ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

200 ದಿನ ಉದ್ಯೋಗ, ₹ 700 ಕೂಲಿಗೆ ಒತ್ತಾಯ

Last Updated 13 ಮೇ 2021, 12:50 IST
ಅಕ್ಷರ ಗಾತ್ರ

ಮಂಡ್ಯ: ಗ್ರಾಮೀಣ ಪ್ರದೇಶದಲ್ಲಿ 200 ದಿನಗಳ ಉದ್ಯೋಗ ಖಾತ್ರಿ ಕೆಲಸ ನೀಡಬೇಕು, ₹700 ಕೂಲಿ ನೀಡಬೇಕು, ಅಸಂಘಟಿತ ಕಾರ್ಮಿಕರಿಗೆ ₹10 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರು ತಾಲ್ಲೂಕಿನ ಹಳೇ ಬೂದನೂರು ಗ್ರಾ.ಪಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ರೋಗಿಗಳ ಸಂಖ್ಯೆಗನುಗುಣವಾಗಿ ಆಮ್ಲಜನಕ ಹಾಸಿಗೆ, ವೆಂಟಿಲೇಟರ್‌ಗಳು, ಐಸಿಯು ವ್ಯವಸ್ಥೆ, ಜೀವ ರಕ್ಷಕ ಔಷಧಿಗಳು ಲಭ್ಯವಿಲ್ಲದೆ ಕೊರತೆ ಉಂಟಾಗಿ ಜನರು ಪರದಾಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಜನರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಟ್ಟಡ, ಬೀದಿಬದಿ, ಮನೆ ಕೆಲಸ, ಬೀಡಿ ಕಾರ್ಮಿಕರು, ಆಟೊ, ಟ್ಯಾಕ್ಸಿ ಚಾಲಕರು ಸೇರಿದಂತೆ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ₹10 ಸಾವಿರ ಪರಿಹಾರ, ಆಹಾರ ಧಾನ್ಯಗಳನ್ನು ನೀಡಬೇಕು. ಸರ್ಕಾರ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡಬೇಕು. ಲಸಿಕೆ ಪೇಟೆಂಟ್ ಹಕ್ಕನ್ನು ಕಿತ್ತು ಹಾಕಿ ಸರ್ಕಾರಿ ಔಷಧಿ ತಯಾರಿಕೆ ಕಂಪನಿಗಳು ಸಂಶೋಧನೆ ಮಾಡಲು ಅವಕಾಶ ನೀಡಬೇಕು. ವಿಶ್ವದಲ್ಲಿ ಲಭ್ಯವಿರುವ ಎಲ್ಲಾ ಲಸಿಕೆಯನ್ನು ಅಪಾರ ಪ್ರಮಾಣದಲ್ಲಿ ತಯಾರಿಸಬೇಕು. ಎಂದು ಆಗ್ರಹಿಸಿದರು.

ಇಂದು ದೇಶದಲ್ಲಿ ಸಾಕಷ್ಟು ಸಾವು ಸಂಭವಿಸುತ್ತಿದೆ. ಅಲ್ಲದೆ ನೋವು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೊರೊನಾ 2ನೇ ಅಲೆ ಬರುತ್ತದೆ ಎಂಬ ಮಾಹಿತಿ ಇದ್ದಾಗಲೂ ಅದನ್ನು ತಡೆಗಟ್ಟಲು ಕೇಂದ್ರ–ರಾಜ್ಯ ಸರ್ಕಾರಗಳು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳದ ಕಾರಣ ದೊಡ್ಡ ಪ್ರಮಾಣದಲ್ಲಿ ಸಾವುಗಳು ಸಂಭವಿಸುತ್ತಿದೆ. ಶುರುವಿನಲ್ಲಿ ಸೋಂಕಿತರನ್ನು ಪತ್ತೆ ಹಚ್ಚಿ ಪ್ರತ್ಯೇಕಗೊಳಿಸಿ ಸೂಕ್ತ ಚಿಕಿತ್ಸೆ ನೀಡಿದ್ದರೆ ರೋಗ ವ್ಯಾಪಕವಾಗಿ ಹರಡುತ್ತಿರಲಿಲ್ಲ. ರೋಗಿಗಳ ಸಂಖ್ಯೆ ಹೆಚ್ಚಾದಂತೆ ಆರೋಗ್ಯ ನೆರವಿಲ್ಲದೆ ಜನ ತತ್ತರಿಸುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಗಾಯತ್ರಿ, ಪ್ರೇಮಾ, ಯಶೋಧಮ್ಮ, ಪದ್ಮ, ಶಾಂತಮ್ಮ, ಜಯಪಾಲ, ಶಂಕರ, ರಾಜು, ರತ್ನಮ್ಮ, ಪದ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT