ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಹೆದ್ದಾರಿಯಲ್ಲಿ ಕೊಳಚೆ ನೀರು; ತಪ್ಪದ ಕಿರಿಕಿರಿ

ಗಬ್ಬು ವಾಸನೆಗೆ ಬೈಕ್‌ ಸವಾರರು ತಬ್ಬಿಬ್ಬು; ವೈಜ್ಞಾನಿಕ ಚರಂಡಿ ನಿರ್ಮಾಣಕ್ಕೆ ತೂಬಿನಕೆರೆ ಗ್ರಾಮಸ್ಥರ ಆಗ್ರಹ
ಮೋಹನ್ ರಾಗಿಮುದ್ದನಹಳ್ಳಿ
Published 18 ಜೂನ್ 2024, 7:02 IST
Last Updated 18 ಜೂನ್ 2024, 7:02 IST
ಅಕ್ಷರ ಗಾತ್ರ

ಮಂಡ್ಯ: ರಾಷ್ಟ್ರೀಯ ಹೆದ್ದಾರಿಯ ತೂಬಿನಕೆರೆ ಸರ್ವಿಸ್‌ ರಸ್ತೆಯಲ್ಲಿಯೇ ಹರಿಯುತ್ತಿರುವ ಕೊಳಚೆ ನೀರಿನಿಂದ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ತಕ್ಷಣ ಕೊಳಚೆ ನೀರು ನಿಲ್ಲಿಸಿ, ಚರಂಡಿ ನಿರ್ಮಿಸಬೇಕು. ಈ ಮೂಲಕ ವಾಹನ ಸವಾರರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ. 

ಹೌದು, ಮಂಡ್ಯ ತಾಲ್ಲೂಕಿನ ತೂಬಿನಕೆರೆ ಗ್ರಾಮದ ಬಳಿ ಇರುವ ಸರ್ವಿಸ್‌ ರಸ್ತೆಯ ಮಂಡ್ಯ ಮತ್ತು ಮೈಸೂರು ಕಡೆ ಸಾಗುವ ಎರಡೂ ಬದಿಯ ಸರ್ವಿಸ್‌ ರಸ್ತೆಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯುತ್ತಿದೆ. ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಯನ್ನು ಗ್ರಾಮಸ್ಥರೇ ತರಾಟೆ ತೆಗೆದುಕೊಂಡಿದ್ದರೂ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಇದು ಹೆದ್ದಾರಿ ಆರಂಭದಿಂದಲೂ ಸಮಸ್ಯೆ ಇದೆ.

ಕಾಮಗಾರಿ ಅವೈಜ್ಞಾನಿಕ:

ಹೆದ್ದಾರಿ ಕಾಮಗಾರಿಯೇ ಅವೈಜ್ಞಾನಿಕ ಎಂದು ಕೇಳಿಬರುತ್ತಿರುವ ಕೂಗು ಒಂದೆಡೆಯಾದರೆ, ಇದನ್ನು ಸಹಿಸಿಕೊಂಡ ಹಲವು ಗ್ರಾಮಗಳ ಸಂಕಟ ಹೇಳ ತೀರದಾಗಿದೆ. ಕೊಳಚೆ ನೀರು ತೂಬಿನಕೆರೆ ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ವಾಹನ ಸವಾರರು ಗಬ್ಬು ನಾರುತ್ತಿರುವ ಕೊಳಚೆ ನೀರಿನಲ್ಲಿಯೇ ಸಾಗುವ ದುಸ್ಥಿತಿ ನಿರ್ಮಾಣವಾಗಿದೆ.

ಐದು ಗ್ರಾಮಗಳನ್ನೊಳಗೊಂಡ ತೂಬಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ಕೇವಲ ಚರಂಡಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದು, ಇದರ ನಡುವೆ ಗ್ರಾಮದಲ್ಲಿಯೇ ಕೆ.ಎಚ್‌.ಬಿ ಅವರು ಸರ್ವಿಸ್‌ ರಸ್ತೆಗೆ ಹೊಂದಿಕೊಂಡಂತೆ ನಿವೇಶನಗಳ ಕಾಮಗಾರಿ ನಡೆಯುತ್ತಿರುವುದು ಕಂಡು ಬರುತ್ತದೆ.

ಬಟ್ಟೆಯೆಲ್ಲ ಗಲೀಜು:

ತೂಬಿನಕೆರೆ ಮಾರ್ಗವಾಗಿ ಹೋಗುವ ಮಂಡ್ಯ ಕಡೆ ಹಾಗೂ ಮೈಸೂರು ಕಡೆ ಹೋಗುವ ದ್ವಿಚಕ್ರ ವಾಹನ ಸವಾರರಿಗೆ ಕೊಳಚೆ ನೀರು ಚಿಮ್ಮುತ್ತಿದೆ. ಇದರಿಂದ ಬಟ್ಟೆಯೆಲ್ಲ ಗಲೀಜುಗೊಳ್ಳುತ್ತಿದೆ. ಇದರಿಂದ ಬೇಸರಗೊಂಡ ಅದೆಷ್ಟೋ ದ್ವಿಚಕ್ರ ವಾಹನ ಸವಾರರು ಹಿಡಿಶಾಪ ಹಾಕಿ ಮತ್ತೆ ಕೊಳಚೆ ತಾಕಿರುವ ಬಟ್ಟೆ ಬದಲಿಸಲು ತಮ್ಮೂರಿನತ್ತ ತೆರಳುವುದು ನಿತ್ಯ ಬವಣೆಯಾಗಿದೆ ಎಂಬುದು ದ್ವಿಚಕ್ರ ವಾಹನ ಸವಾರರ ಆರೋಪವಾಗಿದೆ.

ಮದುವೆಗೆ ಸಿದ್ಧವಾಗಿ ಶುಭ್ರವಾದ ಬಟ್ಟೆ ಹಾಕಿಕೊಂಡು ಮಂಡ್ಯ ಕಡೆ ಹೊರಟರೆ, ತೂಬಿನಕೆರೆ ಹತ್ತಿರ ಬರುತ್ತಿದ್ದಂತೆ ಆತಂಕ ಶುರುವಾಗುತ್ತದೆ. ದೊಡ್ಡ ವಾಹನಗಳ ಚಕ್ರಗಳಿಂದ ಚಿಮ್ಮುವ ಕೊಳಚೆ ನೀರಿಗೆ ಸಿಲುಕಿ ಇತ್ತ ಬೈಕ್‌ ನಿಲ್ಲಿಸಲೂ ಆಗದೇ ಅಥವಾ ಮುಂದೆ ಹೋಗಲೂ ಆಗದ ಸ್ಥಿತಿ ಯಾರಿಗೂ ಬೇಡ ಎಂದು ಅಲ್ಲಿನ ಸಮೀಪದ ಗ್ರಾಮದವರಾದ ಬೈಕ್‌ ಸವಾರರದ ತೇಜು, ಸುನೀಲ್‌, ಸುಮಾ ಬೇಸರ ವ್ಯಕ್ತಪಡಿಸುತ್ತಾರೆ.

ತೂಬಿನಕೆರೆಯಲ್ಲಿ ಎರಡು ಬಸ್‌ಬೇ (ಜಕ್ಕನಹಳ್ಳಿ ಕಡೆ ಹೋಗುವ ರಸ್ತೆ ಹಾಗೂ ತೂಬಿನಕೆರೆ ಹೆದ್ದಾರಿಯ ಸರ್ವಿಸ್‌ ರಸ್ತೆ)ಯಲ್ಲಿ ಆಗುವುದರಿಂದ, ಈ ಕಾರಣ ಕೊಟ್ಟು ಚರಂಡಿ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. 

ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ಯಾರ ಮಾತನ್ನು ಕೇಳುತ್ತಿಲ್ಲ. ಸರ್ವಿಸ್‌ ರಸ್ತೆಯಲ್ಲಿಯೇ ಹರಿಯುತ್ತಿರುವ ಕೊಳಚೆ ನೀರಿಗೆ ಏನಾದರೂ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಇಲ್ಲವಾದರೆ ಜನರು ಬೀದಿಗಳಿದು ಹೋರಾಟ ಮಾಡುತ್ತಾರೆ ಎಂದು ಗ್ರಾಮಸ್ಥರಾದ ಜಗದೀಶ್‌, ಚೆನ್ನೇಗೌಡ, ಉಮೇಶ್‌, ಶಿವಣ್ಣ, ಕುಮಾರ್‌, ಶಿವು ಆಗ್ರಹಿಸಿದ್ದಾರೆ. 

ಸಿ.ಸ್ವಾಮಿ
ಸಿ.ಸ್ವಾಮಿ
ಜೈಶಂಕರ
ಜೈಶಂಕರ

ಎನ್‌ಎಚ್‌ಎ ಅಧಿಕಾರಿಗಳಿಗೆ ಮೂರು ಬಾರಿ ವಿಷಯ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಈ ಸಂಬಂಧ ನಮ್ಮ ಮೇಲಾಧಿಕಾರಿಗಳಿಗೆ ಅರ್ಜಿ ಮೂಲಕ ಮನವಿ ಮಾಡಿ ವಾಸ್ತವ ತಿಳಿಸಿಕೊಡಲಾಗುವುದು

– ಸಿ.ಸ್ವಾಮಿ ಪಿಡಿಒ ಗ್ರಾ.ಪಂ.ತೂಬಿನಕೆರೆ ಮಂಡ್ಯ ತಾಲ್ಲೂಕು

ಕೊಳಚೆ ನೀರು ಚಿಮ್ಮಿ ನನ್ನ ಹೊಸ ಶರ್ಟ್‌ ಸಂಪೂರ್ಣವಾಗಿ ಕಲೆಯಾಗಿದೆ ನಂತರ ಮನೆಗೆ ವಾಪಸ್‌ ಹೋಗಿ ಬದಲಿಸಿಕೊಂಡು ಬಂದೆ. ಈ ದಾರಿಯಲ್ಲಿ ಸಾಗುವ ಅನೇಕ ಬೈಕ್‌ ಸವಾರರು ಇಂಥ ಕಿರಿಕಿರಿ ಅನುಭವಿಸಿದ್ದಾರೆ

– ವೈ.ಎಂ.ಜೈಶಂಕರ ಗ್ರಾ.ಪಂ.ಮಾಜಿ ಅಧ್ಯಕ್ಷ ಎಲೆಚಾಕನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT