ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮನಿರ್ಭರ: ನಾಲ್ವರಿಗೆ ಸಾಲ ಮಂಜೂರು

ಪ್ರಗತಿ ಪರಿಶೀಲನಾ ಸಭೆ: ನಿಯಮಾನುಸಾರ ಸಾಲ ನೀಡಲು ಜಿಲ್ಲಾಧಿಕಾರಿ ಅಶ್ವತಿ ಸೂಚನೆ
Last Updated 2 ಡಿಸೆಂಬರ್ 2021, 12:14 IST
ಅಕ್ಷರ ಗಾತ್ರ

ಮಂಡ್ಯ: ‘ಆತ್ಮನಿರ್ಭರ ಭಾರತ ಯೋಜನೆಯಡಿ ಮಂಡ್ಯ ಜಿಲ್ಲೆಗೆ ಬೆಲ್ಲ ಆಯ್ಕೆಯಾಗಿದ್ದು ಆಲೆಮನೆಗಳಿಗೆ ಪುನಶ್ಚೇತನ ನೀಡುವ ಉದ್ದೇಶ ಹೊಂದಲಾಗಿದೆ. ಇಲ್ಲಿಯವರೆಗೆ 63 ಮಂದಿ ಅರ್ಜಿ ಸಲ್ಲಿಸಿದ್ದು 41 ಅರ್ಜಿಗಳಿಗೆ ಜಿಲ್ಲಾ ಮಟ್ಟದ ಸಮಿತಿಯಿಂದ ಅನುಮೋದನೆ ನೀಡಲಾಗಿದೆ. ಅವರಲ್ಲಿ ನಾಲ್ವರಿಗೆ ಸಾಲ ಮಂಜೂರು ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಆತ್ಮನಿರ್ಭರ ಭಾರತ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆ ಹಾಗೂ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಆತ್ಮ ನಿರ್ಭರ ಭಾರತ ಅಭಿಯಾನದ ಬಗ್ಗೆ ಆಲೆಮನೆ ಮಾಲೀಕರಲ್ಲಿ, ರೈತರಲ್ಲಿ ಹೆಚ್ಚು ಪ್ರಚಾರ ಮಾಡಬೇಕು. ಅರ್ಹರಿಂದ ಅರ್ಜಿ ಪಡೆದು ನಿಯಾಮಾನುಸಾರ ಸಾಲ ಮಂಜೂರು ಮಾಡಬೇಕು. ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆ ಅಡಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮೇಲೆ ಶೇ 9ರ ಬಡ್ಡಿಗೆ ಶೇ 3ರ ಬಡ್ಡಿ ಸಹಾಯಧನ ನೀಡಬೇಕು. ಈ ಯೋಜನೆಯ ಬಗ್ಗೆಯೂ ಹೆಚ್ಚಿನ ಪ್ರಚಾರವನ್ನು ನೀಡಿ ಯೋಜನೆಯ ಲಾಭ ಹೆಚ್ಚು ರೈತರಿಗೆ ತಲುಪುವಂತೆ ನೋಡಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

ಅಮೃತ ರೈತ ಉತ್ಪಾದಕ ಸಂಸ್ಥೆ ರಚನೆ ಯೋಜನೆಯಡಿ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಿಂದ ಒಟ್ಟು 12 ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಯಿಂದ ಅನುಮೋದನೆ ಪಡೆಯಲಾಯಿತು.

‘ಈ ಸಂಸ್ಥೆಗಳಿಂದ ಕೃಷಿ ಪರಿಕರ ವಿತರಣೆ, ಕೃಷಿ ಉತ್ಪನ್ನ ಸಂಸ್ಕರಣೆ, ಬೆಳೆ ಮೌಲ್ಯವರ್ಧನೆ, ಉಪ ಉತ್ಪನ್ನಗಳ ತಯಾರಿಕೆ, ಕೋಯ್ಲೋತ್ತರ ಸಂಗ್ರಹಣೆಯಲ್ಲಿ ತಾಂತ್ರಿಕತೆ ಬಳಸುವುದರ ಮೂಲಕ ಕೃಷಿಕರಿಗೆ ಲಾಭ, ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ ಹೆಚ್ಚು ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸೂಚಿಸಿದರು.

ಬೆಳೆ ವಿಮೆ: ‘ಇದೂವರೆಗೆ ಜಿಲ್ಲೆಯಲ್ಲಿ 2,266 ಸಂಖ್ಯೆಯ ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದು, ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ) ಹಾಗೂ ಟೊಮೆಟೊ ಬೆಳೆಗಳಿಗೆ ಬೆಳೆ ವಿಮೆಗೆ ನೋಂದಾಯಿಸಲು ಕೊನೆಯ ದಿನಾಂಕ ಮುಕ್ತಾಯವಾಗಿದೆ. ಭತ್ತ (ನೀರಾವರಿ) ಹಾಗೂ ರಾಗಿ (ನೀರಾವರಿ) ಬೆಳೆಗಳಿಗೆ ವಿಮೆ ಮಾಡಿಸಲು ಡಿ.16ರವರೆಗೆ ಕಾಲಾವಕಾಶವಿರುತ್ತದೆ’ ಎಂದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಬಿ.ಎಸ್.ಚಂದ್ರಶೇಖರ್, ಜಿ.ಪಂ ಉಪಕಾರ್ಯದರ್ಶಿ ಎನ್.ಡಿ ಪ್ರಕಾಶ್, ಉಪವಿಭಾಗಾಧಿಕಾರಿ ಐಶ್ವರ್ಯಾ ಇದ್ದರು.

******


ಗೋಶಾಲೆ ಸ್ಥಾಪನೆಗೆ ₹ 48 ಲಕ್ಷ

‘ಸರ್ಕಾರದ ಆದೇಶದನ್ವಯ ವಯಸ್ಸಾದ, ಅನುತ್ಪಾದಕ ರೋಗಗ್ರಸ್ತ, ಪ್ರಕೃತಿಯು ವಿಕೋಪಗಳಿಂದ ಅಂಗವೈಕಲ್ಯತೆಗೆ ಒಳಗಾಗಿರುವ ಬೀಡಾಡಿ ಜಾನುವಾರಗಳ ಪುನರ್ವಸತಿಗಾಗಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ಸ್ಥಾಪಿಸಲು ಕ್ರಮವಹಿಸಬೇಕು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ತಿಳಿಸಿದರು.

ಜಿಲ್ಲಾ ಪ್ರಾಣಿ ದಯಾ ಸಂಘ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಜಾರಿಗೊಳಿಸಿದ್ದು ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ನಿರ್ಮಿಸಲು ₹ 48 ಲಕ್ಷ ನಿಗದಿಪಡಿಸಲಾಗಿದೆ. ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ಪಡೆದು ಗೋಶಾಲೆ ನಿರ್ಮಾಣಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದರು.

‘ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಚಟುವಟಿಕೆಗಳು ತಾಲೂಕು ಮಟ್ಟಕ್ಕೂ ವಿಸ್ತರಣೆಯಾಗಬೇಕು. ಜಾಗೃತಿ ಮೂಡಿಸಲು ಶಾಲಾ ಮಕ್ಕಳಿಗೆ ಬಹುಮಾಧ್ಯಮ ಜಾಗೃತಿ ಅಭಿಯಾನ, ವಿಚಾರ ಸಂಕಿರಣದ ಹ‌ಮ್ಮಿಕೊಳ್ಳಬೇಕು. ಆ ಮೂಲಕ ಪ್ರಾಣಿಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT