ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗ್ರೀವಾಜ್ಞೆ ಕೈಬಿಡಲು ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

ಸರ್‌ ಎಂ.ವಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ
Last Updated 25 ಸೆಪ್ಟೆಂಬರ್ 2020, 2:32 IST
ಅಕ್ಷರ ಗಾತ್ರ

ಮಂಡ್ಯ: ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ, ವಿದ್ಯುತ್‌ ಕಾಯ್ದೆಗಳ ಸುಗ್ರೀವಾಜ್ಞೆಗಳನ್ನು ಕೂಡಲೇ ಕೈಬಿಡಬೇಕು, ಕಾರ್ಮಿಕರ ಪರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಜಿಲ್ಲಾ ಘಟಕದ ಸದಸ್ಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಜಮಾಯಿಸಿದ ಕಾರ್ಯಕರ್ತರು, ವಿವಿಧ ವಿಭಾಗದ ಕಾರ್ಮಿಕರು ಕಾಯ್ದೆಗಳಿಗೆ ಸುಗ್ರೀವಾಜ್ಞೆ ತರುವ ಮೂಲಕ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ಹಮಾಲಿ, ಬಳಕೆದಾರರನ್ನು ಕಾರ್ಪೊರೇಟ್‌ ಹಿಡಿತಕ್ಕೆ ಒಪ್ಪಿಸುತ್ತಿದೆ. ಕೂಡಲೇ ಇದನ್ನು ಕೈಬಿಡಬೇಕು ಎಂದು ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಇಂದ ಹೊರಟ ಪ್ರತಿಭಟನಾ ಧರಣಿ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿ ಬಂದಿತು.

ಕೆಲಸದ ಅವಧಿ ಹೆಚ್ಚಳ, ವಾರದ ಕೆಲಸದ ಮಿತಿಯ ಹೆಚ್ಚಳ, ಕಾರ್ಖಾನೆ ಕಾಯ್ದೆ ಪರಿಭಾಷೆ ತಿದ್ದುಪಡಿ, ಕೈಗಾರಿಕಾ ವಿವಾದಗಳ ಕಾಯ್ದೆ ಅಧ್ಯಾಯ 5 ಬಿಗೆ ತಿದ್ದುಪಡಿ ಹಾಗೂ ಗುತ್ತಿಗೆ ಕಾರ್ಮಿಕರ ನೇಮಕಾತಿ ಪರವಾನಗಿ ಮಿತಿ 20ರಿಂದ 50ಕ್ಕೆ ಹೆಚ್ಚಳ ತಿದ್ದುಪಡಿಗಳ ಸುಗ್ರೀವಾಜ್ಞೆ ಕೈಬಿಡಬೇಕು. ಕೋವಿಡ್‌ ಲಾಕ್‌ಡೌನ್‌ ಆರ್ಥಿಕ ಹಿಂಜರಿತ ನೆಪದಲ್ಲಿ ಕಾರ್ಮಿಕರ ವಜಾ, ವರ್ಗಾವಣೆ, ವೇತನ ಒಪ್ಪಂದದಲ್ಲಿನ ವೇತನ ಹೆಚ್ಚಳ ಮುಂದೂಡಿಕೆ ಕ್ರಮಗಳನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಘೋಷಿಸಿರುವ ₹ 2202 ಕೋಟಿ ಪರಿಹಾರ ಅಸಂಘಟಿತ ವಲಯದ 5 ವಿಭಾಗಗಳಿಗೆ ಮಾತ್ರ ಸಂಬಂಧಪಟ್ಟಿದ್ದು, 125ಕ್ಕೂ ಹೆಚ್ಚು ವಲಯಗಳ ಕೋಟ್ಯಂತರ ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ ಕಾರ್ಮಿಕರಿಗೆ ಲಾಕ್‌ಡೌನ್‌ ಅವಧಿಯ ಸಂಕಷ್ಟ ಪರಿಹಾರ ಪ್ಯಾಕೇಜ್‌ ಅನ್ನು ಘೋಷಿಸಬೇಕು. ಅಂತರರಾಜ್ಯ ವಲಸೆ ಕಾರ್ಮಿಕ (ಉದ್ಯೋಗ ಮತ್ತು ಸೇವಾ ಷರತ್ತುಗಳ) ಕಾಯ್ದೆ–1970 ಅನ್ನು ಜಾರಿಗೊಳಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸೆಸ್‌ ಅನ್ನು ಸೋರಿಕೆ ಇಲ್ಲದೆ ಪೂರ್ಣವಾಗಿ ಸಂಗ್ರಹಿಸಬೇಕು. ರಾಜ್ಯದ ಪಾಲಿನ ಜಿಎಸ್‌ಟಿ, ಪರಿಹಾರ ಮೊತ್ತವನ್ನು ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.

ಫ್ರಂಟ್‌ಲೈನ್ ಕೊರೊನಾ ವಾರಿಯರ್ಸ್‌ಗೆ ಅಗತ್ಯ ಪರಿಕರಗಳನ್ನು ನೀಡಬೇಕು, ಯೋಜನಾ ಕಾರ್ಮಿಕರಿಗೆ ಗೌರವಧನ ಪಾವತಿಸಬೇಕು. ಲಾಕ್‌ಡೌನ್‌ ಅವಧಿಯ ವೇತನವನ್ನು ಕಾರ್ಮಿಕರಿಗೆ ಪೂರ್ತಿಯಾಗಿ ಪಾವತಿಸಬೇಕು. ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿದ್ಯುತ್‌, ದೂರ ಸಂಪರ್ಕ, ವಿಮಾ, ಬ್ಯಾಂಕ್‌ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು. ಆನ್‌ಲೈನ್‌ ಶಿಕ್ಷಣ ನೆಪದ ಲೂಟಿ ತಡೆಯಬೇಕು, ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಯ ಉದ್ಯೋಗ ಮತ್ತು ವೇತನವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರೀಕರಣ, ವಾಣಿಜ್ಯೀಕರಣ, ಕೋಮುವಾದೀಕರಣಕ್ಕೆ ಎಡೆ ಮಾಡಿಕೊಡುವ ನೂತನ ಶಿಕ್ಷಣ ನೀತಿ 2020 ರದ್ದುಪಡಿಸಬೇಕು. ಸಾರ್ವಜನಿಕ ಶಿಕ್ಷಣ ಬಲಪಡಿಸಬೇಕು, ಐಸಿಡಿಎಸ್‌ ಯೋಜನೆ ಬಲಪಡಿಸಬೇಕು, ₹ 21 ಸಾವಿರ ಸಮಾನ ಕನಿಷ್ಠ ವೇತನ ಜಾರಿಗೆ ತರಬೇಕು, ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆ ಶಾಸನ ರೂಪಿಸಬೇಕು. ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿಗೆ ಶಾಸನ ರೂಪಿಸಬೇಕು. ದಲಿತರ ಮೇಲಿನ ಹಿಂಸಾಚಾರ ತಡೆಗಟ್ಟಬೇಕು. ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರಿಗೆ 18 ತಿಂಗಳ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಾರ್ಯದರ್ಶಿ ಎಂ.ರಾಜು, ಎಸ್‌.ಬಿ.ರಾಮು, ಪುಟ್ಟಮ್ಮ, ಚಂದ್ರಶೇಖರ್‌, ಸುಮಾ, ಆಶಾ, ಮಂಗಳಮ್ಮ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT