ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ ವಿಚಾರದಲ್ಲಿ ರಾಜಕೀಯ ಬೇಡ: ಸಚಿವ ಆರ್‌.ಅಶೋಕ್‌

ಸರ್ಕಾರ ನೋಡಿಕೊಳ್ಳುತ್ತದೆ, ಆರೋಪ– ಪ್ರತ್ಯಾರೋಪ ನಿಲ್ಲಿಸಿ:
Last Updated 15 ಜುಲೈ 2021, 8:40 IST
ಅಕ್ಷರ ಗಾತ್ರ

ಭಾರತೀನಗರ: ‘ಕೆಆರ್‌ಎಸ್‌ ಅಣೆಕಟ್ಟೆ ಸುರಕ್ಷತೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದು ಬೇಡ. ಇದು ನನ್ನ ಕಳಕಳಿಯ ವಿನಂತಿಯಾಗಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

ಪಟ್ಟಣದ ಜಿ. ಮಾದೇಗೌಡ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದ ಜಿ. ಮಾದೇಗೌಡ ಅವರ ಆರೋಗ್ಯ ವಿಚಾರಿಸಿದ ನಂತರ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

‘ನೀರಾವರಿ ತಜ್ಞರು ಈಗಾಗಲೇ ಅಣೆಕಟ್ಟೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜೊತೆ ಈ ಸಂಬಂಧ ಚರ್ಚಿಸಿದ್ದೇನೆ. ವಿಶ್ವೇಶ್ವರಯ್ಯ ಅವರ ತಂತ್ರಜ್ಞಾನದ ಬಗ್ಗೆ ಅನುಮಾನ ಬೇಡ, ಕೆಆರ್‌ಎಸ್‌ ಸುರಕ್ಷಿತವಾಗಿದೆ’ ಎಂದರು.

‘ಲೋಕಸಭಾ ಚುನಾವಣೆ ಮುಗಿದು ಬಹಳ ವರ್ಷಗಳೇ ಆಗಿವೆ. ಇದು ಇಬ್ಬರ ವೈಯಕ್ತಿಕ ಪ್ರತಿಷ್ಠೆ ಆಗುವುದು ಬೇಡ, ಇದು ಜನರ ಆಸ್ತಿ. ಬೇಬಿಬೆಟ್ಟ ಸೇರಿದಂತೆ ಕೆಆರ್‌ಎಸ್ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯನ್ನು ಈಗಾಗಲೇ ತಜ್ಞರು ಸತತವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಅವರು ವರದಿ ಸಲ್ಲಿಸುವವರೆಗೂ ಲೈಸೆನ್ಸ್‌ ಇದ್ದರೂ ಗಣಿಗಾರಿಕೆ ನಡೆಸುವುದನ್ನು ನಿಲ್ಲಿಸಿದ್ದೇವೆ. ಕೆಆರ್‌ಎಸ್‌ ಅಣೆಕಟ್ಟೆಗೆ ಕಿಂಚಿತ್ತೂ ಅಪಾಯವಿಲ್ಲ’ ಎಂದರು.

‘ವೈಯಕ್ತಿಕವಾಗಿ ಇಬ್ಬರ ಹೆಸರನ್ನು ಹೇಳುವುದಿಲ್ಲ. ಅಣೆಕಟ್ಟೆಯಿಂದ ಎಷ್ಟು ಕಿ.ಮೀ. ವ್ಯಾಪ್ತಿಯೊಳಗೆ ಗಣಿಗಾರಿಕೆ ನಿಷೇಧಿಸಬಹುದೆಂದು ತಜ್ಞರು ನಿರ್ಧರಿಸುತ್ತಾರೆ. ವೈಯಕ್ತಿಕವಾಗಿ ಮನಸ್ಸಿಗೆ ಬಂದಂತೆ ಏನೇನೋ ಹೇಳಿದರೆ ಅದಕ್ಕೆ ಅರ್ಥವಿಲ್ಲ. ದಯವಿಟ್ಟು ಇದನ್ನು ಇಲ್ಲಿಗೇ ಮುಕ್ತಾಯ ಮಾಡಿ. ಸರ್ಕಾರ ಇದೆ ನೋಡಿಕೊಳ್ಳುತ್ತದೆ’ ಎಂದರು.

‘ಕೋವಿಡ್‌ ನಿರ್ವಹಣೆ ಬಗ್ಗೆ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಸುತ್ತೂರು ಶ್ರೀಗಳು ಹಾಗೂ ಚುಂಚನಗಿರಿ ಶ್ರೀಗಳು ಶ್ಲಾಘಿಸಿದ್ದಾರೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಯಲಿದ್ದು, ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅಶ್ವತಿ, ಎಸ್‌ಪಿ ಅಶ್ವಿನಿ, ಕಾಂಗ್ರೆಸ್‌ ಮುಖಂಡ ಮಧು ಜಿ. ಮಾದೇಗೌಡ, ಆಸ್ಪತ್ರೆಯ ನಿರ್ದೇಶಕ ರಂಜಿತ್‌, ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ ಪ್ರಸಾದ್‌, ಬಿಜೆಪಿ ರಾಜ್ಯ ಸ್ಲಂ ಮೋರ್ಚಾ ಕಾರ್ಯದರ್ಶಿ ಎಚ್‌.ಆರ್‌. ಅಶೋಕ್‌, ಹುಳುವಾಡಿ ದೇವರಾಜು ಇದ್ದರು.

‘ರೈತರ ಆತ್ಮಸಾಕ್ಷಿಯಂತಿರುವ ಮಾದೇಗೌಡ’
‘ಮಾದೇಗೌಡರು ಇಡೀ ಜೀವನವನ್ನು ರೈತರಿಗೆ ಮುಡುಪಾಗಿಟ್ಟವರು. ನಮ್ಮ ತಂದೆಗೆ ಬಹಳ ಆತ್ಮೀಯರು. ಕಾವೇರಿ ಸಮಸ್ಯೆ ವಿಚಾರದಲ್ಲಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ವೈಯಕ್ತಿಕವಾಗಿ ನನ್ನನ್ನು ತುಂಬಾ ವಿಶ್ವಾಸ, ಪ್ರೀತಿಯಿಂದ ನೋಡಿಕೊಂಡಿದ್ದಾರೆ. ರೈತರ ಆತ್ಮಸಾಕ್ಷಿಯಂತಿದ್ದಾರೆ. ಅವರ ಮಾರ್ಗದರ್ಶನ ಇನ್ನಷ್ಟು ಬೇಕಾಗಿದೆ. ಅವರ ಅನಾರೋಗ್ಯ ಕಳವಳಕಾರಿ. ಆದಷ್ಟು ಬೇಗ ಗುಣಮುಖರಾಗಲಿ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಶಿಸಿದರು.

ಇವನ್ನೂ ಓದಿ

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT