ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆ: ಅಧ್ಯಕ್ಷರ ಮೆರವಣಿಗೆಯುದ್ದಕ್ಕೂ ಚಿಣ್ಣರ ಕಲರವ

ಮಕ್ಕಳಿಂದ ಡೊಳ್ಳುಕುಣಿತ, ತಮಟೆ ವಾದನ, ನಂದಿಕಂಬ ಕುಣಿತ, ಕೊಡವ ನೃತ್ಯದ ಆಕರ್ಷಣೆ
Last Updated 31 ಜನವರಿ 2020, 14:42 IST
ಅಕ್ಷರ ಗಾತ್ರ

ಮೇಲುಕೋಟೆ: ಸಮ್ಮೆಳನಾಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನು ವರ್ಣರಂಜಿತ, ಅದ್ಧೂರಿ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಜನಪದ ಕಲಾ ತಂಡಗಳ ಜೊತೆಗೆ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಗಮನ ಸೆಳೆಯಿತು.

ಬೆಳಿಗ್ಗೆ 10.30ರಲ್ಲಿ ನರಹಳ್ಳಿ ಬಾಲುಸುಬ್ರಹ್ಮಣ್ಯ ಹಾಗೂ ಶಾಸಕ ಸಿ.ಎಸ್.ಪುಟ್ಟರಾಜು ಇಲ್ಲಿನ ಚಲುವನಾರಾಯಣಸ್ವಾಮಿ ದರ್ಶನ ಪಡೆದರು. ನಂತರ ದೇವಸ್ಥಾನದ ಮುಂಭಾಗದಲ್ಲಿ ಬೆಳಿಗ್ಗೆ 11 ಗಂಟೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರು ಅಧ್ಯಕ್ಷರ ಮೆರವಣಿಗೆಯನ್ನು ಉದ್ಫಾಟಿಸಿದರು.

ಮೈಸೂರು ಪೇಟೆ ತೊಟ್ಟ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ, ಅವರ ಪತ್ನಿ ರಜನಿ ರಥವೇರಿ ಕುಳಿತರು. ಶಾಸಕ ಸಿ.ಎಸ್.ಪುಟ್ಟರಾಜು, ಉಪ ವಿಭಾಗಾಧಿಕಾರಿ ವಿ.ಆರ್. ಶೈಲಜಾ, ಅಧಿಕಾರಿಗಳು, ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಸಾಗಿದರು. ನರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಪೂಜಾಕುಣಿತ ಮೆರವಣಿಗೆಯ ಮುಂದೆ ಸಾಗಿತು.

ಇದೇ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪ್ರತಿಭಾ ಕಾರಂಜಿಯಲ್ಲಿ ಉತ್ತಮಪ್ರದರ್ಶನ ನೀಡಿದ್ದ ಮಕ್ಕಳನ್ನು ಆಯ್ಕೆ ಮಾಡಿ ಕರೆತರಲಾಗಿತ್ತು. ಡೊಳ್ಳು, ತಮಟೆ ವಾದನ, ಜನಪದ ನೃತ್ಯ ಪ್ರದರ್ಶಿಸಿ ಜನರ ಮನಸೂರೆಗೊಂಡರು.

ಪಾಂಡವಪುರ ಪಿಇಎಸ್ ಬಾಲಿಕಾ ಕಿರಿಯ ಕಾಲೇಜಿನ ಬಾಲಕಿಯರು ಸೀರೆತೊಟ್ಟು ಕುಂಭ ಹೊತ್ತು ಸಾಗಿ ಮೆರವಣಿಗೆಗೆಮೆರುಗು ನೀಡಿದರು. ಲಕ್ಷ್ಮಿಸಾಗರ ಶಾಲೆಯ ಮಕ್ಕಳ ಡೊಳ್ಳು ಕುಣಿತ, ಉಳಿಗೆರೆ ಮತ್ತು ಬೇಬಿ ಮೊರಾರ್ಜಿ ಶಾಲೆಯ ಕಲಾತಂಡ, ಚಲುವರಸಿನಕೊಪ್ಪಲು ಶಾಲೆಯ ಮಕ್ಕಳ ವೀರಗಾಸೆ, ಪಟ ಹಾಗೂ ಪೂಜಾ ಕುಣಿತ, ಕನಗರನಮರಡಿ ಶಾಲೆಯ ಮಕ್ಕಳ ಕಂಸಾಳೆ, ಎಸ್‌ಇಟಿ ಶಾಲೆಯ ಮಕ್ಕಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಹಿಡಿದು ಸಾಗಿದರು. ಸೆಸ್ಕ್ ನೌಕರರು ಸಮವಸ್ತ್ರದೊಂದಿಗೆ ನಡೆದರು.

ಕುಂತಿಬೆಟ್ಟ, ಮೇಲುಕೋಟೆಯ ಯದುಶೈಲ ಸೇರಿ ಹಲವು ಶಾಲೆಯ ಮಕ್ಕಳ ಬ್ಯಾಂಡ್‌ಸೆಟ್‌ನೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಕೊಡಗಿನಿಂದ ಬಂದಿದ್ದ ಕೊಡಗು ಸಮಾಜದ ಭರಣಿ ತಂಡದ ವಾಲಗ, ಕೋಲಾಟಮೆರುಗು ನೀಡಿದವು. ಬಿಇಒ ಮಲ್ಲೇಶ್ವರಿ ಕುಣಿದು ಸಂಭ್ರಮಿಸಿದರು.

ಮೇಲುಕೋಟೆಯ ದೇವಸ್ಥಾನದ ಬೀದಿ, ರಾಜ ಬೀದಿ, ಮುಖ್ಯಬೀದಿ, ರಥಬೀದಿ, ಪೊಲೀಸ್ ಸ್ಟೇಷನ್ ರಸ್ತೆ, ಬಸ್ ನಿಲ್ದಾಣದ ರಸ್ತೆಗಳಲ್ಲಿ ಸಾಗಿ ವೇದಿಕೆ ತಲುಪಿತು. ಮೆರವಣಿಗೆ ಸಾಗುತ್ತಿದ್ದಾಗ ರಸ್ತೆಬದಿಯಲ್ಲಿ ನಿಂತಿದ್ದ ಜನರು ಅಧ್ಯಕ್ಷರತ್ತ ಕೈಬೀಸಿ ಅಭಿನಂದನೆ ಸಲ್ಲಿಸುತ್ತಿದ್ದರು.

ಸಭಾಂಗಣದ ಎರಡೂ ಕಡೆ ಪುಸ್ತಕ ಮಳಿಗೆ ತೆರೆಯಲಾಗಿತ್ತು. ಸರ್ಕಾರ ವಿವಿಧ ಇಲಾಖೆಗಳು ಕೂಡ ಮಳೆಗೆ ತೆರೆದಿದ್ದು, ಜನರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ದೊರೆಯುವ ವಿವಿಧ ತಿನಿಸುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಪುಷ್ಕಳ ಭೋಜನ: ನೂಕುನುಗ್ಗಲು
ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಒಮ್ಮೆಲೇ ಜನರು ಬಂದ ಕಾರಣ ಊಟದ ಕೊಠಡಿಯಲ್ಲಿ ನೂಕುನುಗ್ಗಲು ಉಂಟಾಗಿತ್ತು.

ಬೆಳಿಗ್ಗೆ ಟೊಮೆಟೊ ಬಾತ್‌, ಚಟ್ನಿ, ವಡೆ, ಮಧ್ಯಾಹ್ನ ಮೇಲುಕೋಟೆ ಪುಳಿಯೊಗರೆ, ಸಕ್ಕರೆ ಪೊಂಗಲ್, ರಾಗಿದೋಸೆ, ಹುಚ್ಚಳ್ಳು ಚಟ್ನಿ, ಹಸಿ ಅವರೇಕಾಳು ಕೂಟು, ಅನ್ನ–ಸಾರು ಪಲ್ಯ, ರಸಂ, ಹಪ್ಪಳ, ಉಪ್ಪಿನಕಾಯಿ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಚಿತ್ರಾನ್ನ, ಅನ್ನ ಸಾಂಬಾರ್, ಪಲ್ಯ, ಮಜ್ಜೆಗೆ, ಉಪ್ಪಿನಕಾಯಿ ವ್ಯವಸ್ಥೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT