ಬುಧವಾರ, ನವೆಂಬರ್ 13, 2019
25 °C
ಶ್ರೀರಂಗಪಟ್ಟಣದಲ್ಲಿ ರಾಕೆಟ್‌ ಫೋರ್ಟ್‌ ಈಗಲೂ ಜೀವಂತ

ರಾಕೆಟ್‌ ತಂತ್ರಜ್ಞಾನದ ಪಿತಾಮಹ ಟಿಪ್ಪು!

Published:
Updated:
Prajavani

ಶ್ರೀರಂಗಪಟ್ಟಣ: ಟಿಪ್ಪು ಸುಲ್ತಾನ್‌ ತನ್ನ ಆಡಳಿತದ (1782–99) ಅವಧಿಯ ಮುಕ್ಕಾಲು ಪಾಲು ಸಮಯವನ್ನು ಯುದ್ಧದಲ್ಲೇ ಕಳೆದ. ಯುದ್ಧ ಭೂಮಿಯಲ್ಲಿ ಮೊದಲು ರಾಕೆಟ್‌ ಉಡಾಯಿಸಿದ ಹಿರಿಮೆ ಕೂಡ ಈತನದ್ದು.

ಟಿಪ್ಪು ಸುಲ್ತಾನ್‌ ಸೇನೆಯ 27 ವಿಭಾಗಗಳಲ್ಲಿಯೂ ರಾಕೆಟ್‌ ಪಡೆಯ ಯೋಧರಿದ್ದರು. ಅವರನ್ನು ಜೋರ್ಕ್ಸ್‌ ಎಂದು ಕರೆಯಲಾಗುತ್ತಿತ್ತು. ‘1799ರಲ್ಲಿ ಶ್ರೀರಂಗಪಟ್ಟಣ ಪತನವಾದಾಗ ಟಿಪ್ಪು ಸೇನೆಯ ಬಳಿ ಇದ್ದ 700 ರಾಕೆಟ್‌ಗಳನ್ನು ಬ್ರಿಟಿಷರು ವಶಪಡಿಸಿಕೊಂಡರು. ಜತೆಗೆ ತುರುಕನಹಳ್ಳಿ ಬಳಿ ನಡೆದ ಯುದ್ಧದಲ್ಲಿ ಪರ್ಯಾಯ ಪದ್ಧತಿಗಳಿಂದ ತಯಾರಿಸಿದ 900ಕ್ಕೂ ಹೆಚ್ಚು ರಾಕೆಟ್‌ಗಳನ್ನು ವಶಪಡಿಸಿಕೊಂಡರು’ ಎಂದು ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ತಮ್ಮ ಆತ್ಮಕತೆ ‘ವಿಂಗ್ಸ್‌ ಆಫ್‌ ಫೈರ್‌’ ಕೃತಿಯಲ್ಲಿ (ಪುಟ 42 ಮತ್ತು 43) ಉಲ್ಲೇಖಿಸಿದ್ದಾರೆ.

ತನ್ನ ತಂದೆಯ ಮರಣಾನಂತರ ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ನಡೆಸಿದ ಮೂರು ಪ್ರಮುಖ ಯುದ್ಧಗಳಲ್ಲೂ ರಾಕೆಟ್‌ ಬಳಸಿದ್ದ. ಜೋರ್ಕ್ಸ್‌ಗಳು ಶತ್ರು ಪಾಳಯದ ಮೇಲೆ ರಾಕೆಟ್‌ಗಳನ್ನುಉಡಾಯಿಸಿ ದಿಕ್ಕೆಡಿಸುತ್ತಿದ್ದರು. ಮೈಸೂರು ಸೇನೆಯ ಬಳಿಯಿದ್ದ ಲಂಬಾಕಾರದ ರಾಕೆಟ್‌ ವೊಂದಿತ್ತು. ರಾತ್ರಿ ವೇಳೆ, ಶತ್ರು ಸೇನೆಯ ಶಿಬಿರಗಳ ಮೇಲೆ ಹಾರಿಸಲಾಗುತ್ತಿತ್ತು.

‘4ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಮೈಸೂರು ಸೇನೆಯ ರಾಕೆಟ್‌ ದಾಳಿಯಿಂದ ಬ್ರಿಟಿಷ್‌ ಸೇನೆಯ ಅಧಿಕಾರಿ ವೆಲ್ಲಿಂಗ್‌ಟನ್‌ ಡ್ಯೂಕ್‌ ತೀವ್ರವಾಗಿ ಗಾಯಗೊಂಡಿದ್ದ’ ಎಂದು ಇತಿಹಾಸ ಸಂಶೋಧಕ ಪ್ರೊ.ಬಿ. ಷೇಕ್‌ ಅಲಿ ತಮ್ಮ ‘ಟಿಪ್ಪು ಸುಲ್ತಾನ್‌’ ಕೃತಿ (ಪುಟ 38)ಯಲ್ಲಿ ಹೇಳಿದ್ದಾರೆ.

ರಾಕೆಟ್‌ ರಚನೆ: ಮೈಸೂರು ಸೇನೆಯ ಬಳಿ ಇದ್ದ ರಾಕೆಟ್‌ ಬಿದಿರು ಬೊಂಬಿನಿಂದ ಮಾಡಿದ್ದಾಗಿತ್ತು. 8–10 ಅಡಿ ಉದ್ದದ ಬೊಂಬಿನ ಹಿಂದೆ ಲೋಹದ ತಗಡಿನ ‘ಸೇರು’ ಆಕಾರದ ಕೊಳವೆ ಇರುತ್ತಿತ್ತು. ಈ ಕೊಳವೆಯಲ್ಲಿ ಮದ್ದು ತುಂಬಲಾಗುತ್ತಿತ್ತು. ರಾಕೆಟ್‌ನ ಮುಂದಿನ ತುದಿಯಲ್ಲಿ ಚೂಪಾದ ನಳಿಕೆ ಮತ್ತು ಹಿಂಬದಿಯಲ್ಲಿ ಬಾಲ ಅಳವಡಿಸಲಾಗುತ್ತಿತ್ತು. ರಾಕೆಟ್‌ 2 ಕಿ.ಮೀ ದೂರ ಹಾರಿ ಸಿಡಿಯುತ್ತಿತ್ತು’ ಎಂದು ಬ್ರಿಟಿಷ್‌ ಇತಿಹಾಸಕಾರರು ಚಿತ್ರಿಸಿದ್ದಾರೆ.

ರಾಕೆಟ್‌ ಫೋರ್ಟ್‌: ಪಟ್ಟಣದ ಹೃದಯ ಭಾಗದಲ್ಲಿ ರಾಕೆಟ್‌ ಫೋರ್ಟ್‌ ಎನ್ನಲಾಗುವ ಸ್ಥಳ ಈಗಲೂ ಇದೆ. ಕೋಟೆಯ ಒಳಾವರಣದ ನಾಲ್ಕೂ ಬದಿಯಲ್ಲಿ ಕಲ್ಲಿನ ಪದರುಗಳಿಂದ ನಿರ್ಮಿಸಿರುವ ಗಟ್ಟಿಯಾದ ಗೋಡೆಗಳಿವೆ. ಅದರ ಮೇಲೆ ಬತೇರಿ (ದಿಬ್ಬ)ವಿದೆ. ಪಟ್ಟಣಕ್ಕೆ ನುಗ್ಗುವ ಶತ್ರುಗಳ ಮೇಲೆ ಇಲ್ಲಿಂದ ರಾಕೆಟ್‌ಗಳನ್ನು ಉಡಾಯಿಸಲಾಗುತ್ತಿತ್ತು. ಕರಿಘಟ್ಟದ ಶಿಖರದ ಕುದುರೆ ಲಾಯ ಸ್ಥಳದಿಂದಲೂ ಟಿಪ್ಪು ಸೇನೆ ರಾಕೆಟ್‌ ಹಾರಿಸುತ್ತಿತ್ತು ಎಂಬ ಮಾತು ಈಗಲೂ ಪ್ರಚಲಿತದಲ್ಲಿದೆ.

ಪ್ರತಿಕ್ರಿಯಿಸಿ (+)