ಶನಿವಾರ, ಅಕ್ಟೋಬರ್ 24, 2020
18 °C
ಜೆಡಿಎಸ್ ತಂತ್ರಕ್ಕೆ ಕಾಂಗ್ರೆಸ್ ತಿರುಮಂತ್ರ

ತಾಲ್ಲೂಕು ಪಂಚಾಯಿತಿ: ಅಧ್ಯಕ್ಷರಾಗಿ ಪುಟ್ಟಸ್ವಾಮಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ತಾಲ್ಲೂಕು ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹೊಸಹಳ್ಳಿ ಕ್ಷೇತ್ರದ ಸದಸ್ಯ ಕಾಂಗ್ರೆಸ್‌ನ ಪುಟ್ಟಸ್ವಾಮಿ ಅವರು ಆಯ್ಕೆಯಾದರು. ಆ ಮೂಲಕ ಜೆಡಿಎಸ್ ನಡೆಸಿದ ತಂತ್ರಗಾರಿಕೆಯನ್ನು ಕಾಂಗ್ರೆಸ್ ಪಕ್ಷ ವಿಫಲಗೊಳಿಸಿತು.

ಪಕ್ಷದ ಆತಂರಿಕ ಒಪ್ಪಂದಂತೆ ಅಧ್ಯಕ್ಷರಾಗಿದ್ದ ಸುಂದರೇಶ್ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತು. ಒಟ್ಟು 25 ಸದಸ್ಯ ಬಲದ ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ 14 ಮತ್ತು ಜೆಡಿಎಸ್ 11 ಸದಸ್ಯರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ನಿಂದ ಹೊಸಹಳ್ಳಿ ಕ್ಷೇತ್ರದ ಪುಟ್ಟಸ್ವಾಮಿ ಮತ್ತು ಜೆಡಿಎಸ್‌ನಿಂದ ಕಲ್ಕುಣಿ ಕ್ಷೇತ್ರದ ಸೋಮಶೇಖರ್ ಅಲಿಯಾಸ್ ನಟೇಶ್ ಅವರು ನಾಮಪತ್ರ ಸಲ್ಲಿಸಿದ್ದರು.

ಕೈ ಎತ್ತುವ ಮೂಲಕ ನಡೆದ ಚುನಾವಣೆ ನಡೆಸಲಾಯಿತು. ಪುಟ್ಟಸ್ವಾಮಿ 13 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. 12 ಮತ ಪಡೆದ ಸೋಮಶೇಖರ್ ಒಂದು ಮತದಿಂದ ಪರಾಭವಗೊಂಡರು. ಜೆಡಿಎಸ್ ತಂತ್ರಗಾರಿಕೆ ರೂಪಿಸಿ ಕಾಂಗ್ರೆಸ್‌ ಸದಸ್ಯರಾದ ದೊಡ್ಡಯ್ಯ, ಶಂಕರ್ ಅವರ ಬೆಂಬಲ ಪಡೆದಿತ್ತು. ಜೆಡಿಎಸ್ ತಂತ್ರ ಅರಿತಿದ್ದ ಕಾಂಗ್ರೆಸ್ ತಳಗವಾದಿ ಕ್ಷೇತ್ರದ ಜೆಡಿಎಸ್‌ ಸದಸ್ಯೆ ಶಿಲ್ಪಾ ಮಹೇಶ್ ಅವರನ್ನು ಸೆಳೆದು ತಾಲ್ಲೂಕು ಪಂಚಾಯಿತಿಯಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶ್ವಸಿಯಾಯಿತು. ಜೆಡಿಎಸ್‌ನವರು ಕಾಂಗ್ರೆಸ್‌ನ ಇಬ್ಬರು ಸದಸ್ಯರನ್ನು ಸೆಳೆದರೂ, ಜೆಡಿಎಸ್‌ನ ಒಬ್ಬ ಸದಸ್ಯೆ ಕಾಂಗ್ರೆಸ್ ಬೆಂಬಲಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವಲ್ಲಿ ಮುಗ್ಗರಿಸಿತು.

ಉಪವಿಭಾಗಾಧಿಕಾರಿ ಸೂರಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷರಾಗಿ ಪುಟ್ಟಸ್ವಾಮಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಹನುಮಂತು ಅವರು ಪಕ್ಷ ದ್ರೋಹಿ: ನೂತನ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಗೆದ್ದು ಅಧಿಕಾರ ಅನುಭವಿಸಿದ ತಳಗವಾದಿ ಜಿಲ್ಲಾ ಪಂಚಾಯಿತಿ ಸದಸ್ಯ ಹನುಮಂತು ಅವರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹನುಮಂತು ಅವರು ತಳಗವಾದಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತು ಮನೆಯಲ್ಲಿದ್ದರು. ಅವರನ್ನು ಪಕ್ಷಕ್ಕೆ ಕರತಂದ ನಮ್ಮ ನಾಯಕರಾದ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಜಿಲ್ಲಾ ಪಂಚಾಯಿತಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಗೆಲ್ಲಿಸಿದ್ದರು. ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದರು. ಇಷ್ಟಾದರೂ ಅವರಿಗೆ ಸ್ವಲ್ಪವಾದರೂ ನಿಷ್ಠೆ ಬೇಡವೇ ಎಂದು ವಾಗ್ದಾಳಿ ನಡೆಸಿದರು.

ಇಂದು ನಡೆದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಆಯ್ಕೆಯಾಗಿದ್ದ ದೊಡ್ಡಯ್ಯ ಮತ್ತು ಶಂಕರ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆದುಕೊಂಡು ಹೋಗಿದ್ದಾರೆ. ತಾ.ಪಂ.ಸದಸ್ಯ ದೊಡ್ಡಯ್ಯ 30 ತಿಂಗಳು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಪಡೆದು ಮೋಸ ಮಾಡಿದ್ದಾರೆ. ಇಂತಹ ಪಕ್ಷ ದ್ರೋಹಿಗಳಿಗೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕಪಾಠ ಕಲಿಸಬೇಕು. ನಮ್ಮ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಗುರುತಿಸಿ ಅಧಿಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.