ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳ ಆರಂಭ; ಚಿಣ್ಣರ ಸಂಭ್ರಮ

ವಿದ್ಯಾರ್ಥಿಗಳಿಗೆ ಹೂಗುಚ್ಛ, ಸಿಹಿ ನೀಡಿ ಸ್ವಾಗತ
Last Updated 26 ಅಕ್ಟೋಬರ್ 2021, 4:18 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌ ಕಾರಣದಿಂದ ಒಂದೂವರೆ ವರ್ಷದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು (1 ರಿಂದ 5) ಮುಚ್ಚಿದ್ದು, ಸೋಮವಾರ ಮತ್ತೆ ತರಗತಿಗಳು ಆರಂಭವಾದ ಕಾರಣ ಚಿಣ್ಣರಿಗೆ ಶಾಲೆಯಲ್ಲಿ ಸ್ವಾಗತ ಕೋರಲಾಯಿತು.

ಸರ್ಕಾರಿ ಶಾಲೆ ಸೇರಿದಂತೆ ಕೆಲವು ಖಾಸಗಿ ಶಾಲೆಗಳೂ ಚಿಣ್ಣರನ್ನು ಸಿಹಿ ತಿನಿಸು ನೀಡಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಶಿಕ್ಷಕರು ಮತ್ತು ಶಾಲೆ ಆಡಳಿತ ಮಂಡಳಿಯ ಮುಖ್ಯಸ್ಥರು ಸಾಥ್‌ ನೀಡಿದರು. ಶಾಲೆಯ ಮುಂಭಾಗದಲ್ಲಿ ಹಾಕಿದ್ದ ರಂಗೋಲಿಗಳು, ಬಾಗಿಲಿಗೆ ಕಟ್ಟಿದ್ದ ಬಲೂನ್‌ ಮತ್ತು ಹಸಿರು ತೋರಣಗಳು ಚಿಣ್ಣರ ಸಂಭ್ರಮವನ್ನು ಹೆಚ್ಚಿಸಿದವು.

ಶಾಲೆ ಆರಂಭವಾಗಿದ್ದರಿಂದ ಮಕ್ಕಳ ಮುಖದಲ್ಲಿ ಮಂದಹಾಸ ಮನೆ ಮಾಡಿತ್ತು. ಹಳೆಯ ಸ್ನೇಹಿತರ ಜೊತೆಗಿನ ಬಾಂಧವ್ಯ ಮತ್ತೆ ಸಿಕ್ಕಿತು ಎಂಬ ಸಂತೋಷದಲ್ಲಿ ಚಿಣ್ಣರು ಖುಷಿಪಟ್ಟರು. ಮೊದಲ ದಿನವಾದ ಸೋಮವಾರ ಮಕ್ಕಳಿಗೆ ಪಾಠಕ್ಕಿಂತ ಆಟ, ಸಂಗೀತ ಸೇರಿದಂತೆ ಮುದ ಎನಿಸುವ ಮನರಂಜನಾ ಕಾರ್ಯಕ್ರಮಗಳೇ ಹೆಚ್ಚಿದ್ದವು. ಶಿಕ್ಷಕರೂ ಮಕ್ಕಳ ಜೊತೆ ಮಕ್ಕಳಾಗಿ ಬೆರೆತರು. ಕೆಲವು ಖಾಸಗಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಆರಂಭದ ದಿನವನ್ನು ಮುಂದೂಡಿದ್ದರು. ವಿವಿಧ ಸಂಘಟನೆಗಳ ಮುಖಂಡರು ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ನೋಟ್‌ಬುಕ್‌, ಚಾಕೊಲೆಟ್‌ ನೀಡಿ ಸ್ವಾಗತಿಸಿದರು.

ಆರು ವರ್ಷದಿಂದ ಮುಚ್ಚಿದ ಶಾಲೆ ಆರಂಭ: ಮಂಡ್ಯ ತಾಲ್ಲೂಕಿನ ಚನ್ನಪ್ಪನದೊಡ್ಡಿ ಗ್ರಾಮದಲ್ಲಿ ಆರು ವರ್ಷಗಳಿಂದ ಮುಚ್ಚಿದ್ದ ಪ್ರಾಥಮಿಕ ಶಾಲೆಯನ್ನು ಮತ್ತೆ ತೆರೆದು ತರಗತಿಗಳು ಆರಂಭವಾದವು. ಏಕೆಂದರೆ, ಮಕ್ಕಳ ದಾಖಲಾತಿ ಇಲ್ಲದೆ ಇರುವುದರಿಂದ ಶಾಲೆಯನ್ನು ಮುಚ್ಚಲಾಗಿತ್ತು. 30 ಮಕ್ಕಳು 1 ರಿಂದ 6ನೇ ತರಗತಿಗೆ ಈ ಬಾರಿ ದಾಖಲಾಗಿದ್ದು, ಪೋಷಕರು ಮತ್ತು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ದಕ್ಷಿಣ ವಲಯ ಬಿಇಒ ಚಂದ್ರಕಾಂತ ಅವರು ‘ಪ್ರಜಾವಾಣಿ’ ಜೊತೆ ಸಂತೋಷ ಹಂಚಿಕೊಂಡರು.

ಹನಿಯಂಬಾಡಿ,ಮರಕಾರಡ ದೊಡ್ಡಿ, ಹೊಸಬೂ ದನೂರು, ಸೇರಿದಂತೆ ದಕ್ಷಿಣ ವಲಯದ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ಬಿಇಒ ಅವರು, ಶಾಲಾ ಶುಚಿತ್ವ ಹಾಗೂ ಕೋವಿಡ್‌ ನಿಯಮಗಳ ಬಗ್ಗೆ ಪರಿಶೀಲನೆ ನಡೆಸಿದರು. ತಾಲ್ಲೂಕಿನ ದಕ್ಷಿಣ ವಲಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಜರಿ ಶೇ 80ರಷ್ಟು ಇತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT