ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಮುಚ್ಚುವ ಹಂತದ ಶಾಲೆ ಉಳಿಸಿದ ಶಿಕ್ಷಕ ಕೆ.ಕೆಂಪೇಗೌಡ

Last Updated 4 ಸೆಪ್ಟೆಂಬರ್ 2022, 19:45 IST
ಅಕ್ಷರ ಗಾತ್ರ

ಪಾಂಡವಪುರ: ಮಕ್ಕಳ ಹಾಜರಾತಿ ಕೊರತೆಯಿಂದ ಮುಚ್ಚುವ ಹಂತದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸಿರುವ ಶಿಕ್ಷಕ ಕೆ.ಕೆಂಪೇಗೌಡ ಅವರು ಗ್ರಾಮದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ತಾಲ್ಲೂಕಿನ ಜಕ್ಕನಹಳ್ಳಿ ಸರ್ಕಲ್ ಸಮೀಪದ ದೇವರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕೇವಲ 2 ಮಕ್ಕಳು ಇದ್ದುದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲೆಯನ್ನು ಮುಚ್ಚಲು ಮುಂದಾಗಿತ್ತು. ಆದರೆ, ಶಿಕ್ಷಕ ಕೆ.ಕೆಂಪೇಗೌಡ ಅವರ ಪರಿಶ್ರಮದಿಂದಾಗಿ ಶಾಲೆಗೆ ಎಲ್ಲ ಸವಲತ್ತುಗಳು ಲಭಿಸಿ ಶಾಲೆ ಉಳಿಯಿತು. ಈಗ ಗ್ರಾಮದ ಮಕ್ಕಳು ಇದೇ ಶಾಲೆಗೆ ಬರುತ್ತಿದ್ದಾರೆ.

ಸುಮಾರು 300 ಜನಸಂಖ್ಯೆ ಹಾಗೂ 70 ಕುಟುಂಬಗಳಿರುವ ದೇವರಹಳ್ಳಿಯ ಪ್ರಾಥಮಿಕ ಕಿರಿಯ ಸರ್ಕಾರಿ ಶಾಲೆಯಲ್ಲಿ ಎರಡು ಕೊಠಡಿ ಬಿಟ್ಟರೆ ಯಾವ ಸವಲತ್ತುಗಳೂ ಇರಲಿಲ್ಲ. 2009ರಲ್ಲಿ ದೇವರಹಳ್ಳಿ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿ ಬಂದಾಗ ಇಬ್ಬರು ವಿದ್ಯಾರ್ಥಿಗಳಿದ್ದರು. ಈ ಶಾಲೆಯನ್ನು ಮುಚ್ಚಿ ಕೆಂಪೇಗೌಡ ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲು ಇಲಾಖೆ ನಿರ್ಧರಿಸಿತ್ತು. ಆದರೆ, ಕೆಂಪೇಗೌಡ ಅವರು ಶಾಲೆಯನ್ನು ಉಳಿಸಬೇಕು ಎಂಬ ದೃಢ ನಿರ್ಧಾರ ಕೈಗೊಂಡರು.

ಪ್ರತಿ ಮನೆಮನೆಗೆ ತೆರಳಿ ಶಾಸಗಿ ಶಾಲೆಗೆ ಹೋಗುತ್ತಿದ್ದ ಮಕ್ಕಳ ಪೋಷಕರನ್ನು ಮನವೊಲಿಸಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವಲ್ಲಿ ಯಶಸ್ವಿಯಾದರು. ದಾನಿಗಳಿಂದ ಶಾಲೆಗೆ ಹಲವು ಸೌಲಭ್ಯ ಪಡೆದುಕೊಂಡು ಶಾಲೆಗೆ ಒಂದು ರೂಪಕೊಟ್ಟರು. ಖಾಸಗಿ ಶಾಲೆಗೆ ಹೋಗುತ್ತಿದ್ದ 1 ರಿಂದ 5ನೇ ತರಗತಿಯವರೆಗಿನ ಮಕ್ಕಳು ಗ್ರಾಮದ ಸರ್ಕಾರಿ ಶಾಲೆಯಲ್ಲೇ ಉಳಿದರು. ಈಗ ಗ್ರಾಮದ ಯಾವುದೇ ಮಕ್ಕಳು ಖಾಸಗಿ ಶಾಲೆಗೆ ಹೋಗದೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರು ಕೆಂಪೇಗೌಡ ಅವರಿಗೆ ನೆರವಾಗುತ್ತಿದ್ದಾರೆ.

ಶಿಕ್ಷಣ ಇಲಾಖೆ ಹಾಗೂ ದಾನಿಗಳ ಸಹಾಯದಿಂದ ಶಾಲೆಯ ಕೊಠಡಿ ದುರಸ್ತಿಗೊಳಿಸಿ ಶಾಲೆಗೆ ಕಾಪೌಂಡ್ ನಿರ್ಮಿಸಿದ್ದಾರೆ. ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಶೌಚಾಲಯ ಒದಗಿಸಿದ್ದಾರೆ. ಶಾಲೆಯ ಆವರಣದಲ್ಲಿ ಕೈತೋಟ, ಸಾವಯವ ಗೊಬ್ಬರ ಗುಂಡಿ ನಿರ್ಮಿಸಿ, ಬಾಳೆ, ತೆಂಗು, ತೇಗ, ಹಲಸು, ನಿಂಬೆ, ಹಿರಳೇಕಾಯಿ, ಸೀಬೆ, ನುಗ್ಗೆ, ವಿವಿಧ ಸೊಪ್ಪು, ತರಕಾರಿ ಬೆಳೆದಿದ್ದಾರೆ. ಇಲ್ಲಿ ಬೆಳೆಯುವ ಸೊಪ್ಪು ತರಕಾರಿಗಳನ್ನು ಶಾಲೆಯ ಬಿಸಿಯೂಟಕ್ಕೆ ಬಳಸಿಕೊಳ್ಳಲಾಗುತ್ತಿದೆ. ಶಾಲೆಯ ಆವರಣದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ.

ಸರ್ಕಾರದ ವಿವಿಧ ವಸತಿ ಶಾಲೆಯ ಪ್ರವೇಶಕ್ಕೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗಾಗಿ ಮಕ್ಕಳಿಗೆ ವಿಶೇಷ ತರಗತಿ ನಡೆಸಿ ಅದಕ್ಕೆ ಪಠ್ಯಗಳನ್ನು ಮಕ್ಕಳಿಗೆ ನೀಡುತ್ತಿದ್ದಾರೆ. ಪ್ರತಿ ವರ್ಷವೂ ಶಾಲೆಯಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಮಕ್ಕಳ ಆಟೋಟ ಸ್ಪರ್ಧೆ ನಡೆಸಿ ಮಕ್ಕಳಿಗೆ ವೈಯಕ್ತಿಕ ಹಣದಿಂದ ಬಹುಮಾನ ನೀಡುತ್ತಿದ್ದಾರೆ.

ದೇವರಹಳ್ಳಿಯ ಸರ್ಕಾರಿ ಶಾಲೆಗೆ 2019ರಲ್ಲಿ ನಲಿಕಲಿ ಪ್ರಶಸ್ತಿ ದೊರೆತಿದೆ. ಶಾಲೆಯ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುತ್ತಿರುವ ಕೆಂಪೇಗೌಡ ಅವರಿಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಗಳು ಲಭಿಸಿವೆ. 2018ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿವೆ.

‘ಮುಚ್ಚಿಹೋಗುತ್ತಿದ್ದ ನಮ್ಮೂರಿನ ಸರ್ಕಾರಿ ಶಾಲೆಯು ಶಿಕ್ಷಕ ಕೆಂಪೇಗೌಡರ ಇಚ್ಛಾಶಕ್ತಿಯಿಂದ ಉಳಿದು ಹಲವು ಅಭಿವೃದ್ಧಿ ಕಂಡಿದೆ’ ಎನ್ನುತ್ತಾರೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಎಸ್.ಅರುಣ್‌ಕುಮಾರ್, ಉಪಾಧ್ಯಕ್ಷೆ ಮಮತ, ಸದಸ್ಯರಾದ ಶೋಭಾ, ನಮಿತಾ.

‘ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲ ಶಿಕ್ಷಕರ ಮೇಲಿದೆ. ನಮ್ಮ ಶಾಲೆಯನ್ನು ಉಳಿಸಿಕೊಂಡಿದ್ದಕ್ಕಾಗಿ ನಮಗೆ ಖುಷಿ ಇದೆ’ ಎನ್ನುತ್ತಾರೆ ಶಿಕ್ಷಕ ಕೆ.ಕೆಂಪೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT