ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ₹ 80ರ ಗಡಿಗೆ ಬಂದಿಳಿದ ಕೆ.ಜಿ ಈರುಳ್ಳಿ!

ಬೆಳ್ಳುಳ್ಳಿ ಬೆಲೆಯಲ್ಲಿ ಇಳಿಕೆ ಇಲ್ಲ, ₹ 5ಕ್ಕೆ ಕಟ್ಟು ಕೊತ್ತಂಬರಿ
Last Updated 7 ಜನವರಿ 2020, 10:27 IST
ಅಕ್ಷರ ಗಾತ್ರ

ಮಂಡ್ಯ: ನೂರರ ಗಡಿ ಮುಟ್ಟಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಕೆ.ಜಿ ಈರುಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ದಪ್ಪ ಈರುಳ್ಳಿ ಕೆ.ಜಿ.ಗೆ ₹80, ಮಧ್ಯಮ ಗ್ರಾತ್ರದ ಈರುಳ್ಳಿ ₹60ರಂತೆ ಸೋಮವಾರ ನಗರದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು.‌

ಉಳಿದಂತೆ ತೇವಾಂಶ ಇರುವ ಈರುಳ್ಳಿ ಕೆ.ಜಿ.₹40 ಇದೆ. ಅದು ತೀರಾ ಸಣ್ಣದಾಗಿದ್ದು, ಬಹುತೇಕರು ₹60ಬೆಲೆಯ ಮಧ್ಯಮ ಗಾತ್ರದ ಈರುಳ್ಳಿಯನ್ನೇ ಖರೀದಿಸುತ್ತಿದ್ದರು. ಎರಡು ಮೂರು ದಿನಗಳಲ್ಲಿ ಬೆಲೆ ಇನ್ನೂ ಕಡಿಮೆಯಾಗಬಹುದು ಎಂಬ ಆಲೋಚನೆಯಲ್ಲಿ ಜನರು ಕಡಿಮೆ ಪ್ರಮಾಣದ ಈರುಳ್ಳಿ ಖರೀದಿ ಮಾಡುತ್ತಿರುವುದು ಸಾಮಾನ್ಯವಾಗಿತ್ತು.

‘ಯೂರೋಪ್‌, ಟರ್ಕಿ ಈರುಳ್ಳಿ ಮಾರುಕಟ್ಟೆಗೆ ಬಂದಿತ್ತು. ಆದರೆ ಉತ್ತರ ಕರ್ನಾಟಕದ ಈರುಳ್ಳಿ ಮುಂದೆ ರುಚಿಯಲ್ಲಿ ಅದು ಸಾಟಿ ಇಲ್ಲ. ಹೀಗಾಗಿ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಪಾನೀಪುರಿ, ಚುರುಮುರಿ ಮಾರಾಟಗಾರರು ಈರುಳ್ಳಿಯನ್ನೇ ಬಳಸುತ್ತಿಲ್ಲ. ಬೆಲೆ ಹೆಚ್ಚಾದ ಕಾರಣದಿಂದ ಕಬಾಬ್‌ ಅಂಗಡಿಗಳಲ್ಲಿ ಈರುಳ್ಳಿ ಮಾಯವಾಗಿ ಸೌತೇಕಾಯಿ ಅದರ ಸ್ಥಾನ ತುಂಬಿತ್ತು’ ಎಂದು ವರ್ತಕ ತೌಫಿಕ್‌ ಹೇಳಿದರು.

ಈ ವಾರ ಸೊಪ್ಪುಗಳ ಬೆಲೆಯೂ ಕಡಿಮೆಯಾಗಿದ್ದು ಕಟ್ಟು ಕೊತ್ತಂಬರಿ ₹ 5 ಕ್ಕೆ ಮಾರಾಟವಾಗುತ್ತಿದೆ. ಸಬಸಿಗೆ ₹10, ಪುದೀನಾ, ಕಿಲಕಿರೆ, ಕರಿಬೇವು ₹5, ಪಾಲಾಕ್‌, ದಂಟು ₹4 ರಂತೆ ಮಾರಾಟವಾಗುತ್ತಿವೆ. ತರಕಾರಿ, ಹೂವುಗಳ ಬೆಲೆಗಳಲ್ಲಿ ಏರಿಳಿತ ಕಂಡಿದೆ. ಮಾರುಕಟ್ಟೆಗೆ ಕೊಳ್ಳೇಗಾಲ ಸೇರಿದಂತೆ ವಿವಿಧೆಡೆಗಳಿಂದ ಸೊನೆ ಅವರೇಕಾಯಿ ಅವಕ ಬಂದಿದ್ದು, ಕೆ.ಜಿ.ಗೆ ₹30ರಂತೆ ಮಾರಾಟವಾಗುತ್ತಿದೆ. ಇನ್ನೇನು ಸಂಕ್ರಾಂತಿ ಹತ್ತಿರ ಬರುತ್ತಿದ್ದು, ಅವರೆಕಾಯಿ ಕಡಿಮೆಯಾಗುತ್ತಿದೆ. ಮಾರುಕಟ್ಟೆಯಲ್ಲದೆ ನಗರದ ವಿವಿ ರಸ್ತೆ, ಹೊಸಹಳ್ಳಿ ವೃತ್ತ ಸೇರಿದಂತೆ ವಿವಿಧೆಡೆ ಅಲ್ಲಲ್ಲಿ ಸೊನೆ ಅವರೇಕಾಯಿ ಮಾರಾಟ ನಡೆಯುತ್ತಿದೆ.

ಸೌತೇಕಾಯಿ ಅವಕ ಹೆಚ್ಚಾದ ಕಾರಣ ಬೆಲೆಯಲ್ಲಿ ಇಳಿಕೆ ಕಂಡಿದೆ. 5 ದಪ್ಪ ಸೌತೇಕಾಯಿ ₹ 20, ಮಧ್ಯಮ ಗಾತ್ರದ 3 ಸೌತೇಕಾಯಿ ₹10ರಂತೆ ಮಾರಾಟವಾಗುತ್ತಿವೆ. ಬೀಟರೂಟ್, ಹೀರೇಕಾಯಿ, ಚೌಳೀಕಾಯಿ, ಹಸಿರು ಮೆಣಸಿನಕಾಯಿ, ಬದನೇಕಾಯಿ, ದಪ್ಪ ಮೆಣಸಿನಕಾಯಿ, ಆಲೂಗಡ್ಡೆ ಕೆ.ಜಿಗೆ ₹40, ಸುವರ್ಣಗೆಡ್ಡೆ, ಬೀನ್ಸ್‌, ಭಜ್ಜಿ ಮೆಣಸಿನಕಾಯಿ ₹30, ಹೂಕೋಸು ಒಂದಕ್ಕೆ ₹30, ಟೊಮೆಟೊ, ಮೂಲಂಗಿ ₹20, ಶುಂಠಿ ₹60, ಬೆಳ್ಳುಳ್ಳಿ ನಾಟಿ ₹250, ಫಾರಂ ₹200 ರಂತೆ ಬಿಕರಿಯಾಗುತ್ತಿದೆ.

ಕೆ.ಜಿ. ಸೇಬು ₹100–120, ಬೀಜ ಸಹಿತ ದ್ರಾಕ್ಷಿ ₹120, ಖರ್ಬೂಜ ₹30, ಸಪೋಟ ₹40, ಮೂಸಂಬಿ, ದಾಳಿಂಬೆ ₹80, ಅನಾನಸ್‌ ಒಂದಕ್ಕೆ ₹ 30, ನಾಗಪುರ ಕಿತ್ತಳೆ ₹50, ನಾಟಿ ಕಿತ್ತಳೆ ₹30, ಏಲಕ್ಕಿ ಬಾಳೆ, ಪಚ್ಚಬಾಳೆ ₹30ರಂತೆ ಮಾರಾಟವಾಗುತ್ತಿದೆ.

ಮಾರುಕಟ್ಟೆಗೆ ಸೇವಂತಿಗೆ ಹೂವು ಪೂರೈಕೆ ಕಡಿಮೆ ಆದ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಏರಿಕೆ ಕಂಡಿದ್ದು ಮಾರು ಸೇವಂತಿ ₹40, ಮಾರು ಮಲ್ಲಿಗೆ, ಮರಳೆ ₹100, ಕನಕಾಂಬರ ₹40–50, ಕಾಕಡ, ಗಣಗಲೆ ₹30, ಬಿಡಿ ಹೂವು ಕೆ.ಜಿ. ಮಲ್ಲಿಗೆ ₹1ಸಾವಿರ, ಮರಳೆ ₹800, ಕಾಕಡ ₹250ರಂತೆ ಬಿಕರಿಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT