ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿಗೆ ದಿಗ್ಗಜರನ್ನು ಕೊಟ್ಟ ಹೆರಗನಹಳ್ಳಿ

ಡಾ.ಎಚ್.ಎಲ್. ನಾಗೇಗೌಡ, ಎಚ್‌.ಟಿ ಕೃಷ್ಣಪ್ಪ, ಎಚ್‌.ಎಲ್‌.ಕೇಶವಮೂರ್ತಿ ಈ ಊರಿನವರು
Last Updated 11 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ನಾಗಮಂಗಲ: ಮಂಡ್ಯ ಜಿಲ್ಲೆಯ ಮೊದಲ ಐಎಎಸ್ ಅಧಿಕಾರಿ, ಜಾನಪದ ವಿದ್ವಾಂಸ ಡಾ.ಎಚ್.ಎಲ್. ನಾಗೇಗೌಡ, ಮಾಜಿ ಸಚಿವ ಎಚ್‌.ಟಿ ಕೃಷ್ಣಪ್ಪ, ವೈಚಾರಿಕ ಲೇಖಕ ಎಚ್‌.ಎಲ್‌.ಕೇಶವಮೂರ್ತಿ ಮುಂತಾದ ದಿಗ್ಗಜರನ್ನು ನಾಡಿಗೆ ಕೊಟ್ಟ ಕೀರ್ತಿ ತಾಲ್ಲೂಕಿನ ಹೆರಗನಹಳ್ಳಿ ಗ್ರಾಮಕ್ಕೆ ಸೇರುತ್ತದೆ.

ಬಿಂಡಿಗನವಿಲೆ ಹೋಬಳಿಯ ಈ ಊರು ಬೆಂಗಳೂರು–ಮಂಗಳೂರು ಹೆದ್ದಾರಿ, 117ನೇ ಕಿ.ಮೀ.ಯಿಂದ ದಕ್ಷಿಣಕ್ಕಿದೆ. 180 ಕುಟುಂಬ, 750 ಜನಸಂಖ್ಯೆ ಇಲ್ಲಿದೆ. ಈ ಊರಿಗೆ ಐತಿಹಾಸಿಕ ಹಿನ್ನೆಲೆ ಇದ್ದು ಸ್ವಾತಂತ್ರ್ಯ ಪೂರ್ವದಲ್ಲಿ ವಾಕಮನ್ ಎಂಬ ನಿವೃತ್ತ ಬ್ರಿಟಿಷ್ ಅಧಿಕಾರಿ ಗ್ರಾಮದ ಸಮೀಪ ಜಮೀನು ಕೊಂಡು ಮೇಗಲ ಬಂಗಲೆ ಮತ್ತು ಕೆಳಗಿನ ಬಂಗಲೆ ಎಂಬೆರಡು ಮನೆಗಳಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿದ್ದರು ಎಂಬ ದಾಖಲೆಗಳಿವೆ.

ಸ್ವಾತಂತ್ರ್ಯಪೂರ್ವದಲ್ಲಿ ನಂಜಾಮೇಸ್ತ್ರಿ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್‌ ಗಳಲ್ಲಿ ಕೆಲಸ ಮಾಡಲು, ಬೆಳ್ಳೂರು ಪ್ರಾಂತ್ಯದಿಂದ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಗಂಟಿಟ್ಟಿನ ನಿಂಗಯ್ಯ ನೀಲಿಗಿರಿಗೆ(ಊಟಿ) ಜನರನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತಾಲ್ಲೂಕಿನ ವಲಸೆ ಪರಂಪರೆಗೆ ಇಲ್ಲಿ ಆರಂಭವಾಗುತ್ತದೆ. ಡಾ. ಎಚ್.ಎಲ್. ನಾಗೇಗೌಡರು ಕಾನೂನು ವಿದ್ಯಾಭ್ಯಾಸಕ್ಕಾಗಿ ಪೂನಾಕ್ಕೆ ತೆರಳಿದರು. ಇವರ ಮಕ್ಕಳು ವಿದೇಶಕ್ಕೆ ತೆರಳಿ ವೈದ್ಯರು, ಉದ್ಯಮಿ ಹಾಗೂ ಕಲಾವಿದರಾದರು. ಅಂತೆಯೇ ಇವರ ಸಹೋದರ ಡಾ. ಕೃಷ್ಣೇಗೌಡ ಅಮೆರಿಕದಲ್ಲಿ ಸರ್ಕಾರಿ ವೈದ್ಯರಾದರು. ಕೃಷ್ಣೇಗೌಡರ ಮಕ್ಕಳು ಈಗಲೂ ಅಮೆರಿಕದಲ್ಲೇ ನೆಲೆಸಿದ್ದಾರೆ. ಆದರೆ ಊರಿನ ಮೇಲಿನ ಮಮಕಾರದಿಂದ ಊರಿನ ಬಡ ವಿದ್ಯಾರ್ಥಿಗಳಿಗೆ ಪ್ರತಿವರ್ಷ ₹ 5 ಲಕ್ಷ ಶುಲ್ಕ ಕಟ್ಟುತ್ತಿದ್ದಾರೆ.

ಈ ಗ್ರಾಮ ಶೈಕ್ಷಣಿಕವಾಗಿ ಬಹಳ ಮುಂದುವರಿದಿದ್ದು ಈ ಊರಿನ ಮಕ್ಕಳು ವಿವಿಧ ಹುದ್ದೆಗಳಲ್ಲಿ ದೇಶ, ವಿದೇಶದಲ್ಲಿ ನೆಲೆಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಂದ ಹಿಡಿದು ವೈದ್ಯರು, ವಕೀಲರಾಗಿ ನೆಲೆ ಕಂಡುಕೊಂಡಿದ್ದಾರೆ. ಇಂಥ ಗ್ರಾಮದಲ್ಲಿ ಹುಟ್ಟಿದ ಎಚ್.ಎಲ್. ನಾಗೇಗೌಡರು ಉನ್ನತ ಅಧಿಕಾರಿಯಾಗಿಯೂ ಜಾನಪದ ಕಲೆಗಳನ್ನು ಪ್ರೋತ್ಸಾಹಿಸಿದರು. ಸೋಬಾನೆ ಚಿಕ್ಕಮ್ಮನ ಅಸಂಖ್ಯ ಪದ ಸಂಗ್ರಹಿಸಿದರು. ತಾವು ಬದುಕಿ ಬಾಳಿದ ಮನೆಯನ್ನು ಕುರಿತು ‘ದೊಡ್ಡಮನೆ’ ಕಾದಂಬರಿಯ ಬರೆದರು. ರಾಮನಗರದ ಬಳಿ ಜಾನಪದ ಲೋಕ ನಿರ್ಮಿಸಿದರು.

ಪುಣ್ಯಕೋಟಿ ಎಂದೇ ಹೆಸರಾದ ಮಾಜಿ ಸಚಿವ ಎಚ್.ಟಿ.ಕೃಷ್ಣಪ್ಪ ಎಲ್ಎಲ್ ಬಿ ಪದವೀಧರರು. ಅಬಕಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇವರು ಆಂಜನೇಯ ಪಾತ್ರವನ್ನು ಅದ್ಭುತವಾಗಿ ಅಭಿನಯಿಸುತ್ತಿದ್ದರು. 87ರ ಇಳಿವಯಸ್ಸಿನಲ್ಲೂ ರಂಗಗೀತೆ ಮೆಲುಕು ಹಾಕುತ್ತಾರೆ. ಪ್ರಗತಿಪರ ಚಿಂತಕ, ಅಂಕಣಕಾರರಾಗಿದ್ದ ಎಚ್.ಎಲ್. ಕೇಶವಮೂರ್ತಿ ಜೀವನದ ಕಡೇಗಾಲದವರೆಗೂ ಶಿಸ್ತಿಗೆ ಹೆಸರಾಗಿ ನುಡಿದಂತೆ ನಡೆದರು.

ಸ್ವಾತಂತ್ರ್ಯ ಪೂರ್ವದಲ್ಲಿ ಚಲ್ಯದ ಮಲ್ಲಪ್ಪ ಮೇಷ್ಟ್ರು ಕೂಲಿ ಮಠದಲ್ಲಿ ಮರಳಿನ ಮೇಲೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು. ಗ್ರಾಮದಲ್ಲಿ ಅವರ ನೆನಪುಗಳು ಸಾಕಷ್ಟಿವೆ. ಸ್ವಾತಂತ್ರ್ಯಾ ನಂತರ ಕಿರಿಯ, 1969ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಯಿತು. 1984ರಲ್ಲಿ ಸರ್ಕಾರಿ ಪ್ರೌಢಶಾಲೆ ಅರಂಭವಾಯಿತು. ಇಂದು ಅವೆಲ್ಲವೂ ಮಕ್ಕಳ ಕೊರತೆ ಅನುಭವಿಸುತ್ತಿವೆ.

ಊರ ಪ್ರಮುಖ ಆಚರಣೆ ದೊಡ್ಡಮ್ಮನ ಹಬ್ಬ. ಅಂದು ಸುತ್ತಮುತ್ತಲ ಹಳ್ಳಿಗಳ ಜನರು ಇಲ್ಲಿ ರಂಗ ಕುಣಿಯುತ್ತಾರೆ. 2002ರಿಂದ ಹೇಮಾವತಿ ಎಡದಂಡೆ ನಾಲೆಯಿಂದ ನಿರಂತರವಾಗಿ ಕೆರೆಗೆ ನೀರು ಹರಿದು ಬರುತ್ತಿದ್ದು ಅಂತರ್ಜಲ ಹೆಚ್ಚಳವಾಗಿದೆ. ಕೊಳವೆ ಬಾವಿಯ ಮೂಲಕ ಭತ್ತ, ಕಬ್ಬು, ತೆಂಗು, ರಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ಮಹಿಳಾ ಹಾಲು ಉತ್ಪಾದಕರ ಸಂಘ ಜಿಲ್ಲೆಯ ಉತ್ತಮ ಡೈರಿ ಎಂಬ ಬಿರುದು ಪಡೆದಿದೆ. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ರಾಜ್ಯಕ್ಕೆ ಹೆಸರುವಾಸಿಯಾದ ಹೆರಗನಹಳ್ಳಿ ಗ್ರಾಮ ಊರ ಜನರಿಗೆ ಹೆಮ್ಮೆಯ ಊರಾಗಿದೆ.

*ಹೆರಗನಹಳ್ಳಿ ಗ್ರಾಮದ ಮಣ್ಣಿನಲ್ಲಿ ವಿಶೇಷ ಅನುಭೂತಿ ಇದೆ. ಶಿಕ್ಷಣ, ಜಾನಪದ, ಕಾನೂನು, ವೈದ್ಯಕೀಯ, ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಈ ಮಣ್ಣಿನಲ್ಲಿ ಹುಟ್ಟಿದ್ದಾರೆ. ಮುಂದಿನ ಪೀಳಿಗೆ ಈ ಊರಿನ ಪರಂಪರೆಯನ್ನು ಮುನ್ನಡೆಸಬೇಕು
–ಎಚ್‌.ಟಿ.ಕೃಷ್ಣಪ್ಪ, ಮಾಜಿ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT