ಇಲ್ಲದ ಸ್ಪಷ್ಟನೆ: ಮುಂದುವರಿದ ಅಹೋರಾತ್ರಿ ಧರಣಿ

ಮಂಗಳವಾರ, ಜೂಲೈ 16, 2019
26 °C
6ನೇ ದಿನಕ್ಕೆ ತಲುಪಿದ ಪ್ರತಿಭಟನೆ; ನಾಲೆಗೆ ನೀರು ಬರುವವರೆಗೆ ಹೋರಾಟ

ಇಲ್ಲದ ಸ್ಪಷ್ಟನೆ: ಮುಂದುವರಿದ ಅಹೋರಾತ್ರಿ ಧರಣಿ

Published:
Updated:
Prajavani

ಮಂಡ್ಯ: ಮಂಗಳವಾರ ದೆಹಲಿಯಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಹೀಗಾಗಿ ಕಾವೇರಿ ನೀರಾವರಿ ನಿಗಮದ ಎದುರು ನಡೆಯುತ್ತಿರುವ ಅರ್ಧಿಷ್ಟಾವಧಿ ಮುಷ್ಕರವನ್ನು ಮುಂದುವರಿಸುವುದಾಗಿ ರಾಜ್ಯ ರೈತಸಂಘದ ಮುಖಂಡರು ತಿಳಿಸಿದರು.

ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವು ಹೆಚ್ಚಾದರೆ ನೀರು ಹರಿಸಬಹುದು ಎಂದು ಪ್ರಾಧಿಕಾರ ತಿಳಿಸಿದೆ. ಕಳೆದ ಬಾರಿ ನಡೆದ ಸಭೆಯಲ್ಲೂ ಇದೇ ನಿರ್ಧಾರ ಕೈಗೊಂಡಿತ್ತು. ಹೀಗಾಗಿ ಸಮಿತಿಯ ತೀರ್ಮಾನದಲ್ಲಿ ರೈತರ ಹಿತ ಕಾಯುವ ಕೆಲಸ ಆಗಿಲ್ಲ. ನಮ್ಮ ರಾಜ್ಯದ ಪ್ರತಿನಿಧಿಗಳು ಪ್ರಾಧಿಕಾರದ ಎದುರು ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಮನದಟ್ಟು ಮಾಡಿಕೊಡಲು ವಿಫಲರಾಗಿದ್ದಾರೆ. ಹೀಗಾಗಿ ನಾಲೆಗಳಿಗೆ ನೀರು ಹರಿದುಬರುವವರೆಗೂ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಪತ್ರಿಭಟನಾಕಾರರು ಹೇಳಿದರು.

ರೈತಸಂಘ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ‘ಕೇವಲ ಒಂದು ವಾರ ನೀರು ಹರಿಸಿದರೆ ಬೆಳೆದು ನಿಂತಿರುವ ಬೆಳೆಯನ್ನು ರೈತರು ಉಳಿಸಿಕೊಳ್ಳುತ್ತಾರೆ. ಇಂತಹ ಸ್ಥಿತಿಯಲ್ಲಿ ನೀರು ಬಿಡದೇ ಇದ್ದರೆ ರೈತರಿಗೆ ಅಪಾರ ನಷ್ಟವಾಗುತ್ತದೆ. ಸದ್ಯ ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದು ಬಿಡಲು ಯಾವುದೇ ಕಾನೂನಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳು ಇಲ್ಲ. ಕೂಡಲೇ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.

‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಾಧಿಕಾರದ ಯಾವುದೇ ಸೂಚನೆ ಇಲ್ಲದೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಾಲೆಗೆ ನೀರು ಹರಿಸುವಂತೆ ಸೂಚನೆ ಕೊಟ್ಟಿದ್ದರು. ಈಗಲೂ ಅದೇ ರೀತಿ ನೀರು ಹರಿಸುವಂತೆ ಸೂಚಿಸಬೇಕು. ಪ್ರಾಧಿಕಾರದ ನಿರ್ಧಾರಕ್ಕೆ ಕಾಯುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳೇ ನಿರ್ಧಾರ ಕೈಗೊಳ್ಳಲು ಅವಕಾಶವಿದೆ. ಆದರೆ ಎಲ್ಲರೂ ಪ್ರಾಧಿಕಾರದ ಕಡೆ ಕೈ ತೋರಿಸುತ್ತಿದ್ದಾರೆ. ರೈತರ ಸ್ಥಿತಿ ಅರಿತು ಕಡಿಮೆ ನೀರು ಇದ್ದಾಗಲೂ ನೀರು ಹರಿಸಿದ ಹಲವು ಉದಾಹರಣೆಗಳು ಇವೆ’ ಎಂದು ಹೇಳಿದರು.

ಸಿ.ಎಂ.ನಿವಾಸಕ್ಕೆ ಮುತ್ತಿಗೆ: ‘ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ, ಮುಖ್ಯಮಂತ್ರಿ ಪುತ್ರ ಕೆ.ನಿಖಿಲ್‌ ಸೋಲುಂಡ ಕಾರಣ ಎಚ್‌.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ರೈತರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳು ಮನಸ್ಸು ಮಾಡಿದರೆ ಈ ತಕ್ಷಣ ನೀರು ಹರಿಸಬಹುದು. ತಮಗಿರುವ ಅಧಿಕಾರವನ್ನು ಬಳಸಿಕೊಂಡು ತಕ್ಷಣ ನೀರು ಕೊಟ್ಟು ಬೆಳೆ ಉಳಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಾವಿರಾರು ರೈತರ ಜೊತೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು ಶೀಘ್ರ ದಿನಾಂಕ ಪ್ರಕಟಿಸಲಾಗುವುದು’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಮಾತನಾಡಿ ‘ಕಾವೇರಿ ನೀರಿನ ವಿಚಾರದಲ್ಲಿ ರಾಜಕಾರಣಿಗಳು ದೆಹಲಿಯತ್ತ ಕೈತೋರಿಸುವುದನ್ನು ಬಿಡಬೇಕು. ರಾಜ್ಯ ಸರ್ಕಾರದ ಬಳಿ ಕೀ ಇದ್ದು ಅವರು ಅದನ್ನು ಬಳಸಿ ಜಿಲ್ಲೆಯ ರೈತರಿಗೆ ನೀರು ಕೊಡಬೇಕು. ಕಬ್ಬು, ಬತ್ತ ಕಟಾವಿನ ಹಂತಕ್ಕೆ ಬಂದಿದ್ದು ಇನ್ನೊಂದು ಕಟ್ಟು ನೀರಿನ ಅವಶ್ಯಕತೆ ಇದೆ. ಈಗ ನೀರು ಬಿಡದಿದ್ದರೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾತಿ ತಕ್ಷಣ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತಸಂಘದ ಮಹಿಳಾ ಅಧ್ಯಕ್ಷೆ ಲತಾ ಶಂಕರ್, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಮುಖಂಡರಾದ ಲಿಂಗಪ್ಪಾಜಿ, ಸಿದ್ದೇಗೌಡ, ಪಿ.ಕೆ.ನಾಗಣ್ಣ, ಚಂದ್ರು, ನಾಗರಾಜು ಇದ್ದರು.

ಬಾರದ ಸಂಸದೆ: ಅಸಮಾಧಾನ
ಕಳೆದ ಆರು ದಿನಗಳಿಂದ ರೈತರು ಕಾವೇರಿ ನೀರಾವರಿ ನಿಗಮದ ಎದುರು ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಸಿಲು, ಮಳೆ, ಚಳಿ ಎನ್ನದೇ ಕಾವೇರಿ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಸಂಸದೆ ಸುಮಲತಾ ಅವರು ರೈತರ ಬಳಿ ಬಂದು ಅವರು ಕಷ್ಟ, ಸುಖ ಕೇಳಿಲ್ಲ ಎಂದು ಕೆಲ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸಭಾ ಅಧಿವೇಶನಕ್ಕೆ ತೆರಳಿರುವ ಅವರು ರಜೆಯ ದಿನವಾದರೂ ಬಂದು ಹೋಗಬಹುದಾಗಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಅವರ ಮನೋಭಾವ ಬದಲಾಗಿದೆ. ಅನಾರೋಗ್ಯದ ನೆಪವೊಡ್ಡಿ ಜವಾಬ್ದಾರಿಯಿಂದ ನುಣಿಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಚುನಾವಣೆಯಲ್ಲಿ ಸೋಲು ಕಂಡ ಕೆ.ನಿಖಿಲ್‌ ಸೇರಿ ಜೆಡಿಎಸ್‌ ಮುಖಂಡರು ‘ಹೊಸ ಸಂಸದರು ನೀರು ಬಿಡಿಸುತ್ತಾರೆ’ ಎಂದು ಹೇಳಿಕೆ ನೀಡಿದ್ದಾರೆ. ಅದರ ಬಗ್ಗೆಯೂ ಸುಮಲತಾ ಪ್ರತಿಕ್ರಿಯೆ ನೀಡಬೇಕಾಗಿತ್ತು ಎಂದರು.

ಮಾಹಿತಿ ನೀಡದ ಎಂಜಿನಿಯರ್‌ಗಳು: ದರ್ಶನ್‌
‘ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನದಲ್ಲಿ ಸ್ಪಷ್ಟವಾಗಿ ಏನಿದೆ ಎಂಬ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಮಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಮೇಲ್ನೋಟಕ್ಕೆ ಸಿಕ್ಕ ಮಾಹಿತಿಯಿಂದ ನಮಗೆ ನಿರ್ಧಿಷ್ಟವಾಗಿ ಏನೂ ತಿಳಿಯುತ್ತಿಲ್ಲ. ಕಾನೂನಾತ್ಮಕವಾಗಿ, ತಾಂತ್ರಿಕವಾಗಿ ಪ್ರಾಧಿಕಾರ ಏನು ಹೇಳಿದೆ ಎಂಬ ಬಗ್ಗೆ ಅಧಿಕಾರಿಗಳು ತಿಳಿಸಿಲ್ಲ. ಹೀಗಾಗಿ ಧರಣಿ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !