ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀರಾಮಾಯಣ ದರ್ಶನಂ’ ಅರ್ಥೈಸಲು ಸಮಗ್ರ ದೃಷ್ಟಿ ಬೇಕು: ಸಾಹಿತಿ ರಾಗೌ ಅಭಿಮತ

ಕುವೆಂಪು ಕಾವ್ಯದ ಅನುಸಂಧಾನ; ವಿಚಾರ ಸಂಕಿರಣ
Last Updated 13 ಫೆಬ್ರುವರಿ 2020, 12:47 IST
ಅಕ್ಷರ ಗಾತ್ರ

ಮಂಡ್ಯ: ‘ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕನ್ನಡದ ಅತ್ಯಂತ ಶ್ರೇಷ್ಟ ಮಹಾಕಾವ್ಯ. ಅದನ್ನು ಓದುವುದಾಗಲಿ, ಅದರಲ್ಲಿನ ತತ್ವಾದರ್ಶಗಳನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ’ ಎಂದು ಎಂದು ಹಿರಿಯ ಸಾಹಿತಿ ಡಾ.ರಾಗೌ ಹೇಳಿದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕ್ಷೀರಸಾಗರ ಮಿತ್ರಕೂಟ ವತಿಯಿಂದ ನಗರದ ಕರ್ನಾಟಕ ಸಂಘದ ಆವರಣದ ಕೆವಿಎಸ್‌ ಶತಮಾನೋತ್ಸವ ಭವನದಲ್ಲಿ ಗುರುವಾರ ನಡೆದ ಶ್ರೀ ರಾಮಾಯಣ ದರ್ಶನಂ–ಅನುಸಂಧಾನ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಕುವೆಂಪು ಸಾಹಿತ್ಯ ಸಮಸ್ತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂಬ ಮೂರು ಕೀಲಿ ಕೈ ಇರಬೇಕು. ಇಲ್ಲದಿದ್ದರೆ ಅವರ ಬರಹಗಳನ್ನು ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ರಾಮಾಯಣದ ಕಥೆ ಇದೆ ಎಂಬ ಕಾರಣಕ್ಕೆ ಓದಿಸಿಕೊಂಡು ಹೋಗಬಹುದು. ಆದರೆ ಅದರಲ್ಲಿನ ವಿಶಿಷ್ಟತೆಯನ್ನು ಅರ್ಥೈಸಿಕೊಳ್ಳುವುದು ಕಷ್ಟ’ ಎಂದು ಹೇಳಿದರು.

‘ಕನ್ನಡ ಚಳವಳಿ ಸಂದರ್ಭದಲ್ಲಿ ಬಿಎಂಶ್ರೀ ಅವರು ರಾಜ್ಯದ ಮೂಲೆಮೂಲೆಗೂ ತೆರಳಿ ಹೋರಾಟ ರೂಪಿಸಿದ್ದರು. ಅಂತೆಯೇ ಕುವೆಂಪು ಅವರನ್ನು ಹೋರಾಟಕ್ಕೆ ಆಹ್ವಾನಿಸಿದಾಗ ಅವರು ಅದನ್ನು ತಿರಸ್ಕರಿಸಿದ್ದರು. ಕುವೆಂಪು ಅವರು ನೇರವಾಗಿ ಕನ್ನಡ ಚಳವಳಿಯಲ್ಲಿ ಭಾಗವಹಿಸದಿದ್ದರೂ ಅವರ ಕವನ, ಹಾಡುಗಳು ಭಾಷಾಂದೋಲನಕ್ಕೆ ಕಾರಣವಾಗಿದ್ದವು. ಚಳವಳಿ ರೂಪಿಸುವ ಶಕ್ತಿ ಹೊಂದಿದ್ದವು. ಇಂದಿನ ಕನ್ನಡ ಸ್ಥಾನ ಮಾನಗಳಿಗೆ ಕುವೆಂಪು, ಮಾಸ್ತಿ, ಅನಕೃ ಅವರ ಸಾಹಿತ್ಯವೇ ಬಹುಮುಖ್ಯ ಕಾರಣ’ ಎಂದರು.

‘ದಲಿತ, ಬಂಡಾಯ, ಸ್ತ್ರೀ ವಾದ, ಮಾರ್ಕ್ಸ್‌ ವಾದ ಸೇರಿದಂತೆ ಚಳವಳಿಯಲ್ಲಿ ಇರಬೇಕಾದ ಅತ್ಯುತ್ತಮ ಅಂಶಗಳು ಅವರ ಕೃತಿಯಲ್ಲಿದ್ದವು. ಚಳವಳಿಗೆ ಸದ್ದಿಲ್ಲದೆ ದನಿಯಾಗಿದ್ದರು. ಮಲೆಗಳಲ್ಲಿ ಮಧುಮಗಳು ಕೃತಿಯಲ್ಲಿ ಸಾಕಷ್ಟು ದಲಿತ ಪಾತ್ರಗಳಿವೆ. ಲಂಕೇಶರು ಅದನ್ನು ದಲಿತ ದಿಗ್ವಿಜಯ ಎಂದು ಕರೆದಿದ್ದರು. ಕಾನೂರು ಹೆಗ್ಗಡತಿ ಸ್ತ್ರೀ ಸಂವೇದನೆಗೆ ಹಿಡಿದ ಕೈಗನ್ನಡಿಯಾಗಿದೆ‌’ ಎಂದರು.

‘ಶ್ರೀ ಸಾಮಾನ್ಯನನ್ನು ಅರ್ಥೈಸಿಕೊಂಡು ಆತನನ್ನು ಪರಿಗ್ರಹಿಸಿ, ಪರಿಭಾಷಾತ್ಮಕ ಸಾಹಿತ್ಯ ರಚನೆಯಿಂದ ಕುವೆಂಪು ಅವರು ಯುಗ ಪಲ್ಲಟಕ್ಕೆ ಕಾರಣರಾದರು. ಇಂಗ್ಲಿಷ್‌ ಸಾಹಿತ್ಯ ಸಂಪರ್ಕದಿಂದ ಹೊಸ ಮಾದರಿ ಸಾಹಿತ್ಯಕ್ಕೆ ನಾಂದಿ ಹಾಡಿದರು. ಅವರ ಸಾಹಿತ್ಯ ಸ್ಥಿರ ಸಮಾಜದಿಂದ ಚಲನಶೀಲ ಸಮಾಜದತ್ತ ಸಾಗಿ, ಪರ್ಯಾಯ ಸಂಸ್ಕೃತಿ ಬಗ್ಗೆ ಚಿಂತನೆ ಹುಟ್ಟುಹಾಕುತ್ತಿತ್ತು. ಅವರ ಚಿಂತನೆಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದರೆ ಮನಸ್ಸಿನಾಳಕ್ಕೆ ಇಳಿಸಿಕೊಳ್ಳುವ ಪ್ರಯತ್ನವನ್ನು ಯುವ ಜನರು ಮಾಡಬೇಕು’ ಎಂದರು.

ಸಹಾಯಕ ಪ್ರಾಧ್ಯಾಪಕ ಎಸ್‌.ಕೆ.ವೀರೇಶ್‌ ಮಾತನಾಡಿ ‘ರಾಮಾಯಣ ದರ್ಶನಂ ಶ್ರಾವ್ಯಮಾಯಣವೂ ಆಗಿದ್ದು, ಶ್ರೇಷ್ಟ ಕೃತಿಯಾಗಿ ಕನ್ನಡಕ್ಕೆ ಜ್ಞಾನ ಪೀಠವನ್ನು ದಕ್ಕಿಸಿಕೊಟ್ಟಿತು. ವಿದ್ಯಾರ್ಥಿಗಳು ಇದನ್ನು ಓದಿ ಅರ್ಥೈಸಿಕೊಳ್ಳಬೇಕು’ ಎಂದು ಹೇಳಿದರು. ನಂತರ ರಾಮಾಯಣ ದರ್ಶನಂ ಕುರಿತು ವಿಚಾರ ಗೋಷ್ಠಿ, ಸಂವಾದ ಗೋಷ್ಠಿ ನಡೆಯಿತು.

ಶಾಸಕ ಕೆ.ಟಿ.ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ.ಜಿ.ಟಿ.ವೀರಪ್ಪ, ಕ್ಷೀರಸಾಗರ ಮಿತ್ರ ಕೂಟ ಅಧ್ಯಕ್ಷ ಕೆ.ಜಯಶಂಕರ್‌, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT