ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುದ್ಧಕ್ಕೆ ಸಾಮ್ರಾಜ್ಯಶಾಹಿಗಳ ಲಾಭವೇ ಕಾರಣ: ಬಂಜಗೆರೆ ಜಯಪ್ರಕಾಶ್‌

‘ವಿಶ್ವ ಸಹೋದರತ್ವಕ್ಕೆ ಕದನದ ಕರಿ ನೆರಳು’ ವಿಚಾರ ಸಂಕಿರಣದಲ್ಲಿ ಬಂಜಗೆರೆ ಜಯಪ್ರಕಾಶ್‌
Published 11 ಆಗಸ್ಟ್ 2024, 14:21 IST
Last Updated 11 ಆಗಸ್ಟ್ 2024, 14:21 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಸಾಮ್ರಾಜ್ಯಶಾಹಿಗಳ ಲಾಭಕೋರತನವೇ ಯುದ್ಧಗಳು ನಡೆಯಲು ಮುಖ್ಯ ಕಾರಣ’ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್‌ ಪ್ರತಿಪಾದಿಸಿದರು.

ಪಟ್ಟಣದಲ್ಲಿ ಸಂಜಯ ಪ್ರಕಾಶನದ 100ನೇ ಕಾರ್ಯಕ್ರಮದ ನಿಮಿತ್ತ ಭಾನುವಾರ ಏರ್ಪಡಿಸಿದ್ದ ‘ವಿಶ್ವ ಸಹೋದರತ್ವಕ್ಕೆ ಕದನದ ಕರಿ ನೆರಳು’ ವಿಚಾರ ಸಂಕಿರಣದಲ್ಲಿ ಅವರು ವಿಚಾರ ಮಂಡಿಸಿದರು.

‘ಅಮೆರಿಕದಂತಹ ದೇಶಗಳು ತಾವು ಉತ್ಪಾದಿಸುವ ಶಸ್ತ್ರಾಸ್ತ್ರಗಳನ್ನು ಮಿತ್ರರಿಗೆ ಮಾತ್ರವಲ್ಲದೆ ಶತ್ರುಗಳಿಗೂ ಮಾರಾಟ ಮಾಡುತ್ತವೆ. ತಮ್ಮ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಿಕೊಳ್ಳಲು ದೇಶ ದೇಶಗಳ ನಡುವೆ ವಿವಾದ ಸೃಷ್ಟಿಸುತ್ತವೆ. ಭಯೋತ್ಪಾದನೆಯನ್ನೂ ಪ್ರೋತ್ಸಾಹಿಸುತ್ತವೆ. ಬಡ ದೇಶಗಳಿಗೆ ಸಹಾಯ ಮಾಡುವ ನೆಪದಲ್ಲಿ ಹಿಡಿತ ಸಾಧಿಸುತ್ತವೆ. ಇಂತಹ ತಂತ್ರದಿಂದಾಗಿ ಸೌದಿ ಅರೇಬಿಯಾ ಅಮೆರಿಕದ ಕೈಗೊಂಬೆಯಾಗಿದೆ. ಫಿಲಿಪ್ಪೀನ್ಸ್‌ ದೇಶ ಜಪಾನಿನ ಹಿಡಿತದಲ್ಲಿ ಸಿಕ್ಕಿ ನರಳುತ್ತಿದೆ’ ಎಂದು ಹೇಳಿದರು.

‘ಇಸ್ರೇಲ್‌ –ಪ್ಯಾಲೆಸ್ತೀನ್‌, ರಶಿಯಾ – ಉಕ್ರೇನ್‌ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲೂ ಸಾಮ್ರಾಜ್ಯಶಾಹಿಗಳ ಪಾತ್ರವಿದೆ. ಆಸ್ಪತ್ರೆ, ಶಾಲೆಗಳ ಮೇಲೆ ಬಾಂಬ್‌ಗಳು ಬೀಳುತ್ತಿದ್ದರೂ ಯುದ್ಧ ನಿಲ್ಲಿಸುವ ಪ್ರಯತ್ನವನ್ನು ಪ್ರಬಲ ದೇಶಗಳು ಮಾಡುತ್ತಿಲ್ಲ. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಜಗತ್ತನ್ನು ಶಾಂತಿಯಿಂದ ಇರಲು ಬಿಡುತ್ತಿಲ್ಲ. ಯುದ್ಧಗಳು ಹೆಚ್ಚು ನಡೆದರೆ ಆರ್ಥಿಕವಾಗಿ ಲಾಭ ಮಾಡಿಕೊಳ್ಳಬಹುದು ಎಂಬ ಹುನ್ನಾರ ಆ ದೇಶಗಳದ್ದು. ನೆಮ್ಮದಿ, ಸಹೋದರತ್ವ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಶತ್ರುವಾಗಿರುವ ಯುದ್ಧಗಳನ್ನು ತಡೆಯಲು ವಿಶ್ವ ಶಕ್ತಿಗಳು ಗಂಭೀರ ಪ್ರಯತ್ನ ಮಾಡಬೇಕು’ ಎಂದರು.

ಕೈಕೊಟ್ಟ ರಾಮಮಂದಿರ: ‘ಜನರಲ್ಲಿ ದೇಶಪ್ರೇಮ ಕೆರಳಿಸಿ 2019ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಭಾರತವು ಪುಲ್ವಾಮಾ ಯುದ್ಧಕ್ಕಿಳಿಯಿತು. ಅಧಿಕಾರದಾಹಿಗಳ ಕುತಂತ್ರದಿಂದ ಅಮಾಯಕ ಯೋಧರು ಈ ಪೂರ್ವನಿಯೋಜಿತ ಕೃತ್ಯಕ್ಕೆ ಬಲಿಯಾದರು. 2024ರ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯ ರಾಮಮಂದಿರ ಕೈ ಹಿಡಿಯುತ್ತದೆ ಎಂಬ ಭ್ರಮೆಯಲ್ಲಿದ್ದರು. ಆದರೆ, ರಾಮ ಮಂದಿರ ಕೈ ಕೊಟ್ಟಿತು. ಅಮೆರಿಕದ ನೀತಿಯನ್ನೇ ಅನುಸರಿಸಲು ಹೋಗಿ ಭಾರತವು ಶ್ರೀಲಂಕಾ ಮತ್ತು ಮಾಲ್ದೀವ್ಸ್‌ ದೇಶಗಳ ಸ್ನೇಹ ಕಳೆದುಕೊಂಡಿದೆ’ ಎಂದು ಬಂಜಗೆರೆ ಜಯಪ್ರಕಾಶ್‌ ವಿಶ್ಲೇಷಿಸಿದರು.

ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರದ ದೀನಬಂಧು ಸಂಸ್ಥೆಯ ಮುಖ್ಯಸ್ಥ ಪ್ರೊ.ಜಿ.ಎಸ್‌. ಜಯದೇವ ಮಾತನಾಡಿ, ‘ಜೀವ ಮತ್ತು ಆಸ್ತಿ ಪಾಸ್ತಿಗಳ ಹಾನಿಗೆ ಕಾರಣವಾಗುವ ಯುದ್ಧಗಳನ್ನು ತಡೆಯಬೇಕಾದರೆ ಗಾಂಧಿ ಮಾರ್ಗವೊಂದೇ ಮಾರ್ಗ. ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕು. ರಾಜಕೀಯ ಕ್ಷೇತ್ರದಲ್ಲಿ ಬಂಡವಾಳಶಾಹಿಗಳ ಪ್ರಭಾವವನ್ನು ತಪ್ಪಿಸಬೇಕು’ ಎಂದು ಹೇಳಿದರು.

ಗಾಂಧಿವಾದಿ ಡಾ.ಬಿ.ಸುಜಯಕುಮಾರ್‌ ಆಶಯ ನುಡಿಗಳಾಡಿದರು. ಸಂಜಯ ಪ್ರಕಾಶನದ ಮುಖ್ಯಸ್ಥ ಎಸ್‌.ಎಂ. ಶಿವಕುಮಾರ್‌, ವಿಮರ್ಶಕ ಕ್ಯಾತನಹಳ್ಳಿ ಚಂದ್ರಣ್ಣ, ಶಿವಕುಮಾರ್‌ ಕಾರೇಪುರ ಮಾತನಾಡಿದರು. ಮೈಸೂರು ವಿವಿ ತತ್ವಶಾಸ್ತ್ರ ಪ್ರಾಧ್ಯಾಪಕ ಡಿ.ಕುಮಾರ್‌, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಪ್ರೊ.ಇಲ್ಯಾಸ್‌ ಅಹಮದ್‌ಖಾನ್‌, ಶಿವಶಂಕರ್‌ ಸಂವಾದದಲ್ಲಿ ಪಾಲ್ಗೊಂಡಿದ್ದರು. ನಾಗೇಂದ್ರ ಕವನ ವಾಚಿಸಿದರು.

ಎಂ.ಎಸ್‌. ಸಹನಾ ಪ್ರಥಮ: ವಿಚಾರ ಸಂಕಿರಣದ ನಿಮಿತ್ತ ಏರ್ಪಡಿಸಿದ್ದ ‘ಮನುಕುಲದ ಉಳಿವು: ಯುದ್ಧದಿಂದಲೋ ಅಥವಾ ವಿಶ್ವಭ್ರಾತೃತ್ವದಿಂದಲೋ’ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ಮೈಸೂರು ಜೆಎಸ್‌ಎಸ್‌ ಕಾಲೇಜಿನ ಎಂ.ಎಸ್‌. ಸಹನಾ ಪ್ರಥಮ ಸ್ಥಾನ ಪಡೆದರು. ಕೆ.ಆರ್‌. ಪೇಟೆ ತಾಲ್ಲೂಕು ಹರಿಹರಪುರ ಸರ್ಕಾರಿ ಕಾಲೇಜಿನ ಛಾಯಾದೇವಿ ದ್ವಿತೀಯ, ಮೈಸೂರು ಮಹಾರಾಣಿ ಕಾಲೇಜಿನ ಎಂ.ಎಸ್‌. ಕವನಾ ತೃತೀಯ ಸ್ಥಾನ ಗಳಿಸಿದರು.

ಶ್ರೀರಂಗಪಟ್ಟಣದಲ್ಲಿ ಸಂಜಯ ಪ್ರಕಾಶನದ 100ನೇ ಕಾರ್ಯಕ್ರಮದ ನಿಮಿತ್ತ ಭಾನುವಾರ ನಡೆದ ‘ವಿಶ್ವ ಸಹೋದರತ್ವಕ್ಕೆ ಕದನದ ಕರಿ ನೆರಳು’ ವಿಚಾರ ಸಂಕಿರಣದಲ್ಲಿ ಸಾಹಿತಿ ಚಿಂತಕ ಬಂಜಗೆರೆ ಜಯಪ್ರಕಾಶ್‌ ಮಾತನಾಡಿದರು
ಶ್ರೀರಂಗಪಟ್ಟಣದಲ್ಲಿ ಸಂಜಯ ಪ್ರಕಾಶನದ 100ನೇ ಕಾರ್ಯಕ್ರಮದ ನಿಮಿತ್ತ ಭಾನುವಾರ ನಡೆದ ‘ವಿಶ್ವ ಸಹೋದರತ್ವಕ್ಕೆ ಕದನದ ಕರಿ ನೆರಳು’ ವಿಚಾರ ಸಂಕಿರಣದಲ್ಲಿ ಸಾಹಿತಿ ಚಿಂತಕ ಬಂಜಗೆರೆ ಜಯಪ್ರಕಾಶ್‌ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT