ಗುರುವಾರ , ಅಕ್ಟೋಬರ್ 29, 2020
28 °C
ಮಹಿಳಾ ಮುನ್ನಡೆ, ಸಿಐಟಿಯು ಕಾರ್ಯಕರ್ತರಿಂದ ಆಕ್ರೋಶ

ಮಂಡ್ಯ: ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮಹಿಳಾ ಮುನ್ನಡೆ ಸಂಘಟನೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಉಳಿಗಾಲವಿಲ್ಲವಾಗಿದೆ. ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರವಾಗಿದೆ. ಇದನ್ನು ತಡೆಗಟ್ಟುವಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವತ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೊಲೆ ಆರೋಪಿಗಳಿಗೆ ಕೂಡಲೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಯುವತಿಯ ಮೃತದೇಹವನ್ನು ಅಲ್ಲಿಯ ಪೊಲೀಸರು ಅನುಮಾನಾಸ್ಪದವಾಗಿ ರಾತ್ರೋರಾತ್ರಿ ಅಂತ್ಯಕ್ರಿಯೆ ನೆರವೇರಿಸಿದ್ಧಾರೆ. ಕುಟುಂಬ ಸದಸ್ಯರು ಕೂಡ ಪಾಲ್ಗೊಳ್ಳದಂತೆ ಮಾಡಿದ್ದಾರೆ. ಈ ಕುರಿತು ಜವಾಬ್ದಾರಿಯುತ ರಾಜಕಾರಣಿಗಳು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ. ಸಮಾನತೆಯನ್ನು ನಿರಾಕರಿಸುವ ಮನೋಭಾವ ಎಲ್ಲೆಡೆ ಬೆಳೆಯುತ್ತಿದೆ. ಶಿಕ್ಷಣದಲ್ಲಿ ಪ್ರಗತಿಪರ ಚಿಂತನೆಗಳ ಪಠ್ಯವನ್ನು ಕಿತ್ತುಹಾಕಿ ಮನುವಾದಿ ಮನೋಭಾವ ಬೆಳೆಸಲಾಗುತ್ತಿದೆ ಎಂದು ಆರೋಪಿಸಿದರು.

ಅತ್ಯಾಚಾರ ನಡೆದ ಮೇಲೆ ಯಾವುದೋ ಒಂದು ಸಮುದಾಯವನ್ನು ಗುರಿ ಮಾಡುವಂಥ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಲಿಂಗ ತಾರತಮ್ಯದ ಮೇಲೆ ಕಡಿವಾಣ ಹಾಕಬೇಕು. ಹೆಣ್ಣು ಮಕ್ಕಳ ಉಡುಪು, ಚಲನವಲನಗಳಿಂದ ಅತ್ಯಾಚಾರ ಹೆಚ್ಚಾಗುತ್ತಿದೆ ಎಂದು ಹೇಳುವವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಮಹಿಳಾ ಮುನ್ನಡೆಯ ಕಾರ್ಯಕರ್ತರಾದ ಪೂರ್ಣಿಮಾ, ಕಮಲ, ಅಂಜಲಿ, ಈಶ್ವರಿ, ಸೌಮ್ಯಾ, ಶಿಲ್ಪಾ, ಲತಾಶಂಕರ್, ಎನ್.ಸುಬ್ರಮಣ್ಯ, ಸಿದ್ದರಾಜು, ಎನ್.ನಾಗೇಶ್, ಪ್ರಸನ್ನತೂಬಿನಕೆರೆ, ಎ.ಎಲ್.ಕೆಂಪೂಗೌಡ ಇದ್ದರು.

ಸಿಐಟಿಯು ಪ್ರತಿಭಟನೆ: ಹಾಥರಸ್‌ ಜಿಲ್ಲೆಯ ಸಾಮೂಹಿಕ ಅತ್ಯಾಚಾರ ಖಂಡಿಸಿ ಸಿಐಟಿಯು ಕಾರ್ಯಕರ್ತರು ನಗರ ದಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಉತ್ತರ ಪ್ರದೇಶದ ಉನ್ನವ್, ಕತುವಾ ಮತ್ತು ಹಾಥರಸ್‌ ಬಳಿ ನಡೆದಿರುವ ಸರಣಿ ಅತ್ಯಾಚಾರಗಳನ್ನು ತಡೆಗಟ್ಟುವಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಪರಾಧಗಳನ್ನು ಪೋಷಿಸುವ ಹಾಗೂ ಅಪರಾಧಿಗಳನ್ನು ರಕ್ಷಿಸುವ ಕೆಲಸವನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೇವಲ ಮಾತುಗಳಿಗಷ್ಟೇ ಸೀಮಿತವಾಗಿದೆ. ಮಹಿಳಾ ವಿರೋಧಿಯಂತೆ ಸಚಿವರುಗಳು ಮಾತನಾಡುತ್ತಿದ್ದಾರೆ. ಅತ್ಯಾಚಾರ ಘಟನೆಗಳು ಮರುಕಳಿಸದಂತೆ ತಡೆಯಬೇಕಾದರೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಹೆಣ್ಣು ಮಕ್ಕಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಚಂದ್ರಶೇಖರ್, ಪುಟ್ಟಮ್ಮ, ಗಾಯತ್ರಿ, ವೆಂಕಟಲಕ್ಷ್ಮಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು