ಮಣ್ಣಿನ ಗಣಪನಿಗೆ ಎಲ್ಲೆಡೆ ಬೇಡಿಕೆ..!

7
ಮೂರು ತಲೆಮಾರಿನಿಂದ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯಲ್ಲಿ ಪತ್ತಾರ ಕುಟುಂಬ

ಮಣ್ಣಿನ ಗಣಪನಿಗೆ ಎಲ್ಲೆಡೆ ಬೇಡಿಕೆ..!

Published:
Updated:
Deccan Herald

ವಿಜಯಪುರ: ಪಿಒಪಿ ಗಣಪನ ಅಬ್ಬರದಲ್ಲೂ ಇವರಿಗೆ ಬೇಡಿಕೆ ಕುಂದಿಲ್ಲ. ವರ್ಷದಿಂದ ವರ್ಷಕ್ಕೆ ಪತ್ತಾರ ಕುಟುಂಬಕ್ಕೆ ಮಣ್ಣಿನ ಗಣಪನ ಬೇಡಿಕೆಯ ಮಹಾಪೂರವೇ ಬರುತ್ತದೆ. ತಯಾರಿಕೆಗೆ ಸಮಯದ ಅಭಾವದಿಂದ ಎಲ್ಲಾ ಬೇಡಿಕೆಗೂ ಈ ಕುಟುಂಬ ಸಮ್ಮತಿಯ ಮುದ್ರೆಯೊತ್ತಲ್ಲ.

ಮೂರು ತಲೆಮಾರಿನಿಂದಲೂ ಮಣ್ಣಿನ ಗಣಪನನ್ನು ತಯಾರಿಸುತ್ತಿರುವ ನಗರದ ವಾಟರ್ ಟ್ಯಾಂಕ್‌ ಬಳಿಯ ಜೋರಾಪುರ ಪೇಟೆಯ ಮನೋಹರ ಪತ್ತಾರ ಕುಟುಂಬ ಪರಿಸರ ಕಾಳಜಿ ಪ್ರದರ್ಶಿಸುತ್ತಿದೆ. ಪೂರ್ವಿಕರ ಪರಂಪರೆಯನ್ನು ಇಂದಿಗೂ ಮುಂದುವರೆಸಿದೆ. ಆಧುನಿಕತೆಯ ಸೋಂಕಿಗೆ ತಮ್ಮ ಕಾಯಕ ಬಲಿಕೊಡದೆ ಕಾಪಿಟ್ಟುಕೊಂಡು ಬಂದಿದೆ.

ಬಣ್ಣ ಮತ್ತು ಅಂದಕ್ಕೆ ಮರುಳಾಗಿ, ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಾರ್ವಜನಿಕರು ಮುಂದಾದರೂ; ಪೂಜೆಗೆ ಯೋಗ್ಯ ಮತ್ತು ಪರಿಸರ ಕಾಳಜಿಯೊಂದಿಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ಜನರಿಗೆ ಪ್ರತಿ ವರ್ಷವೂ ಗಣೇಶ ಚೌತಿ ಸಂದರ್ಭ ನೀಡಬೇಕೆಂಬ ಮಹತ್ತರ ಉದ್ದೇಶದಿಂದ ಕಾರ್ಯಾಚರಿಸುತ್ತಿರುವುದು ಇವರ ವಿಶೇಷ.

‘ತಂದೆಯ ಕಾಲದಿಂದಲೂ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ. ಹಬ್ಬ ಇನ್ನೂ ಮೂರು ತಿಂಗಳು ಇರುವುದರೊಳಗಾಗಿ ಮೂರ್ತಿಗಳನ್ನು ತಯಾರಿಸಲು ಆರಂಭಿಸುತ್ತೇವೆ. ಪತ್ನಿ ಶಾರದಾ ನಮ್ಮ ಕೆಲಸಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಮಗ ಬೆಂಗಳೂರಿನಲ್ಲಿ ಎಂಜಿನಿಯರ್‌ ಇದ್ರೂ ಮೂರ್ತಿ ತಯಾರಿಸಲು ತಪ್ಪದೇ ಬರ್ತಾವ್ನೇ. ಕುಟುಂಬದ ಸಹಕಾರದಿಂದ ಪ್ರತಿ ವರ್ಷ 250 ಕುಟುಂಬಗಳಿಗೆ ಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡುತ್ತೇವೆ’ ಎಂದು ಮನೋಹರ ಪತ್ತಾರ ‘ಪ್ರಜಾವಾಣಿ’ಗೆ ತಿಳಿಸಿದರು.

11 ಇಂಚು ಗಣಪನಿಗೆ ₹ 500, 15 ಇಂಚಿಗೆ ₹ 1100, 1 ಅಡಿಗೆ ₹ 600, 2.5 ಅಡಿಗೆ ₹ 3500, 4.5 ಅಡಿ ಎತ್ತರದ ಮೂರ್ತಿಯನ್ನು ₹ 4500ರಂತೆ ಮಾರಾಟ ಮಾಡುತ್ತೇವೆ. ಮನೆಯಿಂದ ಅಡಿಕೆ, ಎಲೆ, ದಕ್ಷಿಣೆ, ಅಕ್ಕಿ ಅಥವಾ ಗೋದಿಯನ್ನು ತಂದು, ನಮಗೆ ಕೊಟ್ಟು ಸಾಂಪ್ರದಾಯಿಕವಾಗಿ ಗಣೇಶನನ್ನು ಇಂದಿಗೂ ತೆಗೆದುಕೊಂಡು ಹೋಗುತ್ತಾರೆ.

ಇದು ಮನೆಯಲ್ಲಿ ಪ್ರತಿ ವರ್ಷ ಹಬ್ಬದ ವಾತಾವರಣ ಸೃಷ್ಟಿಸುತ್ತದೆ. ಬ್ರಾಹ್ಮಣರು ಅಕ್ಷತೆ, ಗಂಧ, ಕೆಂಪು ಮಡಿ, ಹಳದಿ ಶಾಲು ಹಾಗೂ ಲಿಂಗಾಯತ ಸಮುದಾಯದವರು ವಿಭೂತಿ, ಲಿಂಗದಕಾಯಿ ಇರುವ ಗಣಪತಿ ಖರೀದಿಸುತ್ತಾರೆ. ಗೋಕಾಕ ಮತ್ತು ಹುಬ್ಬಳ್ಳಿಯಿಂದಲೂ ಕೆಲ ಜನರು ಮೂರ್ತಿ ಖರೀದಿಸಲು ಬರುತ್ತಾರೆ’ ಎಂದು ಅವರು ಹೇಳಿದರು.

‘ಕೇವಲ ಗಣೇಶ ಮೂರ್ತಿಗೆ ಸೀಮಿತಗೊಳ್ಳದೆ ನಾಡದೇವಿ ಮೂರ್ತಿ, ಗೌರಿ, ಗಂಗೆ ತಯಾರಿಸುತ್ತೇವೆ. ಚಿತ್ರಕಲೆ ಶಿಕ್ಷಕನಾಗಿರುವುದರಿಂದ ನವರಸಪುರ ಉತ್ಸವ ವೇದಿಕೆ ತಯಾರಿಕೆ ಹಾಗೂ ಮೈಸೂರು ದಸರಾ ಉತ್ಸವದಲ್ಲಿ ಜಿಲ್ಲೆಯ ಸ್ತಬ್ಧ ಚಿತ್ರ ಸಹಿತ ತಯಾರಿಸಿದ್ದೇನೆ. ರಾಜ್ಯ ಸರ್ಕಾರ ಶಿಲ್ಪಕಲೆ ಮತ್ತು ಚಿತ್ರಕಲೆ ಸಾಧನೆ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ನನ್ನ ಉತ್ಸಾಹ ಇಮ್ಮಡಿಗೊಂಡಿದೆ’ ಎನ್ನುತ್ತಾರೆ ಮನೋಹರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !