ಗುರುವಾರ , ಸೆಪ್ಟೆಂಬರ್ 19, 2019
29 °C
ದೇವರಿಗೆ ಪಂಚಕಲ್ಯಾಣಿಯ ತೀರ್ಥದಿಂದ ಮಹಾಭಿಷೇಕ

ರಾಮಾನುಜಾಚಾರ್ಯರ ತಿರುನಕ್ಷತ್ರ ಮಹೋತ್ಸವ

Published:
Updated:
Prajavani

ಮೇಲುಕೋಟೆ: ಇಲ್ಲಿನ ಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ರಾಮಾನುಜಾಚಾರ್ಯರ 1002ನೇ ಜಯಂತ್ಯುತ್ಸವ ಗುರುವಾರ ಅದ್ಧೂರಿಯಾಗಿ ನಡೆಯಿತು.

ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಭಕ್ತರು ತಿರುನಕ್ಷತ್ರ ಮಹೋತ್ಸವದ ವಿಧಿವಿಧಾನಗಳನ್ನು ಕಣ್ತುಂಬಿಕೊಂಡರು. ಜಯಂತಿಯ ಪ್ರಥಮ ಹಂತದ ಕಾರ್ಯಕ್ರಮಗಳು ಸಂಜೆ 4.30ರ ವೇಳೆಗೆ ಮುಕ್ತಾಯ ಗೊಂಡವು. ಅದೇ ವೇಳೆಗೆ ಮಳೆ ಸುರಿಯುವ ಮೂಲಕ ಭಕ್ತರಲ್ಲಿ ಉತ್ಸಾಹ ಮತ್ತಷ್ಟು ಚಿಮ್ಮಿಸಿತು.

ತಿರುನಕ್ಷತ್ರ ಮಹೋತ್ಸವದ ನಿಮಿತ್ತ ಬೆಳಿಗ್ಗೆ 8 ಗಂಟೆಗೆ ಪೇಶುಮ್ ರಾಮಾನುಜರಿಗೆ ಸಮರಭೂಪಾಲ ವಾಹನೋತ್ಸವ ನೆರವೇರಿಸಿ ಚತುರ್ಮುಖ ಗಂಡಭೇರುಂಡ ರಾಜ ಗೋಪುರದ ಬಾಗಿಲಿನಲ್ಲಿ ಈಯಲ್ ಶಾತ್ತುಮೊರೆ ಮಹಾಮಂಗಳಾರತಿ ನೆರವೇರಿಸ ಲಾಯಿತು.

ಕಲ್ಯಾಣಿಯಿಂದ ತೀರ್ಥ: ರಾಮಾಜಾ ಚಾರ್ಯರು 1000 ವರ್ಷಗಳ ಹಿಂದೆ ನಿರ್ಮಿಸಿದ್ದ ಪಂಚ ಕಲ್ಯಾಣಿಯಿಂದ ತೀರ್ಥವನ್ನು ಇಳೆಯಾಳ್ವಾರ್ ಸ್ವಾಮೀಜಿ ಮತ್ತು ಭಾ.ವಂ. ರಾಮಪ್ರಿಯ ನೇತೃತ್ವದಲ್ಲಿ ಮಂತ್ರ ಪಾರಾಯಣ ದೊಂದಿಗೆ ದೇವಾಲಯಕ್ಕೆ ತರಲಾಯಿತು.

ಲೋಕ ಕಲ್ಯಾಣ ಕ್ಕಾಗಿ ವಿಶೇಷ ಸಂಕಲ್ಪ ಮಾಡಿ ರಾಮಾನುಜರ ಮಹಾಭಿಷೇಕಕ್ಕೆ ಚಾಲನೆ ನೀಡಲಾಯಿತು. ವೇದ ಘೋಷ, ಮಂಗಳವಾದ್ಯದ ನಡುವೆ ರಾಮಾನುಜಾಚಾರ್ಯರಿಗೆ ದ್ವಾದಶಾ ರಾಧನೆಯೊಂದಿಗೆ ಅಭಿಷೇಕ ನೆರವೇರಿಸಲಾಯಿತು. 12 ಬಗೆಯ ವಿಶೇಷ ಪುಷ್ಪಾಹಾರಗಳು, ಚಂದನ, ಹಾಲು, ಮೊಸರು, ಜೇನು, ಬೂರಾ ಸಕ್ಕರೆ, ಪವಿತ್ರ ತೀರ್ಥಗಳಿಂದ ಅಭಿಷೇಕ ಮಾಡಲಾಯಿತು.

ಈ ವೇಳೆ ಕಂಗೊಳಿಸಿದ ಆಚಾರ್ಯರ ವೈಭವವನ್ನು ಭಕ್ತರು ಕಣ್ತುಂಬಿ ಕೊಂಡರು. ರಾಮಾನುಜರ ಸನ್ನಿಧಿಯ ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ನೇತೃತ್ವದಲ್ಲಿ ನಡೆದ ಮಹಾಭಿಷೇಕದ ವಿಧಿ ವಿಧಾನಗಳಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ಕೂರತ್ತಾಳ್ವಾನ್ ಅಭಿಷೇಕ: ರಾಮಾನುಜರ ಕಣ್ಣುಗಳನ್ನು ಕಿತ್ತು ತರುವಂತೆ ರಾಜ ಕ್ರಿಮಿಕಂಠನ ಚೋಳ ಆದೇಶಿಸಿದ್ದ. ಈ ವೇಳೆ, ರಾಮಾನುಜರ ಪರಮಾಪ್ತ ಶಿಷ್ಯ ಕೂರತ್ತಾಳ್ವಾನ್‌, ತಮ್ಮ ಕಣ್ಣುಗಳನ್ನೇ ಕಿತ್ತುಕೊಟ್ಟು ರಾಮಾನುಜರನ್ನು ರಕ್ಷಿಸಿದ್ದರು. ಇದರ ನೆನಪಿಗಾಗಿ ಕೂರತ್ತಾಳ್ವಾರ್ ಮೂರ್ತಿಗೂ ಅಭಿಷೇಕ ನೆರವೇರಿಸಲಾಯಿತು. ಚೆಲುವನಾರಾಯಣ ಸ್ವಾಮಿ ಪಾದುಕೆ ಯೊಂದಿಗೆ ಆಚಾರ್ಯರಿಗೆ ಮಾಲೆ- ಮರ್ಯಾದೆ ನೆರವೇರಿಸಲಾಯಿತು.

ಮಹಾಭಿಷೇಕದಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತರಿಗೆ ತೊಂಡನೂರು ನಂಬಿನಾರಾಯಣನ್ ಅವರು 250 ಕೆ.ಜಿ ಡ್ರೈಫ್ರೂಟ್ಸ್ ಹಾಗೂ 100 ಕೆ.ಜಿ ರಸಾಯನ ಮಾಡಿ ವಿತರಿಸಿದರು. ರಾಮಾನುಜರ ಸನ್ನಿಧಿಯ ಆವರಣ ವನ್ನು ತಳಿರು ತೋರಣ, ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಸರ್ಕಾರ ರಾಮಾನುಜರ ಜಯಂತಿ ಆಚರಿಸಲಿ
ಶಂಕರಾಚಾರ್ಯರು ಹಾಗೂ ಇತರ ದಾರ್ಶನಿಕರ ಜಯಂತಿಯಂತೆ ರಾಮಾನುಜರ ತಿರುನಕ್ಷತ್ರ ಮಹೋತ್ಸವವನ್ನು ಸರ್ಕಾರದ ವತಿಯಿಂದ ಆಚರಿಸಬೇಕು ಎಂದು ಇಳೆಯಾಳ್ವಾರ್ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಭಕ್ತಿ ಸಿದ್ಧಾಂತದ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಕೊಡುಗೆ ನೀಡಿದ ರಾಮಾನುಜರು ಭಾರತೀಯ ಸನಾತನ ಸಂಸ್ಕೃತಿ, ಕಲೆ, ಆಚಾರ ವಿಚಾರಗಳ ಬೆಳವಣಿಗೆಗೆ ಶ್ರಮಿಸಿದ್ದಾರೆ. 11ನೇ ಶತಮಾನದಲ್ಲೇ ರಾಮಾನುಜಾಚಾರ್ಯರು ಅನೇಕ ಕ್ರಾಂತಿಕಾರಿ ಬದಲಾವಣೆ ತಂದಿದ್ದರು ಎಂದರು.

Post Comments (+)