ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive | ಯಡಿಯೂರಪ್ಪ ಬಾಲ್ಯ ಹೀಗಿತ್ತು: ಬಾಲ್ಯದ ಒಡನಾಡಿಗಳ ನೆನಪಿದು

ವಿದ್ಯಾರ್ಥಿ ಜೀವನದಲ್ಲಿ ಸ್ಫೂರ್ತಿಯ ಚಿಲುಮೆ ಇದೆ, ಕ್ರೀಡಾ ಮನೋಭಾವವಿದೆ
Last Updated 10 ಸೆಪ್ಟೆಂಬರ್ 2020, 12:54 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""
""

ಮಂಡ್ಯ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಾಲ್ಯದ ಕತೆಯಲ್ಲಿ ಸ್ಫೂರ್ತಿಯ ಚಿಲುಮೆ ಇದೆ. ಅವರ ಶಾಲಾ ದಿನಗಳಲ್ಲಿ ಶಿಸ್ತು, ಸಂಯಮ, ಶ್ರದ್ಧೆ ಇವೆ. ಅವರು ನಡೆದ ದಾರಿಯಲ್ಲಿ ಹಲವು ಮೈಲಿಗಲ್ಲುಗಳಿವೆ. ಕಷ್ಟದ ಮಾರ್ಗದಲ್ಲಿ ರೋಚಕ ತಿರುವುಗಳಿವೆ. ಪ್ರತಿ ಹೆಜ್ಜೆಯಲ್ಲೂ ಕ್ರೀಡಾ ಮನೋಭಾವ ಇದೆ.

ಯಡಿಯೂರಪ್ಪ ಅವರ ಕರ್ಮಭೂಮಿ ಶಿಕಾರಿಪುರವಾದರೆ ಜನ್ಮಭೂಮಿ ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಮುಖ್ಯಮಂತ್ರಿಗಳು ತವರಿಗೆ ಬಂದಾಗಲೆಲ್ಲಾ ಬಾಲ್ಯವನ್ನು ನೆನಪಿಗೆ ತಂದುಕೊಳ್ಳುತ್ತಾರೆ. ಊರಿನ ಗೆಳೆಯರು, ಗ್ರಾಮದೇವತೆ ಗೊಗಾಲಮ್ಮ, ಮನೆದೇವರು ಸ್ವತಂತ್ರ ಸಿದ್ದಲಿಂಗೇಶ್ವರನ ಮಹಿಮೆಯ ಬಗ್ಗೆ ಹೇಳುತ್ತಾರೆ.

ತಂದೆ ಸಿದ್ದಲಿಂಗಪ್ಪ ಅವರು ಕಾಪನಹಳ್ಳಿ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರರ ಸನ್ನಧಿಯಲ್ಲಿ ಅರ್ಚಕರಾಗಿದ್ದರು. ಜೊತೆಗೆ ಜಮೀನು ನೋಡಿಕೊಳ್ಳುತ್ತಿದ್ದರು. ದೇವರ ಸೇವೆಯಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದ ದಿನಗಳನ್ನು ಯಡಿಯೂರಪ್ಪ ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಯಡಿಯೂರಪ್ಪ ಅವರು 6ನೇ ತರಗತಿವರೆಗೆ ಬೂಕನಕೆರೆ ಸರ್ಕಾರಿ ಶಾಲೆಯಲ್ಲೇ ಓದಿದರು. ನಂತರ ಮಂಡ್ಯದಲ್ಲಿದ್ದ ತಾತ (ತಾಯಿಯ ತಂದೆ) ಸಂಗಪ್ಪ ಅವರ ಮಡಿಲು ಸೇರಿದರು.

ಸಂಗಪ್ಪ ಅವರು ಮಂಡ್ಯದ ಪೇಟೆಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಿಂಬೆಹಣ್ಣು ವ್ಯಾಪಾರ ಮಾಡುತ್ತಿದ್ದ ಅವರು ಮೊಮ್ಮಗನ ಜವಾಬ್ದಾರಿ ವಹಿಸಿಕೊಂಡರು. ಯಡಿಯೂರಪ್ಪ ಅವರು ಕೂಡ ತಾತನ ಜೊತೆ ನಿಂಬೆಹಣ್ಣು ಮಾರುತ್ತಿದ್ದರು ಎಂಬ ವಿಚಾರ ಕುತೂಹಲ ಮೂಡಿಸುತ್ತದೆ. ಪೇಟೆಬೀದಿಯಲ್ಲೇ ಇದ್ದ ಟೌನ್‌ ಮಿಡ್ಲ್‌ ಸ್ಕೂಲ್‌ಗೆ ಸೇರಿದ್ದ ಯಡಿಯೂರಪ್ಪ ಅವರು ತಾತನ ವ್ಯಾಪಾರಕ್ಕೆ ಸಹಾಯ ಮಾಡುತ್ತಿದ್ದರು.

ಪದ್ಮನಾಭ

‘ಪೇಟೆಬೀದಿಯಲ್ಲಿ ಯಡಿಯೂರಪ್ಪ ಅವರು ತಾತನ ಜೊತೆ ವ್ಯಾಪಾರಕ್ಕೆ ಕುಳಿತುಕೊಳ್ಳುತ್ತಿದ್ದ ದಿನಗಳನ್ನು ನಾನು ನೋಡಿದ್ದೇನೆ. ಅವರ ತಾತ ಸಂಗಪ್ಪ ಬಹಳ ಸಾತ್ವಿಕ ಸ್ವಭಾವದವರು. ಆದರೆ ಯಡಿಯೂರಪ್ಪ ಕೋಪಿಷ್ಠ. ಅವರು ಕೋಪ ಮಾಡಿಕೊಂಡಾಗಲೆಲ್ಲಾ ತಾತ ಮೊಮ್ಮಗನನ್ನು ಬುದ್ಧಿ ಹೇಳುತ್ತಿದ್ದುದನ್ನು ಕಣ್ಣಾರೆ ನೋಡಿದ್ದೇನೆ. ಅವರು ಭವಿಷ್ಯದಲ್ಲಿ ನಾಡಿನ ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ಕನಸು, ಮನಸ್ಸಿನಲ್ಲೂ ಎಣಿಸಿರಲಿಲ್ಲ’ ಎಂದು ಯಡಿಯೂರಪ್ಪ ಅವರ ಒಡನಾಡಿ, ಯಡಿಯೂರಪ್ಪ ಅವರಿದ್ದ ಮನೆಯ ಮಾಲೀಕರ ಮಗ, 80 ವರ್ಷ ವಯಸ್ಸಿನ ಪದ್ಮನಾಭ ಹೇಳಿದರು.

ಟೌನ್‌ ಮಿಡ್ಲ್‌ ಸ್ಕೂಲ್‌ನಲ್ಲಿ ಯಡಿಯೂರಪ್ಪ ಅವರ ದಾಖಲಾತಿ (ಕ್ರಮ ಸಂಖ್ಯೆ 125)

ಆರ್‌ಎಸ್‌ಎಸ್‌ ಚಟುವಟಿಕೆಯೇ ಅಡಿಪಾಯ

ಯಡಿಯೂರಪ್ಪ ಅವರ ಬಾಲ್ಯದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ಬಲವಾದ ಅಡಿಪಾಯ ಹಾಕಿತ್ತು. 14 ವರ್ಷ ಹುಡುಗನಾಗಿದ್ದಾಗಲೇ ಅವರು ಆರ್‌ಎಸ್‌ಎಸ್‌ ಸಂಪರ್ಕಕ್ಕೆ ಬಂದಿದ್ದರು. ಟೌನ್‌ಮಿಡ್ಲ್‌ ಸ್ಕೂಲ್‌ ಆವರಣದಲ್ಲೇ ನಡೆಯುತ್ತಿದ್ದ ತಾಲೀಮು, ಶಿಬಿರಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು. ಸಣ್ಣ ವಯಸ್ಸಿನಲ್ಲೇ ಬೇರೆ ಬೇರೆ ಊರುಗಳ ಶಿಬಿರಗಳಿಗೆ ಹೋಗಿ ಬರುತ್ತಿದ್ದರು. ಸಣ್ಣ ಹುಡುಗನಾಗಿದ್ದರೂ ದೊಡ್ಡವರ ಒಡನಾಟ ಇಟ್ಟುಕೊಂಡಿದ್ದರು.

ಬೆಣ್ಣೆ ಚಂದ್ರಶೇಖರ್

‘ಸಂಜೆ 5.30 ಎಂದರೆ ಒಂದು ನಿಮಿಷವೂ ಆಚೀಚೆ ಆಗುತ್ತಿರಲಿಲ್ಲ. ಸಮಯ ಪರಿಪಾಲನೆಯ ಸಾಕಾರ ಮೂರ್ತಿಯಾಗಿದ್ದರು. ಶಿಸ್ತಿನ ಸಿಪಾಯಿಯಂತೆ ತಯಾರಾಗಿ ಬರುತ್ತಿದ್ದರು. ಅವರ ಜೊತೆ ಆಡಿದ ಆಟ, ಕುಣಿದು ಕುಪ್ಪಳಿಸಿದ ದಿನಗಳನ್ನು ಎಂದಿಗೂ ಮರೆಯಲಾರೆ. ಗೆಳೆಯರ ಜೊತೆ ಪ್ರೀತಿಯಿಂದ ಬೆರೆಯುತ್ತಿದ್ದರು. ಅವರೊಂದಿಗೆ ನಾನು ಹಲವು ಬಾರಿ ಸಾತನೂರು ಬೆಟ್ಟಕ್ಕೆ (ಕಂಬದ ಸರಸಿಂಹಸ್ವಾಮಿ) ಹೋಗಿದ್ದೇನೆ’ ಎಂದು ಪೇಟೆಬೀದಿಯಲ್ಲಿ ಬೆಣ್ಣೆ ವ್ಯಾಪಾರ ಮಾಡುತ್ತಿದ್ದ ಬೆಣ್ಣೆ ಚಂದರಶೇಖರ್‌ ನೆನಪು ಮಾಡಿಕೊಳ್ಳುತ್ತಾರೆ.

ಯಡಿಯೂರಪ್ಪ ಅವರು ಓದಿದ ಬೂಕನಕೆರೆ ಶಾಲೆ

ಕಬಡ್ಡಿ ಆಲ್‌ರೌಂಡರ್‌

ಯಡಿಯೂರಪ್ಪ ಅವರು ಪ್ರೌಢಶಾಲೆ ಮತ್ತು ಪಿಯು ಶಿಕ್ಷಣವನ್ನು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ಧಾರಿ ಬದಿಯಲ್ಲಿರುವ ಮುನಿಸಿಪಲ್‌ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿದರು. ಆ ಕಾಲದಲ್ಲಿ ಅವರು ಅತ್ಯುತ್ತಮ ಕಬಡ್ಡಿಪಟುವಾಗಿದ್ದರು. ಅವರ ಆಟವನ್ನು ನೋಡಲು ಅಕ್ಕಪಕ್ಕದ ಊರುಗಳ ಜನರೂ ಬಂದು ಸೇರುತ್ತಿದ್ದರು.

‘ನಾಗರಾಜ್‌ ಅವರ ನಾಯಕತ್ವದ ಭಾರತ್‌ ಕಬಡ್ಡಿ ತಂಡದಲ್ಲಿ ಅವರು ಮುಖ್ಯರೈಡರ್‌, ಆಲ್‌ಡೌಂಡರ್‌ ಆಗಿದ್ದರು. ಅವರ ಆಟ ನೋಡಲು ನಾನು ತಪ್ಪದೇ ಹೋಗುತ್ತಿದ್ದೆ. ಭಾರತ್‌ ಕಬಡ್ಡಿ ತಂಡ ಹಾಗೂ ಟೌನ್‌ ಸ್ಪೋರ್ಟ್‌ ಕ್ಲಬ್‌ ಜೊತೆ ನಡೆಯುತ್ತಿದ್ದ ಪಂದ್ಯ ರೋಚಕವಾಗಿ ನಡೆಯುತ್ತಿತ್ತು. ಯಡಿಯೂರಪ್ಪ ಅವರೇ ಪ್ರಮುಖ ಆಕರ್ಷಣೆಯಾಗಿದ್ದರು. ಅವರು ಇಂದು ನಾಡಿನ ಮುಖ್ಯಮಂತ್ರಿ ಆಗಿರುವುದು ಹೆಮ್ಮೆಯ ವಿಚಾರ’ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ ಹೇಳಿದರು.

ನಾಯಕತ್ವ ಗುಣ

ಬಾಲ್ಯದ ದಿನಗಳಲ್ಲೇ ಯಡಿಯೂರಪ್ಪ ಅವರ ಜೊತೆಗಿದ್ದ ನಾಯಕತ್ವ ಗುಣವನ್ನು ಒಡನಾಡಿಗಳು ಕಂಡಿದ್ದರು. ಪ್ರತಿ ಚಟುವಟಿಕೆಯಲ್ಲೂ ಅವರು ತೋರುತ್ತಿದ್ದ ಶ್ರದ್ಧೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗುತ್ತಿತ್ತು.

ಸತ್ಯನಾರಾಯಣ ರಾವ್

‘ಬಾಲ್ಯದ ದಿನಗಳಲ್ಲೇ ಯಡಿಯೂರಪ್ಪ ಅವರಿಗೆ ಗಂಭೀರ ಆಲೋಚನೆಗಳಿದ್ದವು. ಸ್ನೇಹತರ ಜೊತೆಯಲ್ಲೂ ಒಂದಿಲ್ಲೊಂದು ವಿಚಾರ ಕುರಿತು ಚರ್ಚೆ ಮಾಡುತ್ತಿದ್ದರು. ಈತ ದೊಡ್ಡ ವ್ಯಕ್ತಿಯಾಗುತ್ತಾನೆ ಎಂಬ ನಿರೀಕ್ಷೆ ನಮಗೆ ಮೊದಲಿನಿಂದಲೂ ಇತ್ತು. ಆದರೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ’ ಎಂದು ಅವರ ಬಾಲ್ಯ ಸ್ನೇಹಿತ ಸತ್ಯನಾರಾಯಣ ರಾವ್‌ ಹೇಳಿದರು.

‘ಯಡಿಯೂರಪ್ಪ ಅವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದರು. ನಂತರ ಅದನ್ನು ಬಿಟ್ಟು ಆಡಿಷನ್‌ ಅಂಡ್‌ ಕೋ ಕಂಪನಿ ಸೇರಿದ್ದರು. ನಂತರ ಕೆಲಸದ ನಿಮಿತ್ತ ಶಿಕಾರಿಪುರಕ್ಕೆ ಹೋಗಬೇಕಾಯಿತು. ನಂತರ ಅವರ ಹೋರಾಟದ ದಿನಗಳು, ರಾಜಕೀಯ ಹೆಜ್ಜೆ ಆರಂಭವಾಯಿತು. ಮಂಡ್ಯದಲ್ಲಿ ಕಳೆದ ಬಾಲ್ಯದ ದಿನಗಳನ್ನು ಯಡಿಯೂರಪ್ಪ ಅವರು ಎಂದಿಗೂ ಮರೆತಿಲ್ಲ. ಎಲ್ಲಾ ಸ್ನೇಹಿತರ ಜೊತೆಯಲ್ಲಿ ಈಗಲೂ ಸಂಪರ್ಕ ಇಟ್ಟುಕೊಂಡಿದ್ದಾರೆ’ ಎಂದು ಬಾಲ್ಯ ಸ್ನೇಹಿತ ಶಂಕರ ರಾವ್‌ ಹೇಳಿದರು.

ಬಿ.ಎಸ್‌.ಯಡಿಯೂರಪ್ಪ, ಕೆ.ಪಿ.ಚಂದ್ರಶೇಖರ್‌, ಶಂಕರ್‌ ರಾವ್‌ ಇದ್ದಾರೆ

ಓದಿದ ಶಾಲೆಗಳಿಗೆ ಕಾಯಕಲ್ಪ

ಯಡಿಯೂರಪ್ಪ ಅವರು ಓದಿದ ಟೌನ್‌ಮಿಡ್ಲ್‌ ಸ್ಕೂಲ್‌ ಅನಾಥ ಸ್ಥಿತಿ ತಲುಪಿತ್ತು. ಅದರ ಬಗ್ಗೆ ಈಚೆಗೆ ಪ್ರಜಾವಾಣಿ ವಿಶೇಷ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಮುಖ್ಯಮಂತ್ರಿಗಳು ಓದಿದ ಎರಡೂ ಶಾಲೆಗಳಿಗೂ ಕಾಯಕಲ್ಪ ನೀಡುತ್ತಿದೆ.

ಮುನ್ಸಿಪಲ್‌ ಹೈಸ್ಕೂಲ್‌ ಕಟ್ಟಡ ದುರಸ್ತಿಗೆ ಜಿಲ್ಲಾಡಳಿತ ₹ 4 ಕೋಟಿ ವೆಚ್ಚ ಮಾಡಲು ಮುಂದಾಗಿದೆ. ಶಾಲಾ ಕಟ್ಟಡದ ಕೆಳ ಅಂತಸ್ತು ದುರಸ್ತಿ, ಮೇಲಂತಸ್ತು ನಿರ್ಮಾಣ, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯ ನಿರ್ಮಿಸಲು ₹ 3 ಕೋಟಿ ಹಣ ವೆಚ್ಚ ಮಾಡಲು ನಿರ್ಧರಿಸಿದೆ. ಗ್ರಂಥಾಲಯದಲ್ಲಿ ಪುಸ್ತಕ ಹಾಗೂ ಪೀಠೋಪಕರಣಗಳ ಖರೀದಿಗೆ ₹ 20 ಲಕ್ಷ ವೆಚ್ಚ ಮಾಡಲಾಗುತ್ತಿದೆ. ₹ 30 ಲಕ್ಷ ಹಣದಲ್ಲಿ ವಿಜ್ಞಾನ ಪ್ರಯೋಗಾಲಯಕ್ಕೆ ಸಲಕರಣೆಗಳನ್ನು ಖರೀದಿ ಮಾಡಲಾಗುತ್ತದೆ. ಸಭಾಂಗಣಕ್ಕೆ ₹ 35 ಲಕ್ಷ, ಶಾಲಾ ಕೊಠಡಿ, ಸಭಾಂಗಣದ ಪೀಠೋಪಕರಣಕ್ಕೆ ₹ 15 ಲಕ್ಷ ವೆಚ್ಚ ಮಾಡಲು ನಿರ್ಧರಿಸಲಾಗಿದೆ.

‘ಮುಖ್ಯಮಂತ್ರಿ ಓದಿರುವ ಮಂಡ್ಯದ ಎರಡೂ ಶಾಲೆಗಳನ್ನು ಜಿಲ್ಲೆಯ ಮಾದರಿ ಶಾಲೆಗಳನ್ನಾಗಿ ನಿರ್ಮಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT