ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಲ ಗ್ರಾಮದ ಮಲ್ಲೇಶ್ವರಸ್ವಾಮಿ ದೇವಾಲಯದ ಗೋಡೆ ಮೇಲೆ ಮೂಡಿದ ಭಕ್ತಿಯ ಚಿತ್ತಾರ

ಮಂಗಲ ಗ್ರಾಮದ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಬಣ್ಣದ ಸೊಬಗು, ಇದು ರಾಜ್ಯದಲ್ಲೇ ಮೊದಲು
Last Updated 18 ಸೆಪ್ಟೆಂಬರ್ 2021, 13:45 IST
ಅಕ್ಷರ ಗಾತ್ರ

ಮಂಡ್ಯ: ಜಾತ್ರೆಯ ಸಂಭ್ರಮ, ರಥೋತ್ಸವದ ವೈಭವ, ಜಾನಪದ ಕಲೆಗಳ ಚಿತ್ತಾರ, ದೇವರ ಆರಾಧನೆ, ಭಕ್ತಿಯ ಅನಾವರಣ, ಸಂಗೀತದ ರಸದೌತಣ... ತಾಲ್ಲೂಕಿನ ಮಂಗಲ ಗ್ರಾಮದ ಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಜಾತ್ರೆ ನಿತ್ಯೋತ್ಸವವಾಗಿದೆ.

ದೇವಾಲಯದ ಗೋಡೆಗಳ ಮೇಲೆ ಮೂಡಿಬಂದಿರುವ ಬಣ್ಣದ ಚಿತ್ತಾರಗಳು ಜಾತ್ರೆಯನ್ನು ನಿತ್ಯೋತ್ಸವವನ್ನಾಗಿಸಿವೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಭೂಮಿ ಬೆಳಗು ಸಾಂಸ್ಕೃತಿಕ ಸಂಘಟನೆ ಸಹಯೋಗದಲ್ಲಿ ನಡೆಯುತ್ತಿರುವ ಭಿತ್ತಿಚಿತ್ರ ರಚನಾ ಕಲಾಶಿಬಿರದಲ್ಲಿ ಚಿತ್ರಗಳ ಸೊಬಗು ದೇವಾಲಯದ ಗೋಡೆಗಳ ಮೇಲೆ ಪಡಿಮೂಡಿವೆ.

ಹೌದು, ಶ್ರೀ ಮಲ್ಲೇಶ್ವರ ಸ್ವಾಮಿ ದೇವರೆಂದರೆ ಗ್ರಾಮದ ಮನೆಮನಗಳಲ್ಲಿ ಭಕ್ತಿ ನವಿರೇಳುತ್ತದೆ. ಅಂತಹ ದೇವಾಲಯದ ಗೋಡೆಗಳಲ್ಲಿ ದೇವರ ಸ್ವರೂಪ ಎದ್ದು ಬಂದಂತಿದೆ. ಜಾನಪದ ಕಲೆಗಳ ಚಿತ್ತಾರ ಮೂಡಿಸುವ ಮೂಲಕ ಸಂಸ್ಕೃತಿಯನ್ನು ಕಟ್ಟಿಕೊಡುವ ಕೆಲಸವನ್ನು ಕಲಾವಿದರು ಕಳೆದೆರಡು ದಿನಗಳಿಂದ ನಿರಂತರವಾಗಿ ಮಾಡುತ್ತಿದ್ದಾರೆ. ಚಿತ್ರ ಕಲಾವಿದರಾದ ಕೆ.ಎನ್‌.ಶಂಕರಪ್ಪ, ಮಲ್ಲಿಕಾರ್ಜುನ್, ಎನ್‌.ಚೇತನ್, ಬಿ.ಯೋಗೇಶ್, ಪಿ.ರಾಜೇಶ್‌, ಆರ್‌.ಎನ್‌.ಅಭಿಷೇಕ್‌ ಬಣ್ಣ ಹಾಗೂ ಕುಂಚದ ಜೊತೆ ನಿಂತಿದ್ದಾರೆ.

18ಕ್ಕೂ ಹೆಚ್ಚು ಚಿತ್ರಗಳು ಗೋಡೆಗಳ ಮೇಲೆ ಮೂಡಿಬಂದಿವೆ. ಗಣೇಶನ ಚಿತ್ರದಿಂದ ಆರಂಭವಾಗಿ ನಾಗರಕಲ್ಲು ಸಮೇತ ಲಿಂಗದ ಚಿತ್ರ, ದೇವರು ತಪಸ್ಸು ಆಚರಿಸುತ್ತಿರುವ ವರ್ಲಿ ಶೈಲಿ, ಆನೆ, ಹಸು, ಶಿವ ಮತ್ತು ಕೃಷ್ಣನ ಚಿತ್ರಗಳು ಮನಸೂರೆಗೊಳ್ಳುತ್ತಿವೆ. ಜಾತ್ರೆಯ ಸಮಯದಲ್ಲಿ ರಥದ ಸಮೇತ ಜನರು ಹೊರಡುವ ಚಿತ್ರ ಕಣ್ಣಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ.

ಮಲ್ಲೇಶ್ವರಸ್ವಾಮಿಯನ್ನೇ ಹೋಲುವ ಮೂರ್ತಿಯ ಚಿತ್ರ ಮತ್ತಷ್ಟು ಭಕ್ತಿ ಹೆಚ್ಚಿಸಿದೆ. ದೇವರ ಉತ್ಸವ ಬಿಂಬಿಸುವ ಚಿತ್ರಗಳು ಅಮೋಘ ಎನಿಸಿವೆ. ಅರ್ಧನಾರೀಶ್ವರ, ಮಂಗಳೂರು, ಉಡುಪಿ ಭಾಗದಲ್ಲಿ ಪೂಜಿಸುವ ಭೂತಾರಾಧನೆಯ ಚಿತ್ರವಂತೂ ನೋಡುಗರಲ್ಲಿ ಭಕ್ತಿ ಭಾವವನ್ನು ನೂರ್ಮಡಿಗೊಳಿಸುತ್ತದೆ. ಬಸವ ಮೂರ್ತಿ ಚಿತ್ರಗಳು ಗಮನ ಸೆಳೆಯುತ್ತವೆ.

‘ದೇವಾಲಯಗಳಲ್ಲಿ ಭಿತ್ತಿ ಚಿತ್ರ ಬರೆಯುತ್ತಿರುವುದು ಸಂತೋಷ ಎನಿಸಿದೆ. ಆಧುನಿಕ ದೇವಾಲಯದಲ್ಲಿ ಗೋಡೆ ಬರಹಕ್ಕೆ ಅಷ್ಟಾಗಿ ಪ್ರಾಮುಖ್ಯತೆ ಕೊಡುವುದಿಲ್ಲ, ಆದರೆ, ಇದೊಂದು ಅವಕಾಶ ಎಂಬಂತೆ ಪ್ರೀತಿಯಿಂದ ಚಿತ್ರ ಬರೆಯುತ್ತಿದ್ದೇನೆ. ಅಧ್ಯಾತ್ಮ ಹಿನ್ನೆಲೆಯ ಜೊತೆಗೆ ಜಾನಪದ ಶೈಲಿಯಲ್ಲಿ ಭಕ್ತರ ಗಮನ ಸೆಳೆಯುವ ಉದ್ದೇಶವಿದೆ’ ಎಂದು ಮಂಡ್ಯದ ಕಲಾವಿದ ಎನ್‌.ಚೇತನ್ ತಿಳಿಸಿದರು.

‘ಜಾನಪದ ಬೇರು ಬಿಂಬಿಸಿ ಹೊಸತನದ ರೂಪ ಕೊಡುವ ನಿಟ್ಟಿನಲ್ಲಿ ಚಿತ್ರಕಲಾವಿದರು ಸಾಗುತ್ತಿದ್ದಾರೆ. ದೇವಾಲಯದ ಗೋಡೆಗಳ ಮೇಲೆ ದೇವರ ಚಿತ್ರ ಸಮೇತ ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಬಿಡಿಸಲು ಅವಕಾಶ ಕೊಟ್ಟವರಿಗೆ ಧನ್ಯತೆ ತಿಳಿಸಬೇಕು’ ಎಂದು ಹಿರಿಯ ಚಿತ್ರಕಲಾ ಕಲಾವಿದ ಕೆ.ಎನ್‌.ಶಂಕರಪ್ಪ ತಿಳಿಸಿದರು.

‘ಭಿತ್ತಿಚಿತ್ರದ ರಚನಾ ಕಲಾಶಿಬಿರವು ಸೆ.17 ಆರಂಭಗೊಂಡಿದ್ದು 4 ದಿನ ನಡೆಯಲಿದೆ. ದೇವಾಲಯದ ಗೋಡೆಯ ಮೇಲೆ ಚಿತ್ರ ಬರಹದ ಶಿಬಿರ ಆಯೋಜನೆಗೊಂಡಿರುವುದು ರಾಜ್ಯದಲ್ಲೇ ಮೊದಲು. ಕರ್ನಾಟಕ ಲಲಿತಾಕಲಾ ಅಕಾಡೆಮಿಯ ಅಧ್ಯಕ್ಷ ಡಿ.ಮಹೇಂದ್ರ ಅವರು ಸಮ್ಮತಿ ನೀಡಿ ಸ್ಥಳೀಯ ಕಲಾವಿದರನ್ನು ಬೆಂಬಲಿಸಿದ್ದಾರೆ, ಭೂಮಿಬೆಳಗು ಸಾಂಸ್ಕೃತಿಕ ಸಂಘ ಹಾಗೂ ಮಂಗಲ ಗ್ರಾಮಸ್ಥರ ಪ್ರೋತ್ಸಾಹ ಮರೆಯುವಂತಿಲ್ಲ’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ವಿನೋದ್‌ಕುಮಾರ್ ತಿಳಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ಭಕ್ತಿಪೂರ್ವಕ ಸ್ಥಳವಾದ ದೇವಾಲಯಗಳ ಗೋಡೆಮೇಲೆ ಚಿತ್ರ ರಚಿಸುವ ಮೂಲಕ ಅಕಾಡೆಮಿ ಸಂಸ್ಕೃತಿ ಕಟ್ಟುವ ಕೆಲಸ ಮಾಡುತ್ತಿದೆ. ಈ ನೂತನ ಕಾರ್ಯ ಮಂಗಲ ಗ್ರಾಮದಿಂದ ಆರಂಭವಾಗಿದೆ. ಗ್ರಾಮಸ್ಥರ ಪ್ರೀತಿ, ಸಹಕಾರದಿಂದ ಈ ಶಿಬಿರ ನಡೆಯುತ್ತಿದೆ’ ಎಂದು ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ ಯೋಗೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT