ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.1ರಂದು ಜಾತಿಗಣತಿ ವರದಿ ಜಾರಿಗೆ ಒತ್ತಾಯಿಸಿ ಧರಣಿ

Published 29 ನವೆಂಬರ್ 2023, 14:22 IST
Last Updated 29 ನವೆಂಬರ್ 2023, 14:22 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ‘ಜಾತಿ ಗಣತಿ ವರದಿಯನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಯಥಾವತ್ ಜಾರಿ ಮಾಡಬೇಕು ಎಂದು ಆಗ್ರಹಿಸಿ ಡಿ.1ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ತಾಲ್ಲೂಕು ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘ ಮತ್ತು ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಎನ್.ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ವಿಶ್ವಕರ್ಮ ಮಹಾಸಭಾ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರತಿಭಟನೆಯು ಸಂಘದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರ ನೇತೃತ್ವದಲ್ಲಿ ನಡೆಯುತಿದ್ದು, ತಾಲ್ಲೂಕಿನ ವಿಶ್ವಕರ್ಮ ಸಮಾಜದವರು ಭಾಗವಹಿಸಬೇಕು. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರ ಅಭ್ಯುದಯಕ್ಕಾಗಿ 2013ರಲ್ಲಿ ಜಾತಿಗಣತಿಗಾಗಿ ಆಯೋಗ ನೇಮಿಸಿದ್ದರು. ಆದರೆ, ವರದಿ ಮಂಡಿಸುವ ವೇಳೆಗೆ ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಜಾತಿ ಗಣತಿ ವರದಿಯನ್ನು ಯಥಾವತ್‌ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಈಗ ಸಿದ್ದರಾಮಯ್ಯ ಅವರೇ ‌ಮತ್ತೊಮ್ಮೆ ಮುಖ್ಯಮಂತ್ರಿಯಾಗಿರುವುದರಿಂದ ವರದಿ ಜಾರಿಗೊಳಿಸಬೇಕು’ ಎಂದು ಮನವಿ ಮಾಡಿದರು.

‘ಈ ವರದಿಯಿಂದ ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಲು ಅವಕಾಶ ಕಲ್ಪಿಸಿಕೊಡುತ್ತದೆ. ವಿಶ್ವಕರ್ಮ ಸಮಾಜ ಸೇರಿದಂತೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಡಬೇಕು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸದಸ್ಯರು ವರದಿಯ ಬಗ್ಗೆ ಅಪಸ್ವರ ಎತ್ತದೆ ಬೆಂಬಲ ನೀಡಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಎಚ್.ಎ.ರಮೇಶ್, ಉಪಾಧ್ಯಕ್ಷ ರೂಪೇಶಾಚಾರ್, ವಿಶ್ವಕರ್ಮ ಯುವ ಮಿಲನ್ ಜಿಲ್ಲಾಧ್ಯಕ್ಷ ಡಿ.ವಿ.ಮೋಹನ್, ಹೊಸಹೊಳಲು ರಂಗಸ್ವಾಮಿ, ನಾಗರಾಜು, ಅಗ್ರಹಾರಬಾಚಹಳ್ಳಿ ರುಕ್ಮಾಂಗದಾಚಾರ್, ರವಿ, ಆರ್.ಕೆ.ಮೂರ್ತಾಚಾರ್, ಟಿಎಪಿಸಿಎಂಎಸ್ ರವಿಕುಮಾರ್, ಗೋವಿಂದಾಚಾರ್, ರಂಗಾಚಾರ್, ಗುರುಮೂರ್ತಾಚಾರ್, ಕಾಳಿಕಾಂಬ ರಾಜು, ತಮ್ಮಯ್ಯಚಾರ್, ಸೋಮನಹಳ್ಳಿ ಕಾಂತರಾಜು, ಮಂಜಾಚಾರ್, ಗೋಪಾಲ್, ಲೋಕೇಶ್ ವಿಶ್ವಕರ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT