ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೂನ್ಯ ಸಾಧನೆ ಭಯಕ್ಕೆ ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ: ಸಿದ್ದರಾಮಯ್ಯ

ಗ್ಯಾರಂಟಿ ಸಮಾವೇಶ: ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಸಿ.ಎಂ ವಾಗ್ದಾಳಿ
Published 18 ಫೆಬ್ರುವರಿ 2024, 21:16 IST
Last Updated 18 ಫೆಬ್ರುವರಿ 2024, 21:16 IST
ಅಕ್ಷರ ಗಾತ್ರ

ಮಳವಳ್ಳಿ (ಮಂಡ್ಯ ಜಿಲ್ಲೆ): ‘2018ರ ವಿಧಾನಸಭೆ ಚುನಾವಣೆಯಲ್ಲಿ 39 ಸ್ಥಾನ ಪಡೆದಿದ್ದ ಜೆಡಿಎಸ್‌ 2023ರಲ್ಲಿ 19 ಸ್ಥಾನಕ್ಕಿಳಿದಿದೆ. ಮುಂಬರುವ ಚುನಾವಣೆಗೆ ಶೂನ್ಯ ಸಾಧನೆಯಾಗುತ್ತದೆ ಎಂಬ ಭಯದಿಂದಾಗಿ ಎಚ್‌.ಡಿ.ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಪಟ್ಟಣದ ಶಾಂತಿ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ‘ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಮುಂದಿನ ಜನ್ಮವಿದ್ದರೆ ಮುಸ್ಲಿಂ ಕುಟುಂಬದಲ್ಲಿ ಹುಟ್ಟುತ್ತೇನೆ ಎಂದು ಹೇಳಿದ್ದ ಎಚ್‌.ಡಿ.ದೇವೇಗೌಡರು ಈಗ ಏಕೆ ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ? ಮಿಸ್ಟರ್‌ ದೇವೇಗೌಡರೇ, ಕುಮಾರಸ್ವಾಮಿಯನ್ನು ಬಿಜೆಪಿ ಜೊತೆ ನಾನೇ ಕಳುಹಿಸಿದ್ದೇನೆ ಎಂದು ಹೇಳುತ್ತೀರಲ್ಲಾ, ನಿಮ್ಮ ಕೈಮುಗಿದು ಕೇಳಿಕೊಳ್ಳುತ್ತೇನೆ ನಿಮ್ಮ ಪಕ್ಷದಲ್ಲಿರುವ ಜಾತ್ಯತೀತ ಪದವನ್ನು ತೆಗೆದುಹಾಕಿಬಿಡಿ. ಆ ಪದವನ್ನು ಬಳಸಿಕೊಳ್ಳಲು ನಿಮಗೆ ಯಾವುದೇ ನೈತಿಕ ಹಕ್ಕಿಲ್ಲ’ ಎಂದರು.

‘ಜೆಡಿಎಸ್‌ ಸ್ಥಿತಿ ಕಂಡು ಅಲ್ಲಿನ ಶಾಸಕರು, ಮುಖಂಡರು ಪಕ್ಷ ತೊರೆಯುತ್ತಿದ್ದರು. ಅದನ್ನು ತಡೆಯಲು ದೇವೇಗೌಡರು ಹಾಗೂ ಕುಮಾರಸ್ವಾಮಿ ಮೈತ್ರಿಯ ನಾಟಕವಾಡುತ್ತಿದ್ದಾರೆ. ಜೆಡಿಎಸ್‌ ಪಕ್ಷವನ್ನು ಮುಗಿಸಿಬಿಡುತ್ತಾರೆ, ಅದಕ್ಕೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಜನರು ಇದನ್ನು ನಂಬಬೇಕಾ? ನಿಮ್ಮದೂ ಒಂದು ರಾಜಕೀಯ ಪಕ್ಷ. 19 ಜನ ಶಾಸಕರಾಗಿದ್ದಾರೆ. ಒಂದು ಪಕ್ಷ ಇನ್ನೊಂದು ಪಕ್ಷ ಮುಗಿಸಲು ಸಾಧ್ಯವೇ?’ ಎಂದು ಕೇಳಿದರು.

‘ನಾವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರು, ‘ಗ್ಯಾರಂಟಿ ಯೋಜನೆಗಳು ಜಾರಿಯಾದರೆ ಕರ್ನಾಟಕ ದಿವಾಳಿಯಾಗುತ್ತದೆ’ ಎಂದು ಭಾಷಣ ಮಾಡಿದ್ದರು. ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆವರೆಗೆ ಮಾತ್ರ ಎಂದು ಈಗ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮೊನ್ನೆ ಮಂಡಿಸಿದ ಬಜೆಟ್‌ನಲ್ಲಿ ₹ 57 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದ್ದೇವೆ. ಮಿಸ್ಟರ್‌ ಆರ್‌.ಅಶೋಕ, ಬೊಮ್ಮಾಯಿ ಓದಿಕೊಳ್ರಪ್ಪಾ’ ಎಂದರು.

‘2013ರಿಂದ 2018ರವರೆಗೆ ನಾವು ಮಾಡಿದ ಕೆಲಸಗಳನ್ನು ಹೇಳಿಕೊಳ್ಳಲಿಲ್ಲ, ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾದೆವು. ಹೀಗಾಗಿ ನಾವು ಆಗ ಸೋಲು ಕಾಣಬೇಕಾಯಿತು. ಆದರೆ, ಈಗ ಹಿಂದೆ ಮಾಡಿದ ತಪ್ಪುಗಳನ್ನು ಮಾಡುವುದಿಲ್ಲ. ನಾವು ಮಾಡಿದ ಕೆಲಸಗಳನ್ನು, ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಜನರಿಗೆ ಸತ್ಯ ಹೇಳಿ ಎಂದು ನಮ್ಮ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದೇವೆ’ ಎಂದರು.

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ ‘ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಕೃಷಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆ ವಿವರವಾಗಿ ಬಜೆಟ್‌ ವರದಿ ಪ್ರಕಟಿಸಿದೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಯೊಬ್ಬರಿಗೆ  ಯುವನಿಧಿ ಯೋಜನೆ ಚೆಕ್‌ ವಿತರಿಸಿದರು. ಪಿ.ಎಂ.ನರೇಂದ್ರಸ್ವಾಮಿ ಗಣಿಗ ರವಿಕುಮಾರ್‌ ಎನ್‌.ಚಲುವರಾಯಸ್ವಾಮಿ ಇದ್ದಾರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಯೊಬ್ಬರಿಗೆ  ಯುವನಿಧಿ ಯೋಜನೆ ಚೆಕ್‌ ವಿತರಿಸಿದರು. ಪಿ.ಎಂ.ನರೇಂದ್ರಸ್ವಾಮಿ ಗಣಿಗ ರವಿಕುಮಾರ್‌ ಎನ್‌.ಚಲುವರಾಯಸ್ವಾಮಿ ಇದ್ದಾರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು

ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು

ಸಿದ್ದರಾಮಯ್ಯ ವಿಶ್ವಾಸ ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಆದರೆ ಬಿಜೆಪಿ ಮುಖಂಡರು ಬರೀ ಬುರುಡೆ ಬಿಡುತ್ತಿದ್ದು 28ಕ್ಕೆ 28 ಸ್ಥಾನಗಳಲ್ಲೂ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ ಅವರು ಡೋಂಗಿಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕೊಟ್ಟ ಮಾತಿನಂತೆ ಕೇವಲ 8 ತಿಂಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಹೆಮ್ಮೆ ನಮಗಿದೆ. ಉಪಕಾರ ಮಾಡಿದವರನ್ನು ಜನರು ಎಂದೂ ಮರೆಯುವುದಿಲ್ಲ ಲೋಕಸಭಾ ಚುನಾವಣೆಯಲ್ಲಿ ಖಂಡಿತಾ ನಮ್ಮ ಕೈಹಿಡಿಯುತ್ತಾರೆ. ಬಡವರಿಗೆ ಅಕ್ಕಿಕೊಡಲು ನಿರಾಕರಿಸಿದ ಬಿಜೆಪಿಗೆ ಜನರು ವೋಟು ಕೊಡುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಸಿಎಂ ಡಿಸಿಎಂ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿ’ ಎಂಬ ಸಚಿವ ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ಸ್ಥಳೀಯ ಮಟ್ಟದಲ್ಲಿ ಯಾರಿಗೆ ಒಲವು ಇರುತ್ತದೆಯೋ ಅವರು ಅಭ್ಯರ್ಥಿ ಆಗುತ್ತಾರೆ. ಸ್ಥಳೀಯರು ಯಾರ ಹೆಸರು ಹೇಳುತ್ತಾರೋ ಅವರಿಗೆ‌ ಟಿಕೆಟ್ ಕೊಡುತ್ತೇವೆ. ಮಹದೇವಪ್ಪ ಅವರ ಹೆಸರು ಹೇಳಿದರೆ ಅವರಿಗೆ ಬೇರೆಯವರ ಹೆಸರು ಹೇಳಿದರೆ ಬೇರೆಯವರಿಗೆ ನೀಡುತ್ತೇವೆ’ ಎಂದರು. ಮೈಸೂರು–ಕೊಡಗು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಟ ಡಾಲಿ ಧನಂಜಯ ಸ್ಪರ್ಧಿಸುತ್ತಾರೆಂದು ಚರ್ಚೆ ಆಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ‘ನಮ್ಮ ಪಕ್ಷದಲ್ಲಿ ಅದರ ಬಗ್ಗೆ ಚರ್ಚೆಯಾಗಿಲ್ಲ. ನನಗೆ ಗೊತ್ತೂ ಇಲ್ಲ; ಚರ್ಚೆಯೂ ಆಗಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT