ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಕೋಟೆ ಕೆಳಗೆ ಮಲಿನ ನೀರು...

ಕಂದಕದಲ್ಲಿ ಮಡುಗಟ್ಟಿದ ಕೊಳಚೆ; ಅಧಿಕಾರಿಗಳಿಗೆ ಈ ಸಂಗತಿ ತಿಳಿದೇ ಇಲ್ಲ
Last Updated 4 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಎರಡು ಮೂರು ತಿಂಗಳುಗಳಿಂದ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಐತಿಹಾಸಿಕ ಕೋಟೆಯ ಕಂದಕದಲ್ಲಿ ಆಳುದ್ದ ನೀರು ನಿಂತಿದ್ದು, ನಾರುತ್ತಿದೆ.

ಪಟ್ಟಣದ ಪೂರ್ವ ಕೋಟೆ ದ್ವಾರದ ಬಲ ಭಾಗದ ಕಂದಕದಲ್ಲಿ ಆಳುದ್ದ ನೀರು ನಿಂತಿದೆ. ಕಾವೇರಿ ಬಡಾವಣೆಗೆ ತೆರಳುವ ಮಾರ್ಗದ ಪಕ್ಕದ ಕಂದಕದಲ್ಲಿ ಕೂಡ 10 ಅಡಿಗಳಿಗಿಂತಲೂ ಹೆಚ್ಚು ನೀರು ತುಂಬಿಕೊಂಡಿದೆ. ಪುರಸಭೆ ಕಚೇರಿ ಹಿಂದಿನ ಕಂದಕದಲ್ಲಿ ಕೂಡ ನೀರು ಮಡುಗಟ್ಟಿದೆ. ಹಲವು ದಿನಗಳಿಂದ ನೀರು ಒಂದೇ ಕಡೆ ನಿಂತಿದ್ದು ಅದು ಮಲಿನ ಗೊಂಡಿದೆ. ಇದರಿಂದ ಕಂದಕ ಕೊಳಚೆ ಗುಂಡಿಯಾಗಿ ಮಾರ್ಪಾಡಾಗಿದೆ.

ನೀರಿನ ಜತೆಗೆ ತ್ಯಾಜ್ಯವೂ ಸೇರಿಕೊಂಡು ಕೊಳೆಯುತ್ತಿರುವುದರಿಂದ ಕಂದಕದಿಂದ ಗಬ್ಬು ವಾಸನೆ ಅಡರುತ್ತಿದೆ. ಕಂದಕ ಪಕ್ಕದಲ್ಲಿ ವಾಸಿಸುವವರು ಹಾಗೂ ಓಡಾಡುವವರು ಮೂಗು ಮುಚ್ಚಿ ಓಡಾಡುವ ಸ್ಥಿತಿ ಬಂದಿದೆ. ಕೋಟೆಗೆ ಹೊಂದಿಕೊಂಡಿರುವ ಕಂದಕದಲ್ಲಿ ಕಾಲುವೆಯಂತೆ ನೀರು ನಿಂತಿರುವುದರಿಂದ ಮೂರು ಶತಮಾನಗಳಷ್ಟು ಹಳೆಯದಾದ ಕಲ್ಲಿನ ಕೋಟೆಯ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ.

‘ಪಟ್ಟಣದ ಐತಿಹಾಸಿಕ ಕೋಟೆ ನೋಡಲೆಂದೇ ದೇಶ, ವಿದೇಶಗಳ ಪ್ರವಾಸಿಗರು ಪಟ್ಟಣಕ್ಕೆ ಭೇಟಿ ನೀಡುತ್ತಾರೆ. ಹಾಗೆ ಬರುವವರು ಕೊಳಚೆ ಗುಂಡಿಗಳಂತಿರುವ ಕಂದಕಗಳನ್ನು ಕಂಡು ಮೂಗು ಮುರಿಯುತ್ತಿದ್ದಾರೆ. ಈಗಾಗಲೇ ಸೆಂದಿಲ್‌ ಕೋಟೆಯ ಒಂದು ಭಾಗ ಕುಸಿದಿದೆ. ಪ್ರಾಚ್ಯವಸ್ತು ಇಲಾಖೆ ಕಂದಕದ ನೀರನ್ನು ಶೀಘ್ರ ಖಾಲಿ ಮಾಡಿಸದಿದ್ದರೆ ಕೋಟೆಯ ಕುಸಿಯುವ ಸಂಭವವಿದೆ’ ಎಂದು ಪಟ್ಟಣದ ಇತಿಹಾಸಾಸಕ್ತ ಪ್ರಸಾದ್‌ ಕಳವಳ ವ್ಯಕ್ತಪಡಿಸಿದ್ದಾರೆ.

‘ಕೋಟೆಗೆ ಹೊಂದಿಕೊಂಡ ಕಂದಕದಲ್ಲಿ ನೀರು ತುಂಬಿಕೊಂಡಿರುವ ಸಂಗತಿ ತಿಳಿದಿಲ್ಲ. ಸೋಮವಾರ ಎಂಜಿನಿಯರ್‌ಗಳ ಜತೆಗೂಡಿ ಸ್ಥಳ ಪರಿಶೀಲನೆ ನಡೆಸಿ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು. ಕಂದಕದ ನೀರನ್ನು ಖಾಲಿ ಮಾಡಲು ತುರ್ತು ಕ್ರಮ ವಹಿಸಲಾಗುವುದು’ ಎಂದು ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಕ್ಯೂರೇಟರ್‌ ಎನ್‌.ಎನ್‌.ಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT