ಪಾಂಡವಪುರ: ಕೇಂದ್ರದ ಎನ್‌ಡಿಎ ಸರ್ಕಾರ ಕರ್ನಾಟಕಕ್ಕೆ ಎಸಗುತ್ತಿರುವ ಅನ್ಯಾಯ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಜನಾಂದೋಲನಕ್ಕೆ ಬೆಂಬಲ ಸೂಚಿಸಿದೆ ಎಂದು ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಾಂಡವಪುರ ಪಟ್ಟಣದಿಂದ ಬೃಹತ್ ಬೈಕ್ ರ್‍ಯಾಲಿ ಮೂಲಕ ಮಂಡ್ಯ ನಗರದಲ್ಲಿ ನಡೆಯಲಿರುವ ಜನಾಂದೋಲನ ಸಭೆಯಲ್ಲಿ ರೈತ ಸಂಘದ ಕಾರ್ಯಕರ್ತರು ಭಾಗವಹಿಸಲಿದ್ದಾರೆ’ ಎಂದರು.
‘ಪಾಂಡವಪುರ ಪಟ್ಟಣದ ಐದು ದೀಪ ವೃತ್ತದಿಂದ ಪ್ರಾರಂಭಗೊಳ್ಳುವ ಬೈಕ್ ರ್‍ಯಾಲಿಯು ದುದ್ದ ಹೋಬಳಿಯ ವಿ.ಸಿ.ಫಾರಂಗೆ ತಲುಪಲಿದ್ದು, ಬಳಿಕ ಮಂಡ್ಯ ನಗರವನ್ನು ಪ್ರವೇಶಿಸಲಿದೆ’ ಎಂದು ತಿಳಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಎಸ್.ದಯಾನಂದ, ಮುಖಂಡರಾದ ಎಸ್.ಜಯರಾಮು, ಎಚ್.ಎಲ್.ಮುರುಳೀಧರ್, ಸಿ.ಕೆ.ಪುಟ್ಟೇಗೌಡ ಪಾಲ್ಗೊಂಡಿದ್ದರು.