ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಫೈನಾನ್ಸ್‌ ಕಂಪನಿ ಅಧಿಕಾರಿ ಕಿರುಕುಳ: ಯುವಕ ಆತ್ಮಹತ್ಯೆ

ಹೆಮ್ಮನಹಳ್ಳಿ ಗ್ರಾಮದಲ್ಲಿ ಪತ್ನಿ ಅಂತ್ಯಕ್ರಿಯೆ ದಿನದಂದೇ ನೇಣಿಗೆ ಶರಣಾದ ಪತಿ
Last Updated 17 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಮದ್ದೂರು: ಪತ್ನಿಯ ಅಂತ್ಯಕ್ರಿಯೆಗಾಗಿ ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮಕ್ಕೆ ಬಂದಿದ್ದ ಪ್ರದೀಪ್‌ (36) ಎಂಬುವವರು, ಖಾಸಗಿ ಹಣಕಾಸು ಸಂಸ್ಥೆಯ ಸಿಬ್ಬಂದಿಯ ಕಿರುಕುಳದಿಂದ ನೊಂದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಖಾಸಗಿ ಹಣಕಾಸು ಸಂಸ್ಥೆಯ ಐವರನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಎಲೆಕ್ಟ್ರಿಕ್‌ ಸಾಮಗ್ರಿಗಳ ಅಂಗಡಿ ಇಟ್ಟುಕೊಂಡಿದ್ದ ಪ್ರದೀಪ್‌, ಅಲ್ಲಿನ ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಸಾಲ ಪಡೆದಿದ್ದರು. ಅವರ ಪತ್ನಿ ಹೇಮಾ ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದು, ಅಂತ್ಯಕ್ರಿಯೆಗಾಗಿ ಸ್ವಗ್ರಾಮಕ್ಕೆ ಬಂದಿದ್ದರು.

ಈ ವಿಷಯ ತಿಳಿದ ಹಣಕಾಸು ಸಂಸ್ಥೆಯವರು ಹೆಮ್ಮನಹಳ್ಳಿಗೆ ಬಂದಿದ್ದರು. ಈ ವೇಳೆ, ಸಾಲ ಮರುಪಾವತಿಸುವಂತೆ ಒತ್ತಾಯಿಸಿ ಅವರ ತಾಯಿ ಹಾಗೂ ನಾದಿನಿಯನ್ನು ಎಳೆದೊಯ್ಯಲು ಮುಂದಾಗಿದ್ದಾರೆ. ಇದನ್ನು ಕಂಡ ಪ್ರದೀಪ್‌ ಮನ ನೊಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ ನಾಲ್ಕು ವರ್ಷದ ಹೆಣ್ಣುಮಗು ಇದೆ. ಎಷ್ಟು ಸಾಲ ಮಾಡಿಕೊಂಡಿದ್ದರು ಎಂಬ ವಿಷಯ ಮನೆಯವರಿಗೆ ಗೊತ್ತಿಲ್ಲ ಎನ್ನಲಾಗಿದೆ.

ಗ್ರಾಮಸ್ಥರು ಸಂಸ್ಥೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರಿಂದ ಈ ವೇಳೆ, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಿಪಿಐ ಮಹೇಶ್ ಹಾಗೂ ಪಿಎಸ್ಐ ಮಂಜೇಗೌಡ ಪರಿಶೀಲನೆ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸಂಸ್ಥೆಯ ಸಿಬ್ಬಂದಿ ರಾಜಿ ಮಾಡಿ ಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಘಟನೆ ಬಗ್ಗೆ ರಾತ್ರಿ ಯವರೆಗೂ ಪ್ರಕರಣ ದಾಖಲಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT