ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಭೂಮಿಗೆ ನಕಲಿ ದಾಖಲೆ: ಪ್ರತಿಭಟನೆ

Last Updated 9 ಜುಲೈ 2020, 9:23 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಸರ್ಕಾರಿ ಗೋಮಾಳ ಮತ್ತು ಅರಣ್ಯ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿದ ಅಧಿಕಾರಿಗಳು ಹಣವಂತರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಎದುರು ಸುಮಾರು ಒಂದೂವರೆ ತಾಸು ಪ್ರತಿಭಟನೆ ನಡೆಯಿತು. ಕಂದಾಯ, ಅರಣ್ಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕೆಲಕಾಲ ತಾಲ್ಲೂಕು ಕಚೇರಿ ಮುಖ್ಯ ದ್ವಾರವನ್ನು ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

‘ತಾಲ್ಲೂಕಿನ ಸಿದ್ದಾಪುರ, ತರೀಪುರ, ಕಾಳೇನಹಳ್ಳಿ ಇತರೆಡೆ ಸರ್ಕಾರಿ ಗೋಮಾಳ ಮತ್ತು ಅರಣ್ಯ ಭೂಮಿಯನ್ನು ಅಧಿಕಾರಿಗಳು ಪ್ರಭಾವಿಗಳ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಆದರೆ ಹತ್ತಾರು ವರ್ಷಗಳಿಂದ ದರಖಾಸ್ತು ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ 5–1 (ದುರಸ್ತು) ಮಾಡಲು ಮೀನ ಮೇಷ ಎಣಿಸುತ್ತಿದ್ದಾರೆ. 3 ಎಕರೆಗೆ ಸಾಗುವಳಿ ಚೀಟಿ ಪಡೆದಿರುವ ಜನ ಪ್ರತಿನಿಧಿಗಳು 10ರಿಂದ 15 ಎಕರೆ ಜಮೀನು ಅತಿಕ್ರಮಿಸಿದ್ದಾರೆ. ಈ ಅಕ್ರಮಗಳಿಗೆ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಬೆಂಬಲವಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಆಗ್ರಹಿಸಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ವಿದ್ಯುತ್‌ ಇಲಾಖೆ ಖಾಸಗೀಕರಣ ನೀತಿ, ಎಪಿಎಂಸಿ ಕಾಯ್ದೆ ರದ್ದತಿ ಪ್ರಕ್ರಿಯೆ ಜನ ವಿರೋಧಿಯಾಗಿವೆ. ಉದ್ದೇಶಿತ ತಿದ್ದುಪಡಿ, ಖಾಸಗೀಕರಣ ಮತ್ತು ರದ್ದತಿ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ಸಂಘಟ ಜಿಲ್ಲಾ ಘಟಕದ ಅಧ್ಯಕ್ಷ ಬೋರಾಪುರ ಶಂಕರೇಗೌಡ ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ. ನಾಗೇಂದ್ರಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಂಠಯ್ಯ, ದಲಿತ ಸಂಘರ್ಷ ಸಮಿತಿಯ ತೂಬಿನಕೆರೆ ಪ್ರಸನ್ನ, ಗಂಜಾಂ ರವಿಚಂದ್ರ, ಕುಬೇರಪ್ಪ, ಮೋಹನಕುಮಾರ್‌, ಡಿ.ಎಸ್‌ ಚಂದ್ರಶೇಖರ್‌, ತಮ್ಮಣ್ಣ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT