ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಮುಂದಿನ ಮಿಮ್ಸ್‌ ನಿರ್ದೇಶಕ ಯಾರು?

ಡಾ.ಜಿ.ಎಂ.ಪ್ರಕಾಶ್‌ ಅಧಿಕಾರಾವಧಿ ಮುಕ್ತಾಯ, ಆಸ್ಪತ್ರೆ, ಕಾಲೇಜು ಆವರಣದಲ್ಲಿ ಕುತೂಹಲ
Last Updated 7 ಅಕ್ಟೋಬರ್ 2020, 20:15 IST
ಅಕ್ಷರ ಗಾತ್ರ

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ನಿರ್ದೇಶಕರಾಗಿದ್ದ ಡಾ.ಜಿ.ಎಂ.ಪ್ರಕಾಶ್‌ ಅವರ ಅಧಿಕಾರಾವಧಿ ಸೆ.30ಕ್ಕೆ ಅಂತ್ಯಗೊಂಡಿದೆ. ಮುಂದೆ ನಿರ್ದೇಶಕರಾಗಿ ಯಾರು ಸಂಸ್ಥೆಯನ್ನು ಮುನ್ನಡೆಸುತ್ತಾರೆ ಎಂಬ ಕುತೂಹಲ ಮಿಮ್ಸ್‌ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಅಂಗಳದಲ್ಲಿ ಸೃಷ್ಟಿಯಾಗಿದೆ.

ಮಾಜಿ ಸಂಸದ ಜಿ.ಮಾದೇಗೌಡ ಅವರ ಪುತ್ರರೂ ಆಗಿರುವ ಡಾ.ಜಿ.ಎಂ.ಪ್ರಕಾಶ್‌ 2016ರಿಂದ ನಿರ್ದೇಶಕರಾಗಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಕಾಶ್‌ ಅವರನ್ನು ನೇಮಕ ಮಾಡಲಾಗಿತ್ತು. ಮಿಮ್ಸ್‌ ಬೈಲಾ ಅನ್ವಯ ನಿರ್ದೇಶಕರ ಅಧಿಕಾರಾವಧಿ ನಾಲ್ಕು ವರ್ಷಗಳಿಗೆ ನಿಗದಿಯಾಗಿದ್ದು ಅದರನ್ವಯ ಸೆ.30ಕ್ಕೆ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದೆ.

ಈಗ ಹೊಸ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು ನಿಯಮಾನುಸಾರ ಅರ್ಹತೆ ಹೊಂದಿರುವ ವೈದ್ಯರ ಕುರಿತಾದ ಮಾತುಕತೆಗಳು ಆಸ್ಪತ್ರೆ, ಕಾಲೇಜು ಅಂಗಳದಲ್ಲಿ ಗರಿಗೆದರಿವೆ. ಕೋವಿಡ್‌ ಪರಿಸ್ಥಿತಿಯಲ್ಲಿ ಸಂಸ್ಥೆಯ ಮುಖ್ಯಸ್ಥರ ಬಲವಾವಣೆ ಪರಿಸ್ಥಿತಿ ಎದುರಾಗಿದ್ದು ವೈದ್ಯಕೀಯ ಶಿಕ್ಷಣ ಇಲಾಖೆ ಕೈಗೊಳ್ಳುವ ಕ್ರಮದ ಬಗ್ಗೆಯೂ ಕುತೂಹಲ ಮೂಡಿದೆ.

ನಿಯಮಾನುಸಾರ ನಿರ್ದೇಶಕ ಹುದ್ದೆಗೇರಲು 58 ವರ್ಷ ವಯಸ್ಸಿನ ಮಿತಿ ದಾಟಿರಬಾರದು. ವೈದ್ಯಕೀಯ ಸ್ನಾತಕೋತ್ತರ ಪರದವೀಧರನಾಗಿರಬೇಕು, 10 ವರ್ಷಗಳ ಕಾಲ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿರಬೇಕು, 10 ವರ್ಷ ಸರ್ಕಾರಿ ಸೇವೆಯಲ್ಲಿ ಇರಬೇಕು.

ಈ ಎಲ್ಲಾ ಅರ್ಹತೆ ಪಡೆದಿರುವ 17 ಮಂದಿ ಹಿರಿಯ ವೈದ್ಯರು ಮಿಮ್ಸ್‌ನಲ್ಲಿ ಇದ್ದಾರೆ. ಆದರೆ ಅವರಲ್ಲಿ ನಾಲ್ವರು 58 ವರ್ಷ ವಯಸ್ಸಿನ ಮಿತಿ ದಾಟಿದ್ದು ಅವರ ಆಯ್ಕೆ ಅಸಾಧ್ಯ, ಉಳಿದ 13 ಮಂದಿಯಲ್ಲಿ ಯಾರ ಹೆಸರುಗಳು ಮುನ್ನೆಲೆಗೆ ಬರಲಿವೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಯಾರ ಹೆಸರನ್ನು ಅಂತಿಮಗೊಳಿಸಿ ಆದೇಶ ಹೊರಡಿಸಲಿದೆ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.

ಮತ್ತೊಂದು ಅವಧಿಗೆ ಯತ್ನ?: ಈ ನಡುವೆ ಡಾ.ಜಿ.ಎಂ.ಪ್ರಕಾಶ್‌ ಮತ್ತೊಂದು ಅವಧಿಗಾಗಿ ಯತ್ನಿಸುತ್ತಿದ್ದಾರೆ, ತಂದೆ ಜಿ.ಮಾದೇಗೌಡರ ಮೂಲಕ ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿಯಾಗಿದ್ದಾರೆ ಎಂಬ ಮಾತುಕತೆಗಳೂ ಮಿಮ್ಸ್‌ ಆವರಣದಲ್ಲಿವೆ.

‘ಪ್ರಕಾಶ್‌ ಅವರ ಅವಧಿ ಮುಗಿದು ವಾರ ಕಳೆದರೂ ಈವರೆಗೆ ಕುರ್ಚಿ ಬಿಟ್ಟಿಲ್ಲ, ಕಾರು ಬಿಟ್ಟಿಲ್ಲ. ಮತ್ತೆ ನಿರ್ದೇಶಕಾಗುವ ಉದ್ದೇಶದಿಂದಲೇ ಅವರು ಇನ್ನೂ ಅಧಿಕಾರದಲ್ಲಿ ಮುಂದುವರಿಯುತ್ತಿದ್ಧಾರೆ. ಅವಧಿ ಮುಕ್ತಾಯವಾದ ನಂತರ ಅವರು ಕೆಲವು ಕಡತಗಳಿಗೆ ಸಹಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕೆಲ ಗುತ್ತಿಗೆ ಕಾರ್ಮಿಕರಿಗೆ ಸಂಬಳ ಬಂದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಮಿಮ್ಸ್‌ ಸಿಬ್ಬಂದಿಯೊಬ್ಬರು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಡಾ.ಜಿ.ಎಂ.ಪ್ರಕಾಶ್‌ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ಕರೆ ಸ್ವೀಕಾರ ಮಾಡಲಿಲ್ಲ.

‘ಹೊಸ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ಡಾ.ಜಿ.ಎಂ.ಪ್ರಕಾಶ್‌ ಅವರೇ ನನಗೆ ತಿಳಿಸಿದ್ದಾರೆ. ಸರ್ಕಾರ ಹೊಸ ನಿರ್ದೇಶಕರನ್ನು ಆಯ್ಕೆ ಮಾಡುವವರೆಗೂ ಅವರು ಅಧಿಕಾರದಲ್ಲಿ ಮುಂದುವರಿಯುತ್ತಾರೆ. ಇದರಿಂದ ತಾಂತ್ರಿಕ ಸಮಸ್ಯೆ ಎದುರಾದರೆ ಅದನ್ನು ಬಗೆಹರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಸಿಎಂಗೆ ಶಾಸಕ ಎಂ.ಶ್ರೀನಿವಾಸ್‌ ಪತ್ರ

‘ಮಿಮ್ಸ್‌ಗೆ ಹೊಸ ನಿರ್ದೇಶಕರನ್ನು ಆಯ್ಕೆ ಮಾಡಬೇಕು, ಹಳೆಯ ನಿರ್ದೇಶಕರನ್ನು ಮತ್ತೊಂದು ಅವಧಿಗೆ ಮುಂದುವರಿಸಬಾರದು ಎಂದು ಒತ್ತಾಯಿಸಿ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

‘ಎಚ್‌.ಡಿ.ಕುಮಾರಸ್ವಾಮಿ ಮಿಮ್ಸ್‌ ಅಭಿವೃದ್ಧಿಗೆ ₹ 30 ಕೋಟಿ ಅನುದಾನ ನೀಡಿದ್ದರು. ಆದರೆ ಡಾ.ಪ್ರಕಾಶ್‌ ಈ ಹಣವನ್ನು ಇಲ್ಲಿಯವರೆಗೂ ಬಳಸಿಲ್ಲ. ಈ ಕುರಿತು ಸದನದಲ್ಲಿ ನಾನು ಕೇಳಿದಪ್ರಶ್ನೆಗೆ, ಮಿಮ್ಸ್‌ ಆವರಣದಲ್ಲಿ ಜಾಗ ಇಲ್ಲದ ಕಾರಣ ಹಣ ಬಳಸಿಲ್ಲ ಎಂದು ಉತ್ತರ ನೀಡಿದ್ದಾರೆ. ಇಂಥವರಿಂದ ಆಸ್ಪತ್ರೆ ಉದ್ಧಾರ ಆಗುವುದಿಲ್ಲ’ ಎಂದರು.

‘ಅವರು ನಕಲಿ ಸೇವಾ ಪ್ರಮಾಣ ಪತ್ರ ಪಡೆದಿರುವ ವಿಚಾರ ನ್ಯಾಯಾಲಯದಲ್ಲಿದೆ. ಈ ಕುರಿತು ಒಂದು ಪುಸ್ತಕವೇ ಪ್ರಕಟಗೊಂಡಿದೆ. ಪುಸ್ತಕ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT