ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮಿಯಾ ಮಸೀದಿ ಒಡೆಯುವ ಹುನ್ನಾರ: ಮುಖಂಡರ ಆರೋಪ

ಮಸೀದಿಗೆ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿ, ಎಸ್‌ಪಿಗೆ ಮುಸ್ಲಿಂ ಮುಖಂಡರ ಮನವಿ
Last Updated 14 ಡಿಸೆಂಬರ್ 2021, 5:27 IST
ಅಕ್ಷರ ಗಾತ್ರ

ಮಂಡ್ಯ: ‘ಶ್ರೀರಂಗಪಟ್ಟಣ ಸಂಕೀರ್ತನಾ ಯಾತ್ರೆಯ ಹೆಸರಿನಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಐತಿಹಾಸಿಕ ‘ಜಾಮಿಯಾ’ (ಮಸೀದೆ–ಎ–ಆಲಾ) ಮಸೀದಿ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸುವ ಸಂಚು ರೂಪಿಸಲಾಗುತ್ತಿದೆ’ ಎಂದು ಆರೋಪಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಅವರಿಗೆ ಸೋಮವಾರ ಮಸೀದಿ ಮುಖಂಡರು ಮನವಿ ನೀಡಿದರು.

‘ಹಿಂದೂ ಮುಸ್ಲಿಂ ಸಮುದಾಯ ದವರು ಸಾಮರಸ್ಯದಿಂದ ರಾಜ್ಯದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಡಿ.16ರಂದು ನಡೆಯುವ ಸಂಕೀರ್ತನಾ ಯಾತ್ರೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಮಸೀದಿ ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ದುರುದ್ದೇಶದಿಂದ, ಶಾಂತಿ ಕದಡಲು ಯಾತ್ರೆಯ ಸಂದರ್ಭವನ್ನು ಬಳಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಇದು ವಿಷ ಬಿತ್ತುವ ಕೆಲಸ’ ಎಂದು ಅವರು ಆರೋಪಿಸಿದರು.

‘ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಮಸೀದಿ ಧ್ವಂಸ ಗೊಳಿಸುವ ನಿಟ್ಟಿನಲ್ಲಿಯೇ ಅನವಶ್ಯ ಕವಾಗಿ ಜನರನ್ನು ಸೇರಿಸಲಾಗುತ್ತಿದೆ. ಇದರಿಂದ ಜನರ ಆಸ್ತಿ ಪ್ರಾಣ, ಮಾನಕ್ಕೆ ಧಕ್ಕೆಯುಂಟಾಗುವ ಸಾಧ್ಯತೆಗಳು ಇರುವುದರಿಂದ ಪೊಲೀಸರು ರಕ್ಷಣೆ ನೀಡಬೇಕು. ಜಾಮಿಯಾ ಮಸೀದಿ ಐತಿಹಾಸಿಕ ಮಹತ್ವ ಹೊಂದಿದ್ದು, ಪುರಾತತ್ವ ಇಲಾಖೆಯ ಸುಪರ್ದಿ ಯಲ್ಲಿರುವ ಮಸೀದಿಯ ರಕ್ಷಣೆಗೆ ಭದ್ರತೆ ಒದಗಿಸಬೇಕು. ಈ ಸಂಬಂಧ ಜಿಲ್ಲಾಡಳಿತ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಸಂಕೀರ್ತನಾ ಯಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಮಸೀದಿಯ ಸುತ್ತಮುತ್ತಲ ಪ್ರದೇಶದಲ್ಲಿ ಹಾಗೂ ಸಂಕೀರ್ತನಾ ಯಾತ್ರೆಗೆ ಬರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಭಾಗವಹಿಸುವವರ ಮೇಲೂ ನಿಗಾ ವಹಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಯಾವುದೇ ಅನಾಹುತ ನಡೆದರೆ ಜಿಲ್ಲಾಡಳಿತವೇ ಹೊಣೆಯಾಗಲಿದೆ’ ಎಂದು ಅವರು ಹೇಳಿದರು.

ಜಿಲ್ಲಾಡಳಿತಕ್ಕೆ ಮನವಿ: ಮಸೀದಿಯ ಮೇಲೆ ದಾಳಿ ಹಾಗೂ ಧ್ವಂಸ ಮಾಡುವ ಹುನ್ನಾರ ತಡೆಯಬೇಕು. ಆ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಆಪ್ತ ಸಹಾಯಕ ಸ್ವಾಮೀಗೌಡ ಅವರಿಗೆ ಮಸೀದಿ ಮುಖಂಡರು ಮನವಿ ನೀಡಿದರು.

ಸುದ್ದಿಗೋಷ್ಠಿ: ಮಸೀದಿ ಮುಖಂಡರು ಮತ್ತು ಮುಸ್ಲಿಂ ಸಮುದಾಯದ ಜನಪ್ರತಿನಿಧಿಗಳು ಸುದ್ದಿಗೋಷ್ಠಿ ನಡೆಸಿ ಮಸೀದಿಯ ರಕ್ಷಣೆಗೆ ಆಗ್ರಹಿಸಿದರು.

ಮುಡಾ ಮಾಜಿ ಅಧ್ಯಕ್ಷ ಮುನಾವರ್‌ ಖಾನ್‌, ಮುಖಂಡ ರಾದ ಎಸ್‌.ಮೊಹಮ್ಮದ್‌ ತಾಹೇರ್, ನದೀಮ್‌, ರಿಸ್ವಾನ್‌, ಮುಸಬೀರ್‌ಬೀರ್‌ಖಾನ್‌, ಅಫ್ರೋಜ್‌ಖಾನ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT