ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರಿನಲ್ಲಿ ಕಸದ ರಾಶಿಯದ್ದೇ ಕಾರುಬಾರು!

ಮೂಗು ಮುಚ್ಚಿಕೊಂಡು ಓಡಾಡುವ ಜನರು; ನೋಡದ ಅಧಿಕಾರಿಗಳು
Last Updated 21 ಸೆಪ್ಟೆಂಬರ್ 2020, 2:36 IST
ಅಕ್ಷರ ಗಾತ್ರ

ಮದ್ದೂರು: ಪಟ್ಟಣದ ಪ್ರತಿ ವಾರ್ಡ್‌ನಲ್ಲೂ ಕಸದ ಸಮಸ್ಯೆ ಹೆಚ್ಚಾಗುತ್ತಿದ್ದು ಪುರಸಭೆ ಅಧಿಕಾರಿಗಳ ಕಣ್ಣಿಗೆ ಕಾಣದಾಗಿದೆ. ಕಸದಿಂದ ಬೀದಿನಾಯಿಗಳ ಸಮಸ್ಯೆ ವಿಪರೀತವಾಗಿದ್ದು ಮಕ್ಕಳು, ಮಹಿಳೆಯರು ಬೀದಿಯಲ್ಲಿ ಓಡಾಡಲು ಭಯಪಡುವಂತಾಗಿದೆ.

ಸ್ಥಳೀಯ ಪುರಸಭೆಯು ಕುಡಿಯುವ ನೀರು ಹಾಗೂ ಕಸ ವಿಲೇವಾರಿಗೆ ಹೆಚ್ಚು ಗಮನ ಗಮನ ಹರಿಸಬೇಕು. ಆದರೆ ಕಸ ವಿಲೇವಾರಿಯಲ್ಲಿ ಇಚ್ಛಾಶಕ್ತಿ ಕೊರತೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಪ್ರತಿ ನಿತ್ಯ ಕಸ ವಿಲೇವಾರಿಗೆಂದು ಮೂರು ಆಟೊ ಟಿಪ್ಪರ್, ಒಂದು ಟ್ರಾಕ್ಟರ್‌, ಒಂದು ಕಾಂಪ್ಯಾಕ್ಟರ್ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ವಾರ್ಡ್ ಸುತ್ತ ಸಂಚಾರ ಮಾಡಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಆದರೂ ಬೀದಿಯಲ್ಲಿ ಏಕೆ ಕಸ ಚೆಲ್ಲಾಡುತ್ತಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಾರೆ.

ಪಟ್ಟಣದ ಪೇಟೆಬೀದಿ, ಲೀಲಾವತಿ ಬಡಾವಣೆಯ ಪಾರ್ಕ್ ಮುಂಭಾಗ, ಹಳೇ ಬಸ್ ನಿಲ್ದಾಣದಿಂದಟೀಚರ್ಸ್ ಕಾಲೊನಿ ರಸ್ತೆ, ಸರ್ ಎಂ.ವಿಶ್ವೇಶ್ವರಯ್ಯ ನಗರ, ಶಿವಪುರದ ಸತ್ಯಾಗ್ರಹ ಸೌಧದ ಆಸುಪಾಸು, ರಾಮ್ ರಹೀಂ ನಗರ, ಚನ್ನೇಗೌಡ ಬಡಾವಣೆಯಲ್ಲಿ ಕಸದ ರಾಶಿಯ ದರ್ಶನವಾಗುತ್ತದೆ. ಅಷ್ಟೇ ಏಕೆ, ತಹಶೀಲ್ದಾರ್ ನಿವಾಸದ ಪಕ್ಕದಲ್ಲಿಯೇ ಕಸದ ರಾಶಿಯ ದುರ್ವಾಸನೆ ಮೂಗಿಗೆ ರಾಚುತ್ತದೆ.

ಈ ಅವ್ಯವಸ್ಥೆಗಳನ್ನು ನೋಡಿಯೂ ಪುರಸಭೆಯು ಎಚ್ಚೆತ್ತುಕೊಳ್ಳದೆ ಗಮನ ಕೊಡದೆ ಇರುವುದು ವಿಪರ್ಯಾಸವಾಗಿದ್ದು ಇದು ಹೀಗೆಯೇ ಮುಂದುವರಿದರೆ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಾರೆ.

‘ಪಟ್ಟಣದ ಜನತೆಗೆ ಕಸದ ಸಮಸ್ಯೆಯಿಂದ ಬೇಸರವಾಗಿದ್ದು ಓಡಾಡುವೇ ದುಸ್ತರವಾಗಿದೆ. ಅಧಿಕಾರಿಗಳು ಕಸದ ಸಮಸ್ಯೆಯನ್ನು ಕಣ್ಣು ತೆರೆದು ನೋಡಬೇಕು. ಆದಷ್ಟು ಬೇಗ ವೈಜ್ಞಾನಿಕ ಕಸ ವಿಲೇವಾರಿಗೆ ಆದ್ಯತೆ ನೀಡಬೇಕು’ ಎಂದು ಪಟ್ಟಣದ ನಿವಾಸಿ ಶ್ರೀನಿವಾಸ್ ಒತ್ತಾಯಿಸಿದರು.

‘ಕಸ ವಿಲೇವಾರಿಗೆ ಅವಶ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಆದರೂ ಕಸ ಬಿದ್ದಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಮುರುಗೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT