ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಿಸಿಕೊಂಡಷ್ಟು ಬೆಳೆಯುತ್ತಲೇ ಇರುವ ಕೆವಿಎಸ್‌

Published 15 ಫೆಬ್ರುವರಿ 2024, 6:35 IST
Last Updated 15 ಫೆಬ್ರುವರಿ 2024, 6:35 IST
ಅಕ್ಷರ ಗಾತ್ರ

ಮಂಡ್ಯ: ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಜನಪದ, ಹೋರಾಟ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರೊ.ಜಯಪ್ರಕಾಶಗೌಡ ಅವರು ಕರ್ನಾಟಕ ಸಂಘಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ವಿವಿಧ ಕಲಾ ಪ್ರಕಾರಗಳ ಪೋಷಣೆಯೊಂದಿಗೆ, ಎಲ್ಲರನ್ನೂ ಒಳಗೊಳ್ಳುವುದರೊಂದಿಗೆ ಸಂಸ್ಕೃತಿ ಪರಿಚಾರಕರಾಗಿರುವ ಜೆಪಿ ಮಂಡ್ಯ ಜಿಲ್ಲೆಯಲ್ಲಿ ಸಮಕಾಲೀನ ಸಾಂಸ್ಕೃತಿಕ ನಾಯಕನ ಸ್ಥಾನದಲ್ಲಿ ನಿಂತಿದ್ದಾರೆ.

ಜೆಪಿಯವರಿಗೀಗ 75 ವರ್ಷ ವಯಸ್ಸು. ಕುವೆಂಪು ಚಿಂತನೆಗಳ ಜೊತೆಯಲ್ಲೇ ಜೀವಿಸಿ, ಮಂಡ್ಯ ನಿರ್ಮಾಪಕ ಕೆ.ವಿ.ಶಂಕರಗೌಡರ ನೆರಳಲ್ಲೇ ನಡೆಯುತ್ತಿರುವ ಜಯಪ್ರಕಾಶಗೌಡರಿಗೆ ಕಟ್ಟುವ, ಸಂಘಟಿಸುವ, ರೂಪಿಸುವ, ಬೆಳೆಸುವ ಮಾರ್ಗವೆಂದರೆ ಅಚ್ಚುಮೆಚ್ಚು.

ಜೆಪಿ–75ರ ಅಂಗವಾಗಿ  ‘ರಂಗಾಭಿನಂದನೆ’ ಗ್ರಂಥದ ಮೂಲಕ ಅಭಿನಂದನೆ ನಡೆಯುತ್ತಿದೆ. ಜ.15ರಂದು ಮಂಡ್ಯದ ಅಂಬೇಡ್ಕರ್‌ ಭವನದಲ್ಲಿ ಇಡೀ ದಿನ ಜೆಪಿ ನಡೆದ ಹಾದಿಯ ದರ್ಶನವಾಗಲಿದೆ. ಇಂತಹ ಹೊತ್ತಿನಲ್ಲಿ ಪ್ರೊ.ಬಿ.ಜಯಪ್ರಕಾಶಗೌಡರು ‘ಪ್ರಜಾವಾಣಿ’ಯೊಂದಿಗೆ ನಡೆದುಬಂದ ಹಾದಿಯನ್ನೊಮ್ಮೆ ಹಿಂದೆ ತಿರುಗಿ ನೋಡಿದ್ದಾರೆ.

* ಕೆ.ವಿ.ಶಂಕರಗೌಡರ ಜೊತೆಗಿನ ನಿಮ್ಮ ಒಡನಾಟ ಎಂಥದ್ದು?
ಉ:
ಅವರನ್ನು ಗುರು ಎನ್ನಲೇ, ಹಿತೈಷಿ ಎನ್ನಬೇಕಾ, ಸ್ನೇಹಿತ ಎನ್ನಲೇ, ತಂದೆ ಸಮಾನರು ಎನ್ನವುದೇ, ಮಾರ್ಗದರ್ಶಿ ಎನ್ನಬೇಕಾ? ಯಾವುದೇ ಪದ ಬಳಸಿದರೂ ಅದನ್ನೂ ಮೀರಿದ ಒಡನಾಟ ನಮ್ಮದು. ಇವತ್ತಿಗೂ ಶಂಕರಗೌಡರನ್ನು ಭಾವಿಸಿಕೊಂಡಷ್ಟು ಬೆಳೆಯುತ್ತಲೇ ಇದ್ದಾರೆ. ಅವರು ದೈಹಿಕವಾಗಿ ತೀರಿಕೊಂಡು 30 ವರ್ಷ ಕಳೆದರೂ ಮಂಡ್ಯದ ಪ್ರತಿ ವಿಚಾರದಲ್ಲೂ ಜೀವಿಸಿಯೇ ಇದ್ದಾರೆ. ಜಾತ್ಯತೀತ, ವರ್ಗಾತೀತ, ವರ್ಣಾತೀತ, ಧರ್ಮತೀತ ಭಾವ ಅವರಲ್ಲಿತ್ತು. ನಾನೊಬ್ಬ ಅವರ ಕಾಲೇಜಿನ ನೌಕರನಾಗಿದ್ದೆ. ಅವರು ನನ್ನ ಸಲಹೆ ಕೇಳವಷ್ಟು ದೊಡ್ಡತನ ತೋರುತ್ತಿದ್ದರು, ಎಲ್ಲರನ್ನೂ, ಎಲ್ಲವನ್ನು ಒಪ್ಪಿಕೊಳ್ಳುವ ಗುಣ ಅವರಲ್ಲಿತ್ತು. ಮನೆ ಮಠ ಮರೆತು ಸಾಹಿತ್ಯ, ಸಂಸ್ಕೃತಿ, ಸಮಾಜ, ಸಮಾನತೆಗಾಗಿ ಸದಾ ತುಡಿಯುತ್ತಿದ್ದರು.

* 50 ವರ್ಷಗಳ ಸಂಸ್ಕೃತಿ ಪರಿಚಾರಿಕೆಯಲ್ಲಿ ಕಂಡಿದ್ದೇನು?
ಉ:
ನನ್ನಪ್ಪ ಬೋರೇಗೌಡ ನನ್ನನ್ನು ಸಾಂಸ್ಕೃತಿಕವಾಗಿ ಬೆಳೆಸಿದರು. ಮನುಷ್ಯ ಸಾಂಸ್ಕೃತಿಕವಾಗಿ ಗಟ್ಟಿಗೊಳ್ಳದ ಹೊರತು ಸಮಾಜದ ಯಾವುದೇ ಪೀಡೆಗಳನ್ನು ತೊಡೆದು ಹಾಕಲಾರ. ಸಂಘಟನಾತ್ಮಕವಾಗಿ ಇಲ್ಲದಿದ್ದರೆ ಪ್ರಗತಿಪರ ಆಲೋಚನೆ ಸಾಧ್ಯವಿಲ್ಲ, ಪ್ರಗತಿಪರವಾಗಿ ಆಲೋಚಿಸದಿದ್ದರೆ ಸಂಘಟನೆ ಅಸಾಧ್ಯ. ಒಂದು ರೀತಿಯ ‘ಸಂಘಂ ಶರಣಂ ಗಚ್ಛಾಮಿ’.

* ಕರ್ನಾಟಕ ಸಂಘಕ್ಕೆ 75 ವರ್ಷ ತುಂಬಿದೆ, ಸಂಘದ ಉದ್ದೇಶ ಈಡೇರಿದೆಯೇ?
ಉ:
ಇನ್ನೂ ಈಡೇರಿಲ್ಲ, ಗುರಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. 1942ರ ಭಾರತ ಬಿಟ್ಟು ತೊಲಗಿ ಚಳವಳಿ ವೇಳೆಗೆ ಸ್ವಾತಂತ್ರ್ಯ ದೊರೆಯುವ ಖಾತ್ರಿಯಾಗಿತ್ತು. ರಾಷ್ಟ್ರೀಯ ಚಿಂತನೆ ಒಂದೆಡೆಯಾದರೆ ಪ್ರಾದೇಶಿಕ ಅಸ್ಮಿತೆಗಾಗಿ ಯೋಚಿಸುವ ಕಾಲ ಆರಂಭವಾಗಿತ್ತು. ಕುವೆಂಪು ಅವರ ‘ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಕಾವ್ಯಕಲ್ಪನೆಯ ಸಾಕಾರಕ್ಕಾಗಿ ಕರ್ನಾಟಕ ಸಂಘ ಹುಟ್ಟಿಕೊಂಡಿತು. ನನ್ನೆಲ್ಲಾ ವ್ಯವಸಾಯ, ನಾಡು ಸುತ್ತಿದ ಅನುಭವಗಳನ್ನು ಕರ್ನಾಟಕ ಸಂಘಕ್ಕೆ ಧಾರೆಎರೆಯುತ್ತಿದ್ದೇನೆ.

* ಮೂಡಲಪಾಯ ಯಕ್ಷಗಾನದ ಉಳಿವಿನ ಸವಾಲು ಸ್ವೀಕರಿಸಿದ್ದೇಕೆ?
: ಕರಾವಳಿ ಯಕ್ಷಗಾನಕ್ಕಿಂತಲೂ ಪ್ರಾಚೀನವಾದ ಇತಿಹಾಸ ಮೂಡಲಪಾಯ ಪ್ರಕಾರಕ್ಕಿದೆ. ಓದುವ ಕೆಂಪಣ್ಣಗೌಡನೆಂಬ ಯಕ್ಷ ಕವಿ ಹಿಂದೆಯೇ ಮೂರು ಪ್ರಸಂಗಗಳ ಮಟ್ಟು ಕೊಟ್ಟು ಹೋಗಿದ್ದಾರೆ. ಮೂಡಲಪಾಯಕ್ಕೂ ವಿದ್ಯಾವಂತರ ಪ್ರವೇಶವಾಗಬೇಕು ಎನ್ನುವ ಉದ್ದೇಶದೊಂದಿಗೆ ಹೊಸ ರೂಪ ಕೊಡುವ ಪ್ರಯತ್ನ ನಡೆಯುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮೂಡಲಪಾಯ ಹೆಜ್ಜೆಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ, ಇದಕ್ಕೆ ಆದಿಚುಂಚನಗಿರಿ ಮಠ ಬೆನ್ನೆಲುಬಾಗಿ ನಿಂತಿದೆ.

* 75ರ ಹೊತ್ತಿನಲ್ಲಿ ನೀವು ಕಾಣುನ ಕನಸುಗಳೇನು?
ಉ:
ಸದ್ಯ ಸುಸಜ್ಜಿತ ರಂಗಮಂದಿರ ನಿರ್ಮಾಣಗೊಳ್ಳುತ್ತಿದ್ದು ಮುಂದೆ ನಿರಂತರವಾಗಿ ರಂಗಚಟುವಟಿಕೆಗಳು ನಡೆಯಲಿವೆ. ರಂಗಾಯಣ ಮಾದರಿಯಲ್ಲಿ ಮಂಡ್ಯದಲ್ಲೊಂದು ರೆಪರ್ಟರಿ ರೂಪಿಸುವ ಕನಸಿದೆ. ತಂಬೂರಿಯಿಂದ ಹುಟ್ಟಿಕೊಂಡ ತಂತಿವಾದ್ಯ ಕುರಿತ ಅಧ್ಯಯನ, ತಾಳವಾದ್ಯಕ್ಕೆ ತಮಟೆಯೇ ಮೂಲ, ತಮಟೆ– ತಬಲಾ ಬೆಸುಗೆಯ ಮೂಲಕ ಸ್ಪೃಶ್ಯ–ಅಸ್ಪೃಶ್ಯ ತಾರತಮ್ಯ ಅಳಿಸಿ ಒಂದಾಗಿಸುವ ಉದ್ದೇಶವಿದೆ. ಜನಪದ ಕಲೆಗಳ ವಿಸ್ತರಣೆ, ಪುಸ್ತಕ ಪ್ರಕಟಣೆ, ದಾಖಲೆಗಳ ನಿರೂಪಣೆ ಮುಂತಾದ ಕಾರ್ಯಗಳ ಕನಸುಗಳಿವೆ.

ಕ್ಯಾನ್ಸರ್‌ಗೆ ಮರುಗಲಿಲ್ಲ...
* ಕ್ಯಾನ್ಸರ್‌ ಜೊತೆಗೂ ಕೆಲಸ ಮಾಡಲು ಹೇಗೆ ಸಾಧ್ಯವಾಯಿತು? ಕ್ಯಾನ್ಸರ್‌ ಕಾಡುತ್ತಿರುವ ವಿಷಯವನ್ನು ನಾನು ಮುಚ್ಚಿಡಲಿಲ್ಲ ಎಲ್ಲರ ಜೊತೆಯಲ್ಲೂ ಹಂಚಿಕೊಂಡೆ. ರೋಗಕ್ಕೆ ಹೆದರಲಿಲ್ಲ ಮರುಗಲಿಲ್ಲ ಮನೆಯಲ್ಲಿ ಮಲಗಲಿಲ್ಲ ಕರ್ನಾಟಕ ಸಂಘಕ್ಕೆ ಬಂದು ಕೆಲಸ ಮುಂದುವರಿಸಿದೆ. ಆಗಲೇ ಸಂಘದಲ್ಲಿ ಹಲವು ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು. ಕ್ಯಾನ್ಸರ್‌ ಗೆಲುವಿನ ಹಿಂದೆ ಪತ್ನಿ.......ಳ ಸಹಕಾರ ಮರೆಯಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT