ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಹೆದ್ದಾರಿ ಬಂದ್‌, ಲಘು ಲಾಠಿ ಪ್ರಹಾರ

ಹನುಮಧ್ವಜ ತೆರವು ಪ್ರಕರಣ: ಕೆರಗೋಡಿನಿಂದ ಡಿ.ಸಿ ಕಚೇರಿವರೆಗೆ ಪಾದಯಾತ್ರೆ
Published 29 ಜನವರಿ 2024, 15:29 IST
Last Updated 29 ಜನವರಿ 2024, 15:29 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು, ಸಂಘ ಪರಿವಾರದ ಸಾವಿರಾರು ಸದಸ್ಯರು ಗ್ರಾಮದಿಂದ ಮಂಡ್ಯದ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ಬೃಹತ್‌ ಪಾದಯಾತ್ರೆ ನಡೆಸಿದರು.

ಬೆಳಿಗ್ಗೆ 8 ಗಂಟೆಗೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. 15 ಕಿ.ಮೀ ದಾರಿಯುದ್ದಕ್ಕೂ ಕಾರ್ಯಕರ್ತರು ಕೇಸರಿ ಮಾರ್ಗವನ್ನೇ ನಿರ್ಮಿಸಿದ್ದರು. ಬಾವುಟ, ಬ್ಯಾನರ್‌, ಬಂಟಿಂಗ್‌ಗಳನ್ನು ಕಟ್ಟಿದ್ದರು. ರಸ್ತೆಬದಿಯ ಮನೆಗಳಿಗೆ, ಕಟ್ಟಡಗಳಿಗೆ ಹನುಮ ಧ್ವಜ ಕಟ್ಟಿ ‘ಜೈ ಶ್ರೀರಾಮ್‌’ ಘೋಷಣೆ ಕೂಗಿದರು.

ಡಿ.ಜೆ, ಬ್ಯಾಂಡ್‌ ಸೆಟ್‌ ಸದ್ದಿನೊಂದಿಗೆ ಮೆರವಣಿಗೆ ಸಾಗಿತು. ಕೆಲವರು ಬೈಕ್‌, ಆಟೊ, ಕಾರುಗಳ ರ‍್ಯಾಲಿ ನಡೆಸಿದರು. ಮಾರ್ಗದಲ್ಲಿ ಎಚ್‌.ಡಿ.ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಅವರ ಫ್ಲೆಕ್ಸ್‌ಗಳು ರಾರಾಜಿಸಿದವು. ಮರಿಲಿಂಗನದೊಡ್ಡಿ, ಹುಲಿವಾನ, ಸಾತನೂರು, ಚಿಕ್ಕಮಂಡ್ಯ ಹಾಗೂ ನಗರದ ವಿವಿಧೆಡೆ ಮುಖಂಡರಿಗೆ ಹಾರ ಹಾಕಿ ಸ್ವಾಗತ ಕೋರಲಾಯಿತು.

ವಿವಿಧೆಡೆ ಲಘು ಉಪಹಾರ, ಮಜ್ಜಿಗೆ ಪಾನಕ ವಿತರಿಸಲಾಯಿತು. ಮೆರವಣಿಗೆಯಲ್ಲಿದ್ದ ಶ್ರೀರಾಮನ ಬೃಹತ್‌ ಭಾವಚಿತ್ರಕ್ಕೆ ಗ್ರಾಮೀಣ ಮಹಿಳೆಯರು, ಮಕ್ಕಳು ಪೂಜೆ ಸಲ್ಲಿಸಿದರು. ಈಡುಗಾಯಿ, ಕರ್ಪೂರ ಹಚ್ಚಿದರು.

ಶಾಸಕನ ಭಾವಚಿತ್ರಕ್ಕೆ ಬೆಂಕಿ; ಮಂಡ್ಯ ರಸ್ತೆಯ ವಿವಿಧೆಡೆ ಶಾಸಕ ಗಣಿಗ ರವಿಕುಮಾರ್‌ ಅವರ ಭಾವಚಿತ್ರಗಳನ್ನು ಹರಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಚಪ್ಪಲಿಯಿಂದ ಹೊಡೆದು ಘೋಷಣೆ ಕೂಗಿದರು.

ನಗರದ ಮಹಾವೀರ ವೃತ್ತ, ಜೆಸಿ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ,  ಗಣಿಗ ರವಿಕುಮಾರ್‌ ಭಾವಚಿತ್ರವುಳ್ಳ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದರು. ಬೆಂಕಿ ನಂದಿಸಲು ಬಂದ ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಮಹಾವೀರ ವೃತ್ತದಲ್ಲಿ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರಿಂದ ಕೆಲ ಪ್ರತಿಭಟನಾಕಾರರು ಗಾಯಗೊಂಡರು.

ಮಹಾವೀರ ವೃತ್ತದಿಂದ ಜೆ.ಸಿ.ವೃತ್ತದವರೆಗೂ ಪ್ರತಿಭಟನಾಕಾರರು ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಘೋಷಣೆ ಕೂಗಿದರು. ಅರ್ಧಗಂಟೆಗೂ ಹೆಚ್ಚು ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸರು ಮಾರ್ಗ ಬದಲಾಯಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಪಾದಯಾತ್ರೆಯಲ್ಲಿ ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಕೆ.ಸಿ.ನಾರಾಯಣಗೌಡ, ಪ್ರೀತಂಗೌಡ, ಕಲ್ಯಾಣ ರಾಜ್ಯದ ಪ್ರಗತಿ ಪಕ್ಷದ ಸ್ಥಾಪಕ, ಶಾಸಕ ಗಾಲಿ ಜನಾರ್ಧನ ರೆಡ್ಡಿ, ಜೆಡಿಎಸ್‌ ಶಾಸಕ ಎಚ್‌.ಟಿ.ಮಂಜು, ಮುಖಂಡರಾದ ಸುರೇಶ್‌ಗೌಡ, ಅನ್ನದಾನಿ ಇದ್ದರು. ಮಾರ್ಗದುದ್ದಕ್ಕೂ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಡಿ.ಸಿ ಕಚೇರಿಗೆ ಭದ್ರತೆ; ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ರಸ್ತೆ ಪ್ರವೇಶಿಸಿದಾಗಲೂ ಸಂಪೂರ್ಣ ಕೇಸರಿ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕರ್ತರು ಕಚೇರಿ ಪ್ರವೇಶಿಸದಂತೆ ಎರಡೂ ಗೇಟ್‌ಗಳನ್ನು ಮುಚ್ಚಿ 200ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ಪಾದಯಾತ್ರೆ
ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ಪಾದಯಾತ್ರೆ
ಪಾದಯಾತ್ರೆಯಲ್ಲಿ ಸಾಗಿದ ಕಾರ್ಯಕರ್ತರು
ಪಾದಯಾತ್ರೆಯಲ್ಲಿ ಸಾಗಿದ ಕಾರ್ಯಕರ್ತರು

ಬೂದಿ ಮುಚ್ಚಿದ ಕೆಂಡ ಕೆರಗೋಡು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಅಂಗಡಿಗಳು ಮುಚ್ಚಿದ್ದು ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಧ್ವಜಸ್ತಂಭದ ಬಳಿ ಯಾರೂ ಬಾರದಂತೆ ಬ್ಯಾರಿಕೇಡ್‌ ಹಾಕಲಾಗಿದೆ. ಸುತ್ತಲೂ ಪೊಲೀಸ್‌ ವಾಹನಗಳನ್ನು ನಿಲ್ಲಿಸಿ ಕಟ್ಟೆಚ್ಚರ ವಹಿಸಲಾಗಿದೆ.

ಮತ್ತೆ ಹನುಮ ಧ್ವಜ ಹಾರಿಸಿ; ಸಿ.ಟಿ.ರವಿ

ಬಿಜೆಪಿ ಮುಖಂಡ ಸಿ.ಟಿ.ರವಿ ಮಾತಾಡಿ ‘ಕೆರಗೋಡು ಗ್ರಾಮದಲ್ಲಿ ಮತ್ತೆ ಹನುಮ ಧ್ವಜ ಹಾರಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಮುಖಂಡರು ಗ್ರಾಮಕ್ಕೆ ಕಾಲಿಡದ ಸ್ಥಿತಿ ನಿರ್ಮಾಣವಾಗಲಿದೆ’ ಎಂದು ಎಚ್ಚರಿಕೆ ನೀಡಿದರು. ‘ಕಾಂಗ್ರೆಸ್‌ ಸರ್ಕಾರಕ್ಕೆ ಟಿಪ್ಪು ಸುಲ್ತಾನ್‌ ಭೂತ ಮೆಟ್ಟಿಕೊಂಡಿದೆ. ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮ ಇರಬಹುದು ಆದರೆ ಅವರಲ್ಲಿ ರಾಮ ಭಕ್ತಿ ಇಲ್ಲ. ಇನ್ನು ಎಷ್ಟು ದಿನ ರಾಜಕೀಯ ಮಾಡುತ್ತೀರಿ ಶೀಘ್ರ ನಿಮ್ಮ ಆಟ ಮುಗಿದು ಹೋಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT