ಶನಿವಾರ, ಮೇ 15, 2021
26 °C
ಪಿಎಚ್‌ಸಿ, ಸಿಎಸ್‌ಸಿಗಳಲ್ಲೂ ಪರೀಕ್ಷೆ, ವರದಿ ಬಂದ ನಂತರವಷ್ಟೇ ಆಸ್ಪತ್ರೆಯಲ್ಲಿ ದಾಖಲಾತಿ

ಆಸ್ಪತ್ರೆಗೆ ಬಂದವರೆಲ್ಲರಿಗೂ ಕೋವಿಡ್‌ ಪರೀಕ್ಷೆ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕಾರಣ ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೂ ಕೋವಿಡ್‌ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ. ಪರೀಕ್ಷಾ ವರದಿ ಬಂದ ನಂತರವಷ್ಟೇ ಇತರ ಆರೋಗ್ಯ ಸಮಸ್ಯೆಯಿಂದ ಬಳಲುವ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಸೇರಿದಂತೆ ಇತರ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗುತ್ತದೆ. 1ನೇ ಅಲೆ ಸಂದರ್ಭದಲ್ಲಿ ಇಡೀ ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆ ಎಂದು ಘೋಷಿಸಲಾಗಿತ್ತು. ಆದರೆ, ಈ ಬಾರಿ ಇತರ ಆರೋಗ್ಯ ಸಮಸ್ಯೆಯಿಂದ ಬಳಲುವವರ ಚಿಕಿತ್ಸೆಗೂ ಆದ್ಯತೆ ನೀಡಲಾಗುತ್ತದೆ. ಹೀಗಾಗಿ  ಚಿಕಿತ್ಸೆಗೆ ಬರುವ ಎಲ್ಲಾ ರೋಗಿಗಳಿಗೆ ಮೊದಲು ಕೋವಿಡ್ ಪರೀಕ್ಷೆ ನಡೆಯಲಿದೆ.

ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ಎಲ್ಲರಿಗೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಹೊರರೋಗಿಗಳಾಗಿ ಆಸ್ಪತ್ರೆಗೆ ಬರುವವರಿಗೂ ಪರೀಕ್ಷೆ ಮಾಡಿಸುವಂತೆ ವೈದ್ಯರು ಸೂಚನೆ ನೀಡುತ್ತಿದ್ದಾರೆ. ಒಳರೋಗಿಗಳಾಗಿ ದಾಖಲಾಗುವವರಿಗೆ ಪರೀಕ್ಷೆಯ ನಂತರವಷ್ಟೇ ದಾಖಲು ಮಾಡಿಕೊಳ್ಳಲಾಗುತ್ತಿದೆ.

‘ತುರ್ತು ಚಿಕಿತ್ಸೆಯ ಅಗತ್ಯ ಇರುವ ರೋಗಿಗಳಿಗೆ ರ್‍ಯಾಂಡಮ್‌ ಕೋವಿಡ್‌ ಪರೀಕ್ಷೆ ನಡೆಸಲಾಗುವುದು. ಗಂಭೀರವಲ್ಲದ ಸಮಸ್ಯೆಗಳಿಂದ ಬಳಲುತ್ತಿರುವ ಒಳರೋಗಿಗಳಿಗೆ, ಹೊರರೋಗಿಗಳಿಗೆ ಆರ್‌ಟಿಪಿಸಿಆರ್‌ ಮಾಡಲಾಗುವುದು. ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಸಹಕಾರ ನೀಡಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಪಿಎಚ್‌.ಸಿ., ಸಿಎಸ್‌ಸಿ ಯಲ್ಲೂ ಪರೀಕ್ಷೆ: ಕೋವಿಡ್‌ ಹರಡುತ್ತಿರುವು ದನ್ನು ತಡೆಯಲು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ), ಸಮುದಾಯ ಆರೋಗ್ಯ ಕೇಂದ್ರ (ಸಿಎಸ್‌ಸಿ)ಗಳಲ್ಲೂ ಸಮರೋಪಾದಿಯಲ್ಲಿ ಪರೀಕ್ಷೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.

ಕೋವಿಡ್‌ ಮೊದಲ ಅಲೆಯ ಅವಧಿಯಲ್ಲಿ ಎಲ್ಲೆಡೆ ಪರೀಕ್ಷೆ ನಡೆಸಲಾಗು ತ್ತಿತ್ತು. ಆದರೆ, ಪ್ರಕರಣಗಳ ಸಂಖ್ಯೆ ಕಡಿಮೆಯಾದ ಕಾರಣ ತಾಲ್ಲೂಕು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಕೋವಿಡ್‌ ಪರೀಕ್ಷೆ ಸೀಮಿತಗೊಳಿಸ ಲಾಗಿತ್ತು. ಆದರೆ, ಈಗ 2ನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಮತ್ತೆ ಎಲ್ಲಾ ಪಿಎಚ್‌ಸಿ, ಸಿಎಸ್‌ಸಿಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಎಲ್ಲಾ ಆಸ್ಪತ್ರೆ ವೈದ್ಯರಿಗೆ ಸೂಚನೆ ನೀಡಲಾಗಿದೆ.

ಹೆಚ್ಚಿನ ಸಂಖ್ಯೆಯ ಜನರು ಸ್ವಯಂ ಪ್ರೇರಿತವಾಗಿ ತಾಲ್ಲೂಕು ಹಾಗೂ ಜಿಲ್ಲಾಸ್ಪತ್ರೆಗೆ ಕೋವಿಡ್‌ ಪರೀಕ್ಷೆಗಾಗಿ ಬರುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಜನಜಂಗುಳಿ ಉಂಟಾಗುತ್ತಿರುವ ಕಾರಣ ಎಲ್ಲಾ ಪಿಎಚ್‌ಸಿಗಳಲ್ಲಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ. ಅದಕ್ಕೆ ಬೇಕಾಗಿರುವ ಸಿಬ್ಬಂದಿ, ಪಿಪಿಇ ಕಿಟ್‌ ವ್ಯವಸ್ಥೆ ಮಾಡಲಾಗಿದೆ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಆಯಾ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

‘ಪ್ರತಿದಿನ ಜಿಲ್ಲೆಯಲ್ಲಿ 4 ಸಾವಿರ ಜನರಿಗೆ ಕೋವಿಡ್‌ ಪರೀಕ್ಷೆ ನಡೆಸುವ ಗುರಿ ಇಟ್ಟುಕೊಳ್ಳಲಾಗಿದೆ. ವಿವಿಧೆಡೆ ಶಿಬಿರ ನಡೆಸುವ ಮೂಲಕವೂ ಪರೀಕ್ಷೆ ನಡೆಸಲಾಗುವುದು. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಜಿಲ್ಲೆಯಲ್ಲಿದ್ದ ಎಲ್ಲಾ ಕೋವಿಡ್‌ ಕೇರ್‌ ಕೇಂದ್ರಗಳನ್ನು ಮತ್ತೆ ತೆರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಹೇಳಿದರು.

ಜನರ ಅಸಹಕಾರ
ಆಸ್ಪತ್ರೆ ದಾಖಲಾಗುವ ಮುಂಚೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡುತ್ತಿರುವ ವೈದ್ಯರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಬೆಳಕಿಗೆ ಬಂದಿದೆ.

ರೋಗಿಗಳ ಜೊತೆಯಲ್ಲಿ ಬರುವ ಸಂಬಂಧಿಕರಿಗೂ ಪರೀಕ್ಷೆ ಮಾಡಿಸುವಂತೆ ತಿಳಿಸುತ್ತಿರುವುದಕ್ಕೆ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವೈದ್ಯರ ಜೊತೆ ಜಗಳಕ್ಕಿಳಿಯುತ್ತಿರುವ ಜನರು ಕೋವಿಡ್‌ ಪರೀಕ್ಷೆ ನಿರಾಕರಿಸುತ್ತಿದ್ದಾರೆ, ಅಸಹಕಾರ ತೋರುತ್ತಿದ್ದಾರೆ.

‘ವೈದ್ಯರು, ಆಸ್ಪತ್ರೆ ಸಿಬ್ಬಂದಿಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಸಹಕಾರ ನೀಡುವಂತೆ ಕೋರುತ್ತಿದ್ದೇವೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.