ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಯ ದೋಷ ಸರಿಪಡಿಸಿ

ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಗಾರ; ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅಭಿಮತ
Last Updated 21 ನವೆಂಬರ್ 2020, 13:12 IST
ಅಕ್ಷರ ಗಾತ್ರ

ಮಂಡ್ಯ: ‘ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ದಕ್ಷತೆ, ಪ್ರಾಮಾಣಿಕತೆಯಿಂದ ಕಾಲಮಿತಿಯಲ್ಲಿ ಉತ್ತಮ ಕೆಲಸ ಮಾಡಬೇಕು. ಮತದಾರರ ಪಟ್ಟಿಯಲ್ಲಿ ದೋಷವಿದ್ದರೆ ತಕ್ಷಣವೇ ಸರಿಪಡಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ನಡೆದ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘ಮತಗಟ್ಟೆ ಅಧಿಕಾರಿಗಳು ಚುನಾವಣಾ ಆಯೋಗದ ಗ್ರಾಮ ಮಟ್ಟದ ಕಣ್ಣು ಮತ್ತು ಕಿವಿ ಇದ್ದ ಹಾಗೆ. ಇಡೀ ವಿಶ್ವದಲ್ಲಿ ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಕಾಲಕಾಲಕ್ಕೆ ನಡೆಯುತ್ತಿರುವ ಮುಕ್ತ, ನ್ಯಾಯ ಸಮ್ಮತ ಚುನಾವಣೆಯಿಂದ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಿರವಾಗಿದೆ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕಾದರೆ ದೋಷರಹಿತ ಮತದಾರರ ಪಟ್ಟಿ ಅತ್ಯವಶ್ಯಕವಾಗಿದೆ’ ಎಂದರು.

‘ಮತದಾರರ ಪಟ್ಟಿಯನ್ನು ತಯಾರಿಸುವ ಜವಾಬ್ದಾರಿಯುತ ಕೆಲಸ ಜಿಲ್ಲೆಯ ಇಆರ್‍ಒ ಮತ್ತು ಎಆರ್‍ಒಗಳಿಗೆ ಇದೆ. ಆದರೆ ಅವರ ಪರವಾಗಿ ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಜವಾಬ್ದಾರಿ ಬಿಎಲ್ಒಗಳ ಮೇಲಿರುತ್ತದೆ. ಹೀಗಾಗಿ ಅವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು’ ಎಂದು ಹೇಳಿದರು.

‘ಬಿಎಲ್ಒಗಳು ಚುನಾವಣಾ ಆಯೋಗ ನೀಡುವ ನಿರ್ದೇಶನ, ಜವಾಬ್ದಾರಿಗಳನ್ನು ಕಾಲಾನುಕಾಲಾಕ್ಕೆ ತಿಳಿದುಕೊಳ್ಳಬೇಕು. ಮರಣ ಹೊಂದಿದ ವ್ಯಕ್ತಿಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರದಂತೆ ನೋಡಿಕೊಳ್ಳಬೇಕು. ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಲು ಯೋಜನೆಗಳನ್ನು ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಒಂದು ಮತವು ಕೂಡ ಮುಖ್ಯವಾಗಿರುವುದರಿಂದ ಯಾವುದೇ ಆಮಿಷಕ್ಕೆ, ಒತ್ತಡಕ್ಕೆ ಒಳಗಾಗದೆ ಜವಾಬ್ದಾರಿ ನಿರ್ವಹಿಸಬೇಕು. ದೋಷರಹಿತವಾದ ಅಂತಿಮ ಮತದಾರರ ಪಟ್ಟಿಯನ್ನು ತಯಾರಿಸಲು 2021ರ ಜ.14 ಕೊನೆಯ ದಿನವಾಗಿದೆ. ಅಂತಿಮ ಪಟ್ಟಿಯನ್ನು ಜ.18ರಂದು ಪ್ರಚುರ ಪಡಿಸುತ್ತೇವೆ. ಚುನಾವಣೆಯ ಕೆಲಸದಲ್ಲಿ ಉದಾಸೀನ ಒಳ್ಳೆಯದಲ್ಲ. ಎಲ್ಲಾ ಮಾಹಿತಿಗಳನ್ನು ತಿಳಿಯಬೇಕು, ಗರುಡ ಆ್ಯಪ್ ಡೌನ್ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮಂಡ್ಯ ಉಪವಿಭಾಗಾಧಿಕಾರಿ ನೇಹಾ ಜೈನ್, ನಗರಸಭೆ ಆಯುಕ್ತ ಲೋಕೇಶ್, ಮಂಡ್ಯ ತಹಶೀಲ್ದಾರ್‌ ಚಂದ್ರಶೇಖರ್ ಶಂ. ಗಾಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT