ಭಾನುವಾರ, ಸೆಪ್ಟೆಂಬರ್ 22, 2019
22 °C
ಕುಡಿಯುವ ನೀರಿಗೆ ಖಾಸಗಿ ಕೊಳವೆಬಾವಿಗಳ ಮೊರೆ ಹೋದ ಅಧಿಕಾರಿಗಳು

ಬತ್ತಿದ ಕೆರೆ: ಬಾಯಾರಿದ ಜನ, ಜಾನುವಾರು

Published:
Updated:
Prajavani

ಪಾಂಡವಪುರ: ‘ಮಳೆ ಇಲ್ಲ, ಬೆಳೆ ಇಲ್ಲ, ಕುಡಿಯುವ ನೀರಿಗೂ ಬರ ಬಂದೈತೆ ಸ್ವಾಮಿ. ಊರ ಹುಡುಗ್ರೆಲ್ಲಾ ಪಟ್ಟಣ ಕಡೆಗೆ ಗುಳೇ ಹೋಗವ್ರೆ, ಪಂಚಾಯಿತಿಯವ್ರು ಟ್ಯಾಂಕರ್‌ನಲ್ಲಿ ನೀರು ಕೊಡ್ತಾ ಅವ್ರೆ. ಅನ್ನಭಾಗ್ಯದ ಅಕ್ಕಿ ನಮ್ ಕಾಪಾಡ್ತಿದೆ...’ ‌

ತಾಲ್ಲೂಕಿನ ಗುಜಗೋನಹಳ್ಳಿ ಗ್ರಾಮದ ಮಹಿಳೆಯರ ನೋವಿನ ನುಡಿಗಳಿವು.

ಬಳಿಘಟ್ಟ ಪಂಚಾಯಿತಿಯ ಕುಗ್ರಾಮ ಗುಜುಗೋನಹಳ್ಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಸುಮಾರು 200 ಜನಸಂಖ್ಯೆ ಹೊಂದಿರುವ ಈ ಗ್ರಾಮವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಹಿಂದೆ ಕೊಳವೆಬಾವಿಯಿಂದ ನೀರು ಸರಬರಾಜು ಮಾಡಿ, ತೊಂಬೆಗಳ ಮೂಲಕ ನೀರು ನೀಡಲಾಗುತ್ತಿತ್ತು. ಆದರೆ, ಮಳೆ ಇಲ್ಲದೆ ಅಂತರ್ಜಲ ಕುಸಿದಿರುವ ಕಾರಣ ಕೊಳವೆಬಾವಿಗಳು ಬತ್ತಿ ಹೋಗಿವೆ. ಪಕ್ಕದ ಪಗಡೆಕಲ್ಲಹಳ್ಳಿ ಗ್ರಾಮದಿಂದ ಟ್ಯಾಂಕರ್ ಮುಖಾಂತರ ನೀರನ್ನು ಪೂರೈಸಲಾಗುತ್ತಿದೆ.

ಮೂರು ದಿನಗಳಿಗೊಮ್ಮೆ ಬೆಳಿಗ್ಗೆ ಮತ್ತು ಸಂಜೆ ನೀರು ಪೂರೈಸಲಾಗುತ್ತಿದೆ. ಸುತ್ತಮುತ್ತ ಮಳೆ ಇಲ್ಲದೆ ಕೆರೆಗಳು ಬತ್ತಿಹೋಗಿವೆ. ಟ್ಯಾಂಕರ್ ಮೂಲಕ ಕೊಡುವ ನೀರನ್ನು ಕುಡಿಯಲು, ನಿತ್ಯ ಕರ್ಮಕ್ಕಾಗಿ, ಬಟ್ಟೆ ತೊಳೆಯಲು ಹಾಗೂ ಜಾನುವಾರುಗಳಿಗೆ ಬಳಕೆ ಮಾಡಬೇಕಿದೆ. ಬಿಂದಿಗೆ ಮತ್ತು ಡ್ರಮ್‌ಗಳಿಗೆ ನೀರನ್ನು ತುಂಬಿಸಿ ಇಟ್ಟುಕೊಳ್ಳುವ ಮಹಿಳೆಯರ ಕಷ್ಟ ಹೇಳತೀರದು. ನೀರು ಮುಗಿದಾಗ ಪುರುಷರು ಎತ್ತಿನಗಾಡಿ, ಬೈಕ್‌, ಸೈಕಲ್‌ ಮೂಲಕ ದೂರದಿಂದ ನೀರು ತರಬೇಕಾದ ಪರಿಸ್ಥಿತಿ ಇದೆ.

‘ಇಷ್ಟೊತ್ತಿಗಾಗಲೇ ಮಳೆ ಆರಂಭವಾಗಬೇಕಾಗಿತ್ತು. ಕಾಳು ಬಿತ್ತನೆ ಆರಂಭಗೊಳ್ಳಬೇಕಾಗಿತ್ತು. ಕಳೆದ ಬಾರಿ ರಾಗಿ ಬೆಳೆ ಕೈ ಸೇರಲಿಲ್ಲ. ದನ, ಕುರಿ ಮೇಯಿಸೋಣ ಅಂದ್ರೆ ಚಿರತೆಗಳ ಹಾವಳಿ ಹೆಚ್ಚಾಗಿದೆ. ನಮ್ಮದು ಪಾಂಡವಪುರ ತಾಲ್ಲೂಕಿನ ಕೊನೆಯ ಭಾಗ. ಮೊದಲಿನಿಂದಲೂ ಈ ಭಾಗವನ್ನು ಕಡೆಗಣಿಸಲಾಗುತ್ತಿದೆ. ವೋಟು ಕೇಳಲಿಕ್ಕೆ ಬರುತ್ತಾರೆ ಅಷ್ಟೆ. ನಮ್ಮ ಕಷ್ಟ ಕೇಳುವವರು ಯಾರೂ ಇಲ್ಲ’ ಎಂದು ಗ್ರಾಮದ ಪಾರ್ವತಮ್ಮ, ಲಕ್ಷ್ಮಮ್ಮ, ಮರಿಸ್ವಾಮಿಗೌಡ ನೋವು ತೋಡಿಕೊಂಡರು.

ಬಳಿಘಟ್ಟ ಪಂಚಾಯಿತಿ ವ್ಯಾಪ್ತಿಯ ಬಳಿಘಟ್ಟ, ಕನಗೋನಹಳ್ಳಿ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಚಿನಕುರಳಿ ಪಂಚಾಯಿತಿಯ ಕನಗನಹಳ್ಳಿ ಗ್ರಾಮಕ್ಕೆ 300 ಮೀಟರ್‌ನಿಂದ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ತಾಲ್ಲೂಕಿನ ಕೆಆರ್‌ಎಸ್‌ ಹಿನ್ನೀರಿನ ಪ್ರದೇಶ ಸೇರಿದಂತೆ 65 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನೀರು ಪೂರೈಕೆಯಾಗುತ್ತಿದೆ. ಅದೇ ರೀತಿ ತೊಣ್ಣೂರು ಕೆರೆಯಿಂದ ಮೇಲುಕೋಟೆ ಸುತ್ತಮುತ್ತಲಿನ 33 ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ.

ವಿದ್ಯುತ್ ಕೊರತೆ: ವಿವಿಧೆಡೆ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡದ ಕಾರಣ ಟ್ಯಾಂಕ್‌ಗಳಿಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ನಿರಂತರ ಜ್ಯೋತಿ ಯೋಜನೆಯ ವಿದ್ಯುಚ್ಛಕ್ತಿಯನ್ನು ಕುಡಿಯುವ ನೀರಿನ ಪೂರೈಕೆಗೆ ಬಳಸುವಂತಿಲ್ಲ. ಹೀಗಾಗಿ ನೀರು ಸರಬರಾಜಿಗೆ ಸೆಸ್ಕ್‌ ಸಿಬ್ಬಂದಿ ದಿನದಲ್ಲಿ 2 ಗಂಟೆ ಮಾತ್ರ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ನೀರು ಸರಬರಾಜು ಮಾಡಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಬಳಿಘಟ್ಟ ಪಂಚಾಯಿತಿಯ ವಾಟರ್‌ಮನ್‌ ರಂಗಯ್ಯ.

ಹಾಳಾಗಿವೆ ಕುಡಿಯುವ ನೀರಿನ ಘಟಕಗಳು: ತಾಲ್ಲೂಕಿನಲ್ಲಿ ಸುಮಾರು 61 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ ಬನಘಟ್ಟ, ನ್ಯಾಮನಹಳ್ಳಿ, ಹಳೇಬೀಡು, ಮಾಣಿಕ್ಯನಹಳ್ಳಿ, ಹೆಗ್ಗಡಹಳ್ಳಿ ಗ್ರಾಮಗಳಲ್ಲಿನ ಘಟಕಗಳು ಹಾಳಾಗಿದ್ದು, ನೀರಿನ ‌ಪೂರೈಕೆಯಾಗುತ್ತಿಲ್ಲ. ಪಗಡೆಕಲ್ಲಹಳ್ಳಿ ಗ್ರಾಮದ ಘಟಕದ ಕಾಮಗಾರಿ ಪೂರ್ಣಗೊಂಡಿಲ್ಲ.

‘ತಾಲ್ಲೂಕಿನಲ್ಲಿ 83 ಕೆರೆಗಳಿವೆ. ಬಹುತೇಕ ಕೆರೆಗಳು ಖಾಲಿ ಇವೆ. ಕೆರೆಗಳನ್ನು ನಾಲೆ ನೀರು ಹರಿಸಿ ತುಂಬಿಸಲಾಗಿತ್ತು. ಆದರೆ, ಈ ಬೇಸಿಗೆಯಲ್ಲಿ ಎಲ್ಲ ಕೆರೆಗಳು ಬತ್ತಿಹೋಗಿ ಶೇ 5 ರಷ್ಟು ಮಾತ್ರ ನೀರಿದೆ’ ಎಂದು ಕಾವೇರಿ ನೀರಾವರಿ ನಿಗಮದ (ಹೇಮಾವತಿ) ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶ್ರೀನಿವಾಸ್ ಹೇಳಿದರು.

Post Comments (+)