ದುಡಿಯುವ ಬಂಡವಾಳ ನಿರೀಕ್ಷೆಯಲ್ಲಿ ಪಿಎಸ್‌ಎಸ್‌ಕೆ

7
₹ 13 ಕೋಟಿ ಅನುದಾನಕ್ಕಾಗಿ 5 ತಿಂಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವ

ದುಡಿಯುವ ಬಂಡವಾಳ ನಿರೀಕ್ಷೆಯಲ್ಲಿ ಪಿಎಸ್‌ಎಸ್‌ಕೆ

Published:
Updated:
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ

ಪಾಂಡವಪುರ: ದಿನವೊಂದಕ್ಕೆ 3 ಸಾವಿರ ಟನ್‌ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿರುವ ಇಲ್ಲಿನ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯು (ಪಿಎಸ್‌ಎಸ್‌ಕೆ) 2018–19ನೇ ಸಾಲಿನ ಕಬ್ಬು ಅರೆಯುವಿಕೆ ಕಾರ್ಯ ಪ್ರಾರಂಭಿಸಲು ದುಡಿಯುವ ಬಂಡವಾಳ ಬೇಕಾಗಿದೆ. ಕಾರ್ಖಾನೆಯು ಸರ್ಕಾರದಿಂದ ಹಣ ಬಿಡುಗಡೆಯ ನಿರೀಕ್ಷೆಯಲ್ಲಿದೆ.

ಕಾರ್ಖಾನೆಯ ಯಂತ್ರಗಳ ಶುದ್ಧೀಕರಣ, ಕಾರ್ಮಿಕರ ವೇತನ, ಕಬ್ಬು ಸರಬರಾಜು ಮಾಡುವ ರೈತರಿಗೆ ಮುಂಗಡ ಹಣ ಸೇರಿದಂತೆ ಸುಮಾರು ₹ 13 ಕೋಟಿ ದುಡಿಯುವ ಬಂಡವಾಳ ಬಿಡುಗಡೆಗಾಗಿ 5 ತಿಂಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಹಣ ಬಿಡುಗಡೆಯಾಗಿಲ್ಲ.

ರೈತ ಸಂಘ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಆಡಳಿತ ಮಂಡಳಿ ರಚನೆಯಾಗಿ 4 ವರ್ಷಗಳು ಕಳೆದಿದ್ದು, ಇಲ್ಲಿ ಆರಂಭದ 2 ವರ್ಷಗಳು ಮಾತ್ರ ಕಬ್ಬು ಅರೆಯಲು ಸಾಧ್ಯವಾಯಿತು. 2 ವರ್ಷಗಳಿಂದ ಅದು ಸ್ಥಗಿತಗೊಂಡಿದೆ. ಈ ಸಾಲಿನಲ್ಲಿ ಸರ್ಕಾರ ದುಡಿಯುವ ಬಂಡವಾಳ ಬಿಡುಗಡೆ ಮಾಡದಿದ್ದರೆ ಈ ಬಾರಿಯೂ ಕಬ್ಬು ಅರೆಯಲು ಸಾಧ್ಯವಿಲ್ಲದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಾರ್ಖಾನೆಗೆ ಸುಮಾರು ₹ 30 ಕೋಟಿಗಳಷ್ಟು ದುಡಿಯುವ ಬಂಡವಾಳ ಮತ್ತು ಕಬ್ಬು ಸರಬರಾಜಿನ ರೈತರ ಹಣವನ್ನು ಬಿಡುಗಡೆಗೊಳಿಸಿತ್ತು. ಟನ್‌ಗೆ ₹ 2,300 ದರ ನಿಗದಿ ಮಾಡಲಾಗಿತ್ತು. ಜನವರಿ ತಿಂಗಳಲ್ಲಿ ರೈತರ ಕಬ್ಬಿನ ಬಾಕಿ ₹ 6.77 ಕೋಟಿ ಹಣವನ್ನು ಸರ್ಕಾರ ಬಿಡುಗಡೆಗೊಳಿಸಿ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದ್ದು, ಕಾರ್ಖಾನೆ ರೈತರ ಕಬ್ಬಿನ ಎಲ್ಲ ಹಣವನ್ನು ಪಾವತಿ ಮಾಡಿದೆ.

ಕಬ್ಬಿನ ಕೊರತೆಯಿಂದಾಗಿ 2 ವರ್ಷಗಳಲ್ಲಿ ಕಾರ್ಖಾನೆಯು ಕಬ್ಬು ಅರೆಯುವ ಕಾರ್ಯ ಆರಂಭಿಸಲೇ ಇಲ್ಲ. ಮಳೆಯ ಕೊರತೆ ಮತ್ತು ಬರಿದಾದ ಕೆಆರ್‌ಎಸ್‌ ಜಲಾಶಯದಿಂದಾಗಿ ಕಬ್ಬು ಬೆಳೆ ತೆಗೆಯಲು ರೈತರಿಗೆ ಸಾಧ್ಯವಾಗಲಿಲ್ಲ. ಕಳೆದ ವರ್ಷದಲ್ಲಿ ಮುಂಗಾರು ಮಳೆ ಮುಗ್ಗರಿಸಿತ್ತಾದರೂ ಹಿಂಗಾರು ಮಳೆಯಾಗಿದ್ದರಿಂದ ಸಿ.ಡಿ.ಎಸ್., ವಿ.ಸಿ.ನಾಲೆ ಹಾಗೂ ಪಂಪ್‌ಸೆಟ್‌ಗಳ ಸಹಾಯದಿಂದ ನೀರು ಹಾಯಿಸಿ ರೈತರು ಒಂದಿಷ್ಟು ಕಬ್ಬು ಬೆಳೆಯನ್ನು ತೆಗೆಯಲು ಸಾಧ್ಯವಾಯಿತು. ಹಾಗಾಗಿ ಈ ಭಾಗದಲ್ಲಿ 4 ಲಕ್ಷ ಟನ್‌ಗಳಷ್ಟು ಕಬ್ಬು ಇದೆ. ಇದಿಷ್ಟನ್ನು ಅರೆಯುವ ಕಾರ್ಯ ಕಾರ್ಖಾನೆಗೆ ಕಷ್ಟವಲ್ಲ. ಆದರೆ ದುಡಿಯುವ ಬಂಡವಾಳ ಇಲ್ಲದೇ ಕಾರ್ಖಾನೆ ಆರಂಭಿಸಲು ಸಾಧ್ಯವಿ‌ಲ್ಲದಂತಾಗಿದೆ.

ಸಕ್ಕರೆ ಉತ್ಪಾದನೆಯಲ್ಲಿ ಪಿಎಸ್‌ಎಸ್‌ಕೆ ರಾಜ್ಯದಲ್ಲಿಯೇ ಪ್ರಮುಖ ಕಾರ್ಖಾನೆ ಎನಿಸಿಕೊಂಡಿತ್ತು. 1996ರಲ್ಲಿ ಕಾರ್ಖಾನೆಯನ್ನು ವಿಸ್ತರಣೆ ಮಾಡಿ ಕಬ್ಬು ಅರೆಯುವ ಸಾಮರ್ಥ್ಯ, ಸಕ್ಕರೆ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಡಿಸ್ಟಿಲರಿ ಪ್ರಾರಂಭಿಸಲು ಯತ್ನಿಸಿತು. ಇದರಿಂದಾಗಿ ಎಡವಿದ ಕಾರ್ಖಾನೆ ಸುಮಾರು 5 ವರ್ಷಗಳ ಕಾಲ ಸ್ಥಗಿತಗೊಂಡಿತು.

2003ನೇ ಸಾಲಿನಲ್ಲಿ ಮುಚ್ಚಿದ್ದ ಪಿಎಸ್‌ಎಸ್‌ಕೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ‘ಕೊಠರಿ ಷುಗರ್’ ಎಂಬ ಖಾಸಗಿ ಕಂಪನಿಗೆ ವಹಿಸಿತು. ಈ ಕಂಪನಿ 2–3 ವರ್ಷಗಳ ಕಾಲ ಮಾತ್ರ ಕಬ್ಬು ಅರೆದು ಪಲಾಯನ ಮಾಡಿತು.

ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಪಿಎಸ್‌ಎಸ್‌ಕೆಯನ್ನು ಮಂಡ್ಯದ ಮೈಷುಗರ್‌ಗೆ ಸೇರ್ಪಡೆ‌ಗೊಳಿಸಿ ಹಂತಹಂತವಾಗಿ ಸುಮಾರು ₹ 50 ಕೋಟಿಯಷ್ಟು ಬಿಡುಗಡೆಗೊಳಿಸಿ ಪುನಶ್ಚೇತನಗೊಳಿಸಿತು. ಬಳಿಕ ಪಿಎಸ್‌ಎಸ್‌ಕೆ ಸಹಕಾರಿ ಕ್ಷೇತ್ರಕ್ಕೆ ಮರಳಿತು. ರೈತ ಸಂಘ–ಕಾಂಗ್ರೆಸ್ ಮೈತ್ರಿಕೂಟದ ಆಡಳಿತಕ್ಕೆ ಇದು ಒಳಪಟ್ಟಿತು.

ಈಗ ಎಚ್‌.ಡಿ. ಕುಮಾರಸ್ವಾಮಿಯವರ ನೇತೃತ್ವದ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪಿಎಸ್‌ಎಸ್‌ಕೆಗೆ ದುಡಿಯುವ ಬಂಡವಾಳ ಮತ್ತು ಕಾರ್ಮಿಕರ 1 ವರ್ಷದ ವೇತನ ಬಾಕಿ ಬಿಡುಗಡೆಗೊಳಿಸಿ ಈ ಭಾಗದ ರೈತರ ಹಿತಾಸಕ್ತಿ ಕಾಪಾಡುವುದೇ ಎಂಬುದನ್ನು ಕಾದು ನೋಡಬೇಕಿದೆ.

ಸಚಿವ ಸಿ.ಎಸ್.ಪುಟ್ಟರಾಜು ಮತ್ತು ನೂತನ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರೊಂದಿಗೆ ಚರ್ಚಿಸಿ ಹಣ ಬಿಡುಗಡೆಗೆ ಮನವಿ ಮಾಡಿದ್ದೇವೆ
- ಪಿ.ಧನಂಜಯ, ಅಧ್ಯಕ್ಷರು, ಪಿಎಸ್‌ಎಸ್‌ಕೆ

ಹಾರೋಹಳ್ಳಿ ಪ್ರಕಾಶ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !