ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೆಮನೆ, ಅನುಮಾನಾಸ್ಪದ ಕೊಠಡಿ ಪರಿಶೀಲನೆ

ವರದಿ ಪರಿಣಾಮ
Published 28 ನವೆಂಬರ್ 2023, 16:53 IST
Last Updated 28 ನವೆಂಬರ್ 2023, 16:53 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ಹಾಡ್ಯ ಹಾಗೂ ಹುಳ್ಳೇನಹಳ್ಳಿ ನಡುವಿನ ಆಲೆಮನೆಯಲ್ಲಿ ಭ್ರೂಣಲಿಂಗ ಪರೀಕ್ಷೆ ನಡೆಯುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಹಾಗೂ ಲೋಕಾಯುಕ್ತ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು.

2 ತಿಂಗಳ ಹಿಂದೆಯೇ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಆಲೆಮನೆಗೆ ಭೇಟಿ ನೀಡಿ ಸ್ಕ್ಯಾನಿಂಗ್‌ ಯಂತ್ರಗಳನ್ನು ವಶಕ್ಕೆ ಪಡೆದಿದ್ದರು. 2 ತಿಂಗಳಿಂದಲೂ ಸ್ಥಳೀಯ ಅಧಿಕಾರಿಗಳು, ಪೊಲೀಸರ ತಂಡ ಆಲೆಮನೆ ಪರಿಶೀಲನೆ ನಡೆಸಿರಲಿಲ್ಲ.

ಕಬ್ಬಿನ ಗದ್ದೆಯ ನಡುವೆ ಇದ್ದ ಆಲೆಮನೆ, ಭ್ರೂಣಲಿಂಗ ಪತ್ತೆ ನಡೆಯುತ್ತಿತ್ತು ಎನ್ನಲಾದ ಅನುಮಾನಾಸ್ಪದ ಕೊಠಡಿಯ ಬಗ್ಗೆ ‘ಪ್ರಜಾವಾಣಿ’ ಮಂಗಳವಾರ ವರದಿ ಪ್ರಕಟಿಸಿತ್ತು.

ವರದಿಯಿಂದ ಎಚ್ಚೆತ್ತ ಅಧಿಕಾರಿಗಳ ತಂಡ ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿತು. ಆಲೆಮನೆ ಮಾಲೀಕರ ವಿಚಾರಣೆ ನಡೆಸಿತು. ಸ್ಥಳೀಯ ಗ್ರಾಮ ಪಂಚಾಯ್ತಿ ಕಚೇರಿಯಿಂದ ಆಲೆಮನೆಗೆ ಪಡೆದಿರುವ ಅನುಮತಿಯನ್ನೂ ಪರಿಶೀಲಿಸಿತು.

‘ಆಲೆಮನೆಯಲ್ಲಿರುವ ಕೊಠಡಿ ಅನುಮಾನಾಸ್ಪದವಾಗಿದ್ದು ಮಾಹಿತಿ ಸಂಗ್ರಹಿಸಲಾಗಿದೆ. ಬೈಯಪ್ಪನಹಳ್ಳಿ ಪೊಲೀಸರು ಬಂದಾಗ ಅವರು ನಮಗೆ ವಿಷಯ ತಿಳಿಸಿರಲಿಲ್ಲ. ಬಂಧಿತ ಆರೋಪಿಗಳಲ್ಲಿ ಮಂಡ್ಯ ಜಿಲ್ಲೆಯವರೂ ಇರುವ ಕಾರಣ ಪರಿಶೀಲಿಸಿದ್ದೇವೆ. 5 ದಿನಗಳಿಂದ ಆಲೆಮನೆ ಕಾರ್ಯಚಟುವಟಿಕೆ ಸ್ಥಗಿತಗೊಂಡಿದೆ. ಈ ಕುರಿತು ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ಹೇಳಿದರು.

‘ಆಲೆಮನೆ ಚಟುವಟಿಕೆ ಜೊತೆಜೊತೆಗೆ ಭ್ರೂಣಲಿಂಗ ಪತ್ತೆ ಪರೀಕ್ಷೆಯೂ ನಡೆಯುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಎರಡು ವರ್ಷಗಳಿಂದ ಮುಕ್ತಾಯವಾಗಿದ್ದ ಆಲೆಮನೆ ಅನುಮತಿಯನ್ನು ಸೆಪ್ಟೆಂಬರ್‌ ತಿಂಗಳಲ್ಲಿ ಮುಂದುವರಿಸಲಾಗಿದೆ. ಲೋಕಾಯುಕ್ತ ರಾಜ್ಯ ಕಚೇರಿಗೆ ಪ್ರಕರಣದ ವರದಿ ನೀಡಲಾಗುವುದು’ ಎಂದು ಲೋಕಾಯುಕ್ತ ಡಿವೈಎಸ್‌ಪಿ ಸುನೀಲ್‌ ಕುಮಾರ್‌ ಹೇಳಿದರು.

ಪ್ರಕರಣದ ಪ್ರಮುಖ ಬಂಧಿತ ಆರೋಪಿಗಳು, ಹುಳ್ಳೇನಹಳ್ಳಿಯ ನವೀನ್‌ ಕುಮಾರ್‌, ಪಾಂಡವಪುರ ತಾಲ್ಲೂಕು ಸುಂಕಾತಣ್ಣೂರು ಗ್ರಾಮದ ನಯನ್‌ ಕುಮಾರ್‌ ಅವರ ಬಗ್ಗೆ ಅಧಿಕಾರಿಗಳು ಸ್ಥಳೀಯರಲ್ಲಿ ವಿಚಾರಿಸಿದರು.

ಇಬ್ಬರೂ ಆರೋಪಿಗಳು ಭಾವ–ಭಾವಮೈದುನರಾಗಿದ್ದು ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಆಲೆಮನೆಯಲ್ಲಿ ಕೊಠಡಿ ಬಾಡಿಗೆ ಪಡೆದು ದಂಧೆ ನಡೆಸುತ್ತಿದ್ದರು. ಚೀನಾದಿಂದ ತರಿಸಿದ್ದ ಅತ್ಯಾಧುನಿಕ ಯಂತ್ರ ಬಳಸಿ ಸರಳ ಪ್ರಕ್ರಿಯೆಯ ಮೂಲಕ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದರು ಎಂಬ ವಿಷಯ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬಿಹಾರ ಮೂಲದ ಆಲೆಮನೆ ಕಾರ್ಮಿಕರನ್ನು ಅಧಿಕಾರಿಗಳು ವಿಚಾರಿಸಿದರು. ‘ಶನಿವಾರ ಹಾಗೂ ಭಾನುವಾರ ಇಲ್ಲಿಗೆ ಮಹಿಳೆಯರು ಬರುತ್ತಿದ್ದರು’ ಎಂದು ಕಾರ್ಮಿಕರು ಮಾಹಿತಿ ನೀಡಿದರು. ಕಾರ್ಮಿಕರೆಲ್ಲರೂ ಭಯಪೀಡಿತರಾಗಿದ್ದು ತಮ್ಮೂರಿಗೆ ತೆರಳಲು ಸಿದ್ಧರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT