ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಮರಗಳ್ಳರಿಗೆ, ಜಾಗ ಭೂಗಳ್ಳರಿಗೆ!

ಇಂಡುವಾಳು ಪ್ರಕೃತಿ ಉದ್ಯಾನಕ್ಕೆ ಒತ್ತುವರಿ ಕಾಟ, ಕುಡಿಯುತ್ತಿದೆ ಐತಿಹಾಸಿಕ ಕಾಡು
Last Updated 27 ಜುಲೈ 2019, 19:30 IST
ಅಕ್ಷರ ಗಾತ್ರ

ಮಂಡ್ಯ: ದಶಕದ ಹಿಂದೆ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ‘ಇಂಡುವಾಳು ಪ್ರಕೃತಿ ಉದ್ಯಾನ’ ಈಗ ಕಿಡಿಗೇಡಿಗಳ ತಾಣವಾಗಿದೆ. ಅಮೂಲ್ಯ ಮರಗಳು ಕಳ್ಳರ ಪಾಲಾಗುತ್ತಿದ್ದರೆ, ಅರಣ್ಯ ಭೂಮಿ ಪ್ರಭಾವಿ ಭೂಗಳ್ಳರ ಕೈಸೇರುತ್ತಿದೆ.

ದಟ್ಟವಾಗಿದ್ದ ಇಂಡುವಾಳು ಅರಣ್ಯದೊಳಗೆ ಕಾಲಿಟ್ಟರೆ ಕತ್ತಲು ಕವಿಯುತ್ತಿತ್ತು. ಸೂರ್ಯನ ಕಿರಣಗಳು ನೆಲಕ್ಕುರುಳದಂತೆ ಮರ–ಗಿಡಗಳು ಬಚ್ಚಿಟ್ಟುಕೊಳ್ಳುತ್ತಿದ್ದವು. ತಲೆ ಎತ್ತಿ ನೋಡಿದರೆ ಆಕಾಶವೇ ಕಾಣುತ್ತಿರಲಿಲ್ಲ. ಅಷ್ಟು ದಟ್ಟಾರಣ್ಯ ಇಂದು ಖಾಲಿಯಾಗುವ ಹಂತಕ್ಕೆ ತಲುಪಿದೆ. ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಪ್ರಕೃತಿಯ ರಮಣೀಯ ದೃಶ್ಯ ಕಾವ್ಯ ಶೋಕ ಗೀತೆಯಂತಾಗಿದೆ.

ಈ ಪ್ರಕೃತಿಯ ಉದ್ಯಾನಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. 1982ರಲ್ಲಿ ಇಲ್ಲಿ ಮಿನಿ ಪ್ರಾಣಿ ಸಂಗ್ರಹಾಲಯ ಸ್ಥಾಪಿಸಲಾಯಿತು. ಅದಕ್ಕೂ ಮೊದಲು 1942ರಲ್ಲಿ ಅರಣ್ಯದಲ್ಲೇ ಸಸ್ಯಕ್ಷೇತ್ರವನ್ನೂ ಆರಂಭಿಸಲಾಗಿತ್ತು. ಪ್ರಾಣಿ ಸಂಗ್ರಹಾಲಯದಲ್ಲಿ 100ಕ್ಕೂ ಹೆಚ್ಚು ಜಿಂಕೆಗಳಿದ್ದವು. 10 ಕಡವೆ, 10 ಕೃಷ್ಣಮೃಗ, 20 ಬಾತು ಕೋಳಿ, 100 ಬಿಳಿ ಮೊಲಗಳನ್ನು ಸಾಕಣೆ ಮಾಡಲಾಗಿತ್ತು. ನೂರಾರು ನವಿಲುಗಳೂ ನಿತ್ಯ ನಾಟ್ಯವಾಡುತ್ತಿದ್ದವು. ಉದ್ಯಾನದ ಸುತ್ತಲೂ ಬೇಲಿ ನಿರ್ಮಿಸಿ ಪ್ರಾಣಿಗಳಿಗೆ ರಕ್ಷಣೆ ನೀಡಲಾಗಿತ್ತು. ಜಿ.ಮಾದೇಗೌಡರು ಅರಣ್ಯ ಸಚಿವರಾಗಿದ್ದಾಗ ಉದ್ಯಾನಕ್ಕೆ ಸುಂದರ ರೂಪ ನೀಡಲಾಗಿತ್ತು.

ಆದರೆ 2005ರ ನಂತರ, ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದ ನಿಯಮದಂತೆ ಉದ್ಯಾನ ನಿರ್ವಹಣೆ ಕಷ್ಟವಾಯಿತು. ಅದನ್ನೇ ನೆಪವಾಗಿಟ್ಟುಕೊಂಡು ಇಲ್ಲಿಯ ಸಂಗ್ರಹಾಲಯವನ್ನು ಸ್ಥಗಿತಗೊಳಿಸಲಾಯಿತು. ಪ್ರಾಣಿಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಭದ್ರ ವನ್ಯಜೀವಿ ವಲಯಕ್ಕೆ ಬಿಡಲಾಯಿತು. ಅದನ್ನು ಉಳಿಸಿಕೊಳ್ಳಲು ಸಾಕಷ್ಟು ಅವಕಾಶವಿದ್ದರೂ ಅರಣ್ಯ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಪ್ರಕೃತಿ ಪ್ರೇಮಿಗಳು ದೂರುತ್ತಾರೆ.

‘ಇಲ್ಲಿಯ ಅರಣ್ಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ವಿದೇಶಿ ಪ್ರವಾಸಿಗರೂ ಭೇಟಿ ನೀಡುತ್ತಿದ್ದರು. ಪ್ರಾಣಿ ಸಂಗ್ರಹಾಲಯ ಸ್ಥಗಿತಗೊಂಡಾಗ ಕೆಲವರು ಮೊಲಗಳನ್ನು ಹಿಡಿದು, ಕೊಂದು ತಿಂದರು. ಈಗ ಕೇವಲ ಹಾವು ಮತ್ತು ನವಿಲುಗಳಷ್ಟೇ ವಾಸವಾಗಿವೆ. ಅರಣ್ಯವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ’ ಎಂದು ಹಿಂಡುವಾಳು ಗ್ರಾಮದ ಶಿವಶಂಕರ್‌ ತಿಳಿಸಿದರು.

ಉದ್ಯಾನದಲ್ಲಿ ಪ್ರವಾಸಿಗರಿಗೆ ಸಕಲ ಸೌಲಭ್ಯ ಕಲ್ಪಿಸಲಾಗಿತ್ತು. ಕುಳಿತುಕೊಳ್ಳಲು ಮಂಟಪ, ಕಲ್ಲು ಬೆಂಚು ವ್ಯವಸ್ಥೆಯೂ ಇತ್ತು. ಅಂಗಡಿ ಮಳಿಗೆ, ಮಾಹಿತಿ ಕೇಂದ್ರವನ್ನೂ ತೆರೆಯಲಾಗಿತ್ತು. ಜಿಂಕೆಗಳ ವಾಸಕ್ಕಾಗಿ ಸಾಲಾಗಿ ಜಿಂಕೆ ಮನೆ ನಿರ್ಮಾಣ ಮಾಡಲಾಗಿತ್ತು. ಈಗ ಇವೆಲ್ಲವೂ ಪಾಳು ಬಿದ್ದಿದ್ದು ಪಳೆಯುಳಿಕೆಗಳಂತೆ ಕಾಣುತ್ತವೆ. ಅರಣ್ಯದ ಸುತ್ತಲೂ ನಾಲೆ ಹರಿಯುತ್ತಿದ್ದು ಈಗಲೂ ರಮಣೀಯ ದೃಶ್ಯ ಈಗಲೂ ಇದೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸುಂಡಹಳ್ಳಿ, ಇಂಡುವಾಳು ಸರ್ವೇ ನಂಬರ್‌ನಲ್ಲಿ ಉದ್ಯಾನವಿದ್ದು ಅರಣ್ಯ ಇಲಾಖೆ ಮಂಡ್ಯ ಉಪ ವಿಭಾಗಕ್ಕೆ ಸೇರಿದೆ.

ಜಾಗ ಪ್ರಭಾವಿಗಳ ಪಾಲು: ಹಿಂದಿನ ದಾಖಲಾತಿ ಪ್ರಕಾರ ಅರಣ್ಯ ಹಾಗೂ ಸಸ್ಯ ಕ್ಷೇತ್ರ ಸೇರಿ 400 ಎಕರೆ ಜಾಗದಲ್ಲಿ ಅರಳಿ ನಿಂತಿತ್ತು. ಆದರೆ ಈಗ ಅರಣ್ಯ ಇಲಾಖೆ ದಾಖಲಾತಿಯಂತೆ ಕೇವಲ 88 ಎಕರೆಯ ಮಾಹಿತಿಯಷ್ಟೇ ಇದೆ. ಉಳಿದ ಭೂಮಿಯನ್ನು ಇಲಾಖೆಗಳೇ ಪ್ರಭಾವಿಗಳಿಗೆ ಮಂಜೂರು ಮಾಡಿಕೊಟ್ಟಿವೆ. 2005 ರಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇಡೀ ಅರಣ್ಯವನ್ನು ಪ್ರಭಾವಿಯೊಬ್ಬರಿಗೆ ಮಂಜೂರು ಮಾಡಿದ್ದರು. ಆದರೆ ಪ್ರಕೃತಿ ಪ್ರೇಮಿಗಳು ಉಗ್ರ ಹೋರಾಟ ನಡೆಸಿದ ನಂತರ ಮಂಜೂರಾತಿ ರದ್ದುಗೊಂಡಿತು.

‘ಭಾರತ ಗೆಜಟಿಯರ್‌ನಲ್ಲೂ ಇಂಡುವಾಳು ಪ್ರಕೃತಿಧಾಮದ ವಿವರಣೆ ಇದೆ. ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇತಿಹಾಸದ ಪುಟ ಸೇರಿದ ಮಂಡ್ಯದ ಸ್ಮಾರಕಗಳಲ್ಲಿ ಈ ಉದ್ಯಾನವೂ ಒಂದು. ಒತ್ತುವರಿ ತೆರವುಗೊಳಿಸುವಂತೆ ಹಲವು ಹೋರಾಟ ನಡೆಸಿದರೂ ಬೇಡಿಕೆ ಈಡೇರಿಲ್ಲ. ಭೂಗಳ್ಳರು ಈ ಅರಣ್ಯದ ಮೇಲೆ ಸದಾ ಕಣ್ಣಿಟ್ಟಿದ್ದಾರೆ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಹೇಳಿದರು.

ಪುನಶ್ಚೇತನವೂ ಕೈಗೂಡಲಿಲ್ಲ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2014ರಲ್ಲಿ ಉದ್ಯಾನದಲ್ಲಿ ‘ಸಸ್ಯೋದ್ಯಾನ’ (ಟ್ರೀ ಪಾರ್ಕ್‌) ರೂಪಿಸಲು ಆ ಮೂಲಕ ಪುನಶ್ಚೇತನಕ್ಕೆ ಯತ್ನಿಸಲಾಯಿತು. ಅದಕ್ಕಾಗಿ ₹ 1 ಕೋಟಿ ಹಣ ಮೀಸಲಿಡಲಾಗಿತ್ತು. ಆದರೆ ಸ್ಥಳೀಯ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಕಾಮಗಾರಿ ಆರಂಭವಾಗಲೇ ಇಲ್ಲ. ಕೊನೆಗೆ ಆ ಹಣ ಮೈಸೂರು ಜಿಲ್ಲೆಗೆ ಕೊಡಲಾಯಿತು ಎಂದು ಸ್ಥಳೀಯರು ದೂರುತ್ತಾರೆ.

ಅನೈತಿಕ ಚಟುವಟಿಕೆಗಳ ತಾಣ:ಇಂಡುವಾಳು ಅರಣ್ಯ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅಲ್ಲಿಯ ಕಲ್ಲು ಬೆಂಚುಗಳ ಮೇಲೆ ಮದ್ಯದ ಬಾಟಲಿ, ಸೌತೆಕಾಯಿ, ನಿಂಬೆಹಣ್ಣು ಚೂರುಗಳು ಚೆಲ್ಲಾಡುತ್ತಿವೆ. ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು ಬಿದ್ದಿವೆ. ಪೊಲೀಸ್‌ ಹಾಗೂ ಅರಣ್ಯ ಇಲಾಖೆಯ ಯಾವುದೇ ಬಿಗಿ ನಿಯಂತ್ರಣ ಇಲ್ಲದ ಕಾರಣ ಕೇಳುವವರೇ ಇಲ್ಲದಂತಾಗಿದೆ. ಸ್ಥಳೀಯರು ಇಲ್ಲಿಯ ಚಟುವಟಿಕೆ ವಿರುದ್ಧ ಹಲವು ಬಾರಿ ದೂರು ನೀಡಿದ್ದರೂ ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿಲ್ಲ.

‘ಕಾಲೇಜು ವಿದ್ಯಾರ್ಥಿಗಳು ಒಂದೇ ಬೈಕ್‌ನಲ್ಲಿ ನಾಲ್ಕೈದು ಜನ ಕುಳಿತು ಬರುತ್ತಾರೆ. ಕುಡಿದು ಕುಣಿಯುತ್ತಾರೆ, ಜನ್ಮದಿನ ಮಾಡುತ್ತಾರೆ. ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ’ ಎಂದು ಸುಂಡಹಳ್ಳಿ ಗ್ರಾಮಸ್ಥರಾದ ಶಂಕರೇಗೌಡ ಆರೋಪಿಸಿದರು.

**
ಅರಣ್ಯ ಇಲಾಖೆ ಸಿಬ್ಬಂದಿ ಇಂಡುವಾಳು ಅರಣ್ಯದಲ್ಲಿ ಕ್ಯಾಂಪ್‌ ಹಾಕಿದ್ದಾರೆ. ಮರಗಳ್ಳತನವಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದೆ ಮತ್ತಷ್ಟು ಭದ್ರತೆ ಹೆಚ್ಚಿಸಲಾಗುವುದು.
–ಎನ್‌.ಶಿವರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT