ಗುರುವಾರ , ಡಿಸೆಂಬರ್ 3, 2020
23 °C
ಸಿಐಟಿಯು ಜಿಲ್ಲಾ ಸಮಾವೇಶ; ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎನ್‌.ಉಮೇಶ್‌ ಆರೋಪ

ಕಾಯ್ದೆ ತಿದ್ದುಪಡಿಯಿಂದ ಕೃಷಿಕರು, ಕಾರ್ಮಿಕರಿಗೆ ದ್ರೋಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಕೃಷಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು, ಬಡವರು, ಶ್ರಮಿಕರು ಹಾಗೂ ಕಾರ್ಮಿಕರಿಗೆ ದ್ರೋಹ ಮಾಡಿವೆ’ ಎಂದು ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎನ್‌.ಉಮೇಶ್‌ ಆರೋಪಿಸಿದರು.

ಸಿಐಟಿಯು ವತಿಯಿಂದ ನಗರದ ಗಾಂಧಿಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಶ್ರಮಿಕ ವರ್ಗಕ್ಕೆ ಅನ್ಯಾಯ ಮಾಡಿ ಅವರ ವಿರುದ್ಧ ಕಠಿಣ, ಕಠೋರ ನೀತಿಗಳನ್ನು ತರಲು ಸರ್ಕಾರಗಳು ಮುಂದಾಗಿವೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವುದೇ ಕೇಂದ್ರ ಸರ್ಕಾರದ ಏಕೈಕ ಉದ್ದೇಶವಾಗಿದೆ. ಇದರ ವಿರುದ್ಧ ಸಮಗ್ರ ಹೋರಾಟ ರೂಪಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನ.26ರಂದು ಹಮ್ಮಿಕೊಳ್ಳಲಾಗಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಎಲ್ಲರೂ ಬೆಂಬಲ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ದೇಶದ ಆರ್ಥಿಕತೆ ಉಳಿಯಬೇಕಾದರೆ ಅಸಂಘಟಿತ ಕಾರ್ಮಿಕರು, ರೈತರು, ಬಡವರು, ಶ್ರಮಿಕರು ಉಳಿಯಬೇಕು. ದೇಶದಲ್ಲಿರುವ ಬಡಜನರ ಬೇಡಿಕೆಗಳು ಈಡೇರದಿದ್ದರೆ ದೇಶ ಆರ್ಥಿಕವಾಗಿ ಮುಂದುವರಿಯಲು ಸಾಧ್ಯವಿಲ್ಲ. ಕೃಷಿಕರು, ಕಾರ್ಮಿಕರ ಪರವಾಗಿರುವ ಕಾಯ್ದೆ ತಿದ್ದುಪಡಿ ತಡೆಯಬೇಕು. ಅದಕ್ಕಾಗಿ ಸಂಘಟಿತ ಹೋರಾಟ ಅವಶ್ಯವಾಗಿದೆ’ ಎಂದರು. ‌

‘ಲಾಕ್‌ಡೌನ್‌ ಸಮಯದಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಶಾಲೆಗಳ ಬಿಸಿಯೂಟಕ್ಕಾಗಿ ಗೋದಾಮುಗಳಲ್ಲಿ ಸಂಗ್ರಹಿಸಿರುವ ಅಕ್ಕಿ, ಗೋಧಿ ಹಾಗೂ ಇತರೆ ಆಹಾರ ಪದಾರ್ಥಗಳು ಇಲಿ, ಹಗ್ಗಣದ ಪಾಲಾಗುತ್ತಿವೆ. ಶಾಲೆಗಳು ನಡೆಯದ ದಿನಗಳಲ್ಲಿ ಗೋದಾಮಿನಲ್ಲಿದ್ದ ಆಹಾರ ಪದಾರ್ಥಗಳನ್ನು ಕೂಲಿ ಕಾರ್ಮಿಕರು, ಬಡವರಿಗೆ ಹಂಚುವ ಕೆಲಸ ಮಾಡಬಹುದಾಗಿತ್ತು. ಸರ್ಕಾರಗಳು ಇಂತಹ ಕೆಲಸ ಮಾಡಲಿಲ್ಲ’ ಎಂದು ವಿಷಾದಿಸಿದರು.

‘ಪೌಷ್ಟಿಕ ಆಹಾರ ತಿನ್ನಬೇಕು ಎಂದು ವೈದ್ಯರು ಹೇಳುತ್ತಾರೆ, ಆದರೆ, ಜನರಿಗೆ ಪೌಷ್ಟಿಕ ಆಹಾರ ಎಲ್ಲಿ ಸಿಗುತ್ತಿದೆ? ಅಂತರರಾಜ್ಯ ಕಾರ್ಮಿಕರು, ನಗರ ಪ್ರದೇಶಕ್ಕೆ ಬಂದಿರುವ ಅಸಂಘಟಿತ ಕಾರ್ಮಿಕರಿಗೆ ಅನ್ನ ನೀಡುವ ಕೆಲಸ ಮಾಡಬೇಕು. ಪ್ರತಿಯೊಬ್ಬರಿಗೂ ತಲಾ 10 ಕೆ.ಜಿ ಅಕ್ಕಿ ವಿತರಣೆ ಮಾಡಬೇಕು. ಸಂಕಷ್ಟ ಸಮಯದಲ್ಲಿ ಕಾರ್ಮಿಕರ ಬದುಕು ಹದಗೆಟ್ಟಿದೆ. ಉದ್ಯೋಗ ಖಾತ್ರಿ ಯೋಜನೆಯ ಕೆಲಸವನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಸಾರ್ವಜನಿಕ ಉದ್ದಿಮೆಗಳ ಮಾರಾಟ ಮಾಡಲು ಕೇಂದ್ರ ಸರ್ಕಾರ ತುದಿಗಾಲಿನ ಮೇಲೆ ನಿಂತಿದೆ. ಒಮ್ಮೆ ಸೋತ ಸುಗ್ರೀವಾಜ್ಞೆಯನ್ನು ಮತ್ತೆ ಹೊರಡಿಸುವುದು ಸಂವಿಧಾನಕ್ಕೆ ಮಾಡುವ ದ್ರೋಹವೆಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಆದರೂ ಬಿಜೆಪಿ ಸರ್ಕಾರ ಮತ್ತೆ ಸುಗ್ರೀವಾಜ್ಞೆ ಹೊರಡಿಸಿ, ರಾಜ್ಯಪಾಲರ ಸಹಿ ಪಡೆಯಲು ಹೊರಟಿರುವುದು ದ್ರೋಹ. ಈ ನಯವಂಚಕ ಸರ್ಕಾರಕ್ಕೆ ಏನು ಹೇಳಬೇಕು ಎನ್ನುವುದು ತಿಳಿಯುತ್ತಿಲ್ಲ’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಶಿವಕುಮಾರ್ , ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಎಂ.ಸಿ.ಬಾಲಕೃಷ್ಣ, ಸತ್ಯಾನಂದಸ್ವಾಮಿ, ವಿಜಯ್, ಟಿ.ಎಲ್.ಕೃಷ್ಣೇಗೌಡ, ಪ್ರಮೀಳಕುಮಾರಿ, ಚಂದ್ರಶೇಖರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.