತೆ ಏಳು ವರ್ಷದ ಹಿಂದೆ ಮದುವೆಯಾಗಿತ್ತು. ಪ್ರಿಯಾಂಕ ಇತ್ತೀಚೆಗೆ ಗರ್ಭಿಣಿಯಾಗಿದ್ದು, ಗಿರೀಶ್ ತಮ್ಮ ಮನೆಯಲ್ಲೇ ಆರೈಕೆ ಮಾಡುತ್ತಿದ್ದರು. ಗೀತಾ ಅವರನ್ನು ಮಂಡ್ಯ ತಾಲ್ಲೂಕಿನ ಎಚ್.ಮಲ್ಲಿಗೆರೆಗೆ ವಿವಾಹ ಮಾಡಿಕೊಡಲಾಗಿದ್ದು, ಪತಿ ಮತ್ತು ಪುತ್ರ ನಿಧನರಾಗಿದ್ದರಿಂದ ಬೆಂಗಳೂರಿಗೆ ವಲಸೆ ಹೋಗಿದ್ದರು.

ಕೊರೊನಾ ಕಾರಣದಿಂದ ತಿಂಗಳ ಹಿಂದೆ ಕಂಬದಹಳ್ಳಿಗೆ ಬಂದಿದ್ದರು. ಸಣ್ಣ ಪುಟ್ಟ ವಿಚಾರಗಳಿಗೆ ಪ್ರತಿದಿನ ಅತ್ತಿಗೆ–ನಾದಿನಿ ನಡುವೆ ಕಲಹ ನಡೆಯುತ್ತಿದ್ದು, ಶನಿವಾರ ಮಧ್ಯಾಹ್ನ ಅತಿರೇಕಕ್ಕೆ ಹೋಗಿ ಪ್ರಿಯಾಂಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಗೀತಾ ಭಯದಲ್ಲಿ ನೇಣು ಹಾಕಿಕೊಂಡಿದ್ದಾರೆ.

ಘಟನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಸ್ಥಳಕ್ಕೆ ಎಸ್ಪಿ ಡಾ.ಎಂ.ಅಶ್ವಿನಿ, ಎಎಸ್ಪಿ ಧನಂಜಯ ವಿ., ವೃತ್ತ ನಿರೀಕ್ಷಕ ಕ್ಯಾತೇ ಗೌಡ, ಬಸರಾಳು ಠಾಣೆ ಪಿಎಸ್‌ಐ ಜಯಗೌರಿ ಪರಿಶೀಲನೆ ನಡೆಸಿದರು.

ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ಒಪ್ಪಿಸಲಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಕಂಬದಹಳ್ಳಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲು ಮುಂದಾದ ಗ್ರಾಮಸ್ಥರು ಗಿರೀಶ್ ಹಾಗೂ ರಾಮೇಗೌಡನನ್ನು ಕರೆಸಲು ಪ್ರಿಯಾಂಕ ಪೋಷಕರು ಒತ್ತಾಯಿಸಿದರು.

ಈಗಾಗಲೇ ಗಿರೀಶ್, ಮಾವ ರಾಮೇಗೌಡನನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದ್ದು, ಪರಿಹಾರ ಕೊಡಿಸುವ ಬಗ್ಗೆ ಗ್ರಾಮದ ಮುಖ್ಯಸ್ಥರು– ಪೋಷಕರ ನಡುವೆ ಸಂಧಾನ ನಡೆಸಿದ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು.

ಅಂತ್ಯಸಂಸ್ಕಾರಕ್ಕೂ ಮುನ್ನ ಪ್ರಿಯಾಂಕ ಹಾಗೂ 6 ತಿಂಗಳ ಮಗುವಿನ ಭ್ರೂಣ ನೋಡಿದ ಜನ ಮರುಗಿದರು.

ಪ್ರಿಯಾಂಕ ಪೋಷಕರು ತೆರಳಿದ ಬಳಿಕ ಗೀತಾ ಅಂತ್ಯಸಂಸ್ಕಾರ ನಡೆಸಲಾಯಿತು. ಪ್ರಿಯಾಂಕ ಸಹೋದರ ಪ್ರಸನ್ನಕುಮಾರ್ 7 ಜನರ ವಿರುದ್ಧ ದೂರು ನೀಡಿದ್ದು, ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.