ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭ; ಶಿಕ್ಷಕರಿಗೆ ನೆಗೆಟಿವ್‌ ವರದಿ ಕಡ್ಡಾಯ: ಸಚಿವ ಕೆ.ಸಿ.ನಾರಾಯಣಗೌಡ

ಉತ್ತಮ ಕಲಿಕಾ ವಾತಾವರಣ ನಿರ್ಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸೂಚನೆ
Last Updated 21 ಆಗಸ್ಟ್ 2021, 14:12 IST
ಅಕ್ಷರ ಗಾತ್ರ

ಮಂಡ್ಯ: ‘ಸರ್ಕಾರದ ನಿರ್ಧಾರದಂತೆ 9 ಮತ್ತು 10ನೇ ತರಗತಿ ಭೌತಿಕ ತರಗತಿಗಳು ಆ.23ರಿಂದ ಆರಂಭವಾಗಲಿವೆ. ಜಿಲ್ಲೆಯಲ್ಲಿ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ತರಗತಿಗೆ ಬರುವ ಶಾಲಾ ಶಿಕ್ಷಕರು ಹಾಗೂ ಇತರ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ವರದಿ ತರಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಶಾಲೆ ಆರಂಭದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಸೇರಿ ಒಟ್ಟು 2,529 ಶಾಲೆಗಳಿದ್ದು ಎಲ್ಲ ಶಿಕ್ಷಕರು ಕೋವಿಡ್‌ ಲಸಿಕೆ ಪಡೆದಿರಬೇಕು. ಶಾಲೆಯನ್ನು ಆಗಾಗ ಸ್ಯಾನಿಟೈಸ್ ಮಾಡಬೇಕು. ಶಾಲೆಯಲ್ಲಿ ಶಿಸ್ತಿಗೆ ಆದ್ಯತೆ ನೀಡಿ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಶಿಕ್ಷಕರು ಹಾಗೂ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು’ ಎಂದು ಸೂಚನೆ ನೀಡಿದರು.

‘ಶಾಲೆಗೆ ಬರುವ ಮುನ್ನ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಮಾಡಿಸಿ ನೆಗೆಟಿವ್‌ ವರದಿ ತರಬೇಕು. ಮಕ್ಕಳಿಗೆ ಆಹಾರ ತಯಾರಾಗುವ ಅಡುಗೆ ಮನೆ ಮತ್ತು ದಾಸ್ತಾನು ವಸ್ತುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಶಾಲಾ ಸಿಬ್ಬಂದಿ ಮಕ್ಕಳಿಗೆ ಉತ್ತಮ ವಾತಾವರಣ ರೂಪಿಸಬೇಕು. ಅವರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಬೇಕು’ ಎಂದರು.

‘ಪ್ರತಿ ತಾಲ್ಲೂಕುಗಳಲ್ಲಿ ಮಕ್ಕಳಿಗೆ ಆರೋಗ್ಯ ಸಮಸ್ಯೆ ಬಂದರೆ ಕೂಡಲೇ ಸೂಕ್ತ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಕ್ರಮವಹಿಸಬೇಕು. ಯಾವುದೇ ವಿದ್ಯಾರ್ಥಿಯಲ್ಲಿ ಆರೋಗ್ಯ ಸಮಸ್ಯೆ ಎದುರಾದ ಕೂಡಲೇ ಅವರನ್ನು ತಪಾಸಣೆ ಮಾಡಿಸಬೇಕು. ಚಿಕಿತ್ಸೆಯ ಅವಶ್ಯಕತೆ ಇದ್ದರೆ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಬೇಕು. ಶಾಲೆಗೆ ಬರುವ ಮಕ್ಕಳಿಗೆ ಚಾಕೊಲೇಟ್‌ ಹಾಗೂ ಸಿಹಿ ತಿಂಡಿ ವಿತರಣೆ ಮಾಡಿ ಭಯದ ವಾತಾವರಣ ಹೋಗಲಾಡಿಸಬೇಕು’ ಎಂದರು.

‘ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಆಟೋಟಗಳಿಗೆ ಅವಕಾಶ ನೀಡಬೇಕು. ಇದರಿಂದ ಅವರ ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಕಳೆದ ಒಂದೂವರೆ ವರ್ಷದಿಂದ ಶಾಲೆ ಇಲ್ಲದೇ ಮನೆಯಲ್ಲೇ ಇರುವ ಮಕ್ಕಳಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಬೇಕು. ಅವರಲ್ಲಿ ಕೋವಿಡ್‌ ಜಾಗೃತಿ ಮೂಡಿಸಬೇಕು. ಪ್ರತಿ ದಿನ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯದ ಮಾಹಿತಿ ದಾಖಲಿಸಬೇಕು . ಅಂತರ ಕಾಯ್ದುಕೊಂಡು ಸುರಕ್ಷಿತ ಕಲಿಕೆಯಾಗಬೇಕು' ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಮಾತನಾಡಿ ‘ಶಾಲಾ ಮಕ್ಕಳ ಬಗ್ಗೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು. ಉತ್ತಮ ವಾತಾವರಣದಲ್ಲಿ ಪಾಠ ಕಲಿಯುವ ಸ್ಥಿತಿ ನಿರ್ಮಾಣವಾಗಬೇಕು’ ಎಂದರು.

ಸಭೆಯಲ್ಲಿ ಶಾಸಕರಾದ ಸುರೇಶ್ ಗೌಡ, ಕೆ.ಅನ್ನದಾನಿ, ಎನ್. ಅಪ್ಪಾಜಿಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ, ಜಿ.ಪಂ ಸಿಇಒ ದಿವ್ಯಾ ಪ್ರಭು, ಜಿ.ಪಂ ಮುಖ್ಯ ಆಡಳಿತಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ ರಾಮ್ ಪ್ರಸಾತ್ ಮನೋಹರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಧನಂಜಯ್ ಇದ್ದರು.

***

ಐಸ್‌ಕ್ರೀಂ ಅಂಗಡಿ ಬಂದ್‌ ಮಾಡಿಸಿ

ಶಾಸಕ ಸಿ.ಎಸ್ ಪುಟ್ಟರಾಜು ಮಾತನಾಡಿ ‘ಶಾಲಾ ಕಾಲೇಜುಗಳಲ್ಲಿ ಮಕ್ಕಳ ಆರೋಗ್ಯ, ಶಾಲಾ ಆವರಣದಲ್ಲಿ ನೈರ್ಮಲ್ಯ ಕಾಪಾಡುವುದು ಬಹಳ ಮುಖ್ಯವಾಗಿರುತ್ತದೆ. ಶಾಲೆ ಮುಂಭಾಗ ಯಾವುದೇ ತರಹದ ಐಸ್‍ ಕ್ರೀಂ, ಪಾನಿಪುರಿ ಅಂಗಡಿಗಳು ತೆರೆಯದಂತೆ ಶಿಕ್ಷಕರು ನೋಡಿಕೊಳ್ಳಬೇಕು. ರಸ್ತೆಬದಿ ಅಂಗಡಿಗಳ ತಿಂಡಿಗಳಿಂದ ಮಕ್ಕಳ ಆರೋಗ್ಯ ಹಾಳಾಗುವ ಸಂಭವ ಇರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT