ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾಪುರ: ಮೆಟ್ರೊ ಸಂಪರ್ಕ 2020ಕ್ಕೆ?

‘ನಮ್ಮ ಮೆಟ್ರೊ’ 2ನೇ ಹಂತದ ವಿಸ್ತರಣೆ: ರೀಚ್‌ 4 ಮಾರ್ಗದ ಕಾಮಗಾರಿ 2020ರ ಸೆ‍ಪ್ಟೆಂಬರ್‌ಗೆ ಪೂರ್ಣ
Last Updated 6 ಆಗಸ್ಟ್ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು:‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದಲ್ಲಿ ಯಲಚೇನಹಳ್ಳಿ ನಿಲ್ದಾಣದಿಂದ ಅಂಜನಾಪುರ ಟೌನ್‌ಶಿಪ್‌ವರೆಗಿನ ಎತ್ತರಿಸಿದ ಮಾರ್ಗದ (ರೀಚ್‌ 4) ಭೌತಿಕ ಕಾಮಗಾರಿ ಅಂತಿಮ ಹಂತ ತಲುಪಿದೆ. ಹಳಿ ಜೋಡಣೆ, ಸಿಗ್ನಲಿಂಗ್‌ ಕಾಮಗಾರಿ ಪೂರ್ಣಗೊಂಡು ಈ ಮಾರ್ಗದಲ್ಲಿ ಮೆಟ್ರೊ ಸಂಚಾರ ಶುರುವಾಗಲು ಇನ್ನು ಒಂದು ವರ್ಷ ಕಾಯಬೇಕು.

ಬಾಕಿ ಉಳಿದಿರುವ ಕಾಮಗಾರಿಗಳು ನಿರೀಕ್ಷಿತ ವೇಗದಲ್ಲೇ ನಡೆದರೆ 2020ರ ಸೆ‍ಪ್ಟೆಂಬರ್‌ ವೇಳೆಗೆ ಅಂಜನಾಪುರದವರೆಗಿನ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾಗಲಿದೆ ಎನ್ನುತ್ತಾರೆ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಅಧಿಕಾರಿಗಳು.

ಅಂಜನಾಪುರ ಟೌನ್‌ಷಿಪ್‌ನಅಂಜನಾಪುರ ರಸ್ತೆ (ಕೋಣನಕುಂಟೆ ಕ್ರಾಸ್‌ ),ಕೃಷ್ಣಲೀಲಾ ಪಾರ್ಕ್‌ (ಗುಬ್ಬಲಾಳ ಗೇಟ್‌), ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ನಿಲ್ದಾಣಗಳ ಕಾಂಕ್ರಿಟ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಿಲ್ಕ್‌ ಫಾರಂವರೆಗೂ ಎತ್ತರಿಸಿದ ಮಾರ್ಗ ನಿರ್ಮಾಣವಾಗಿದ್ದು, ಅಂಜನಾಪುರ ನಿಲ್ದಾಣದ ಕೊನೆ ಹಂತದ ಕಾಂಕ್ರೀಟ್‌ ಕಾಮಗಾರಿ ಪ್ರಗತಿಯಲ್ಲಿದೆ.ಅಂಜನಾಪುರ ರಸ್ತೆ ನಿಲ್ದಾಣಕ್ಕೆ ಬಣ್ಣ ಬಳಿಯಲಾಗುತ್ತಿದ್ದು, ಒಳಾಂಗಣ ವಿನ್ಯಾಸ ಕಾಮಗಾರಿಯೂ ಆರಂಭವಾಗಿದೆ.

2019ರಲ್ಲೇ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುತ್ತದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಈ ಮೊದಲು ಹೇಳಿತ್ತು. ನಂತರ ಕಾರಣಾಂತರಗಳಿಂದ ಕಾಮಗಾರಿ ವಿಳಂಬವಾಗಿತ್ತು.

‘6.5 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಏಕಕಾಲದಲ್ಲಿ ಎರಡೂ ಹಳಿಗಳನ್ನು ಜೋಡಿಸಲಾಗುತ್ತಿದೆ. ಹಳಿ ಜೋಡಣೆ ಕಾಮಗಾರಿ ಈ ವರ್ಷದ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಳಿ ಜೋಡಣೆ ಬಳಿಕ ಸಿಗ್ನಲಿಂಗ್‌ ವ್ಯವಸ್ಥೆ ಅಳವಡಿಕೆ ಹಾಗೂ ವಿದ್ಯುತ್‌ ಕೇಬಲ್‌ಗಳನ್ನು ಜೋಡಿಸುವ ಕಾಮಗಾರಿ ನಡೆಯಲಿದೆ. ನಂತರ ಮೆಟ್ರೊ ರೈಲುಗಳನ್ನು ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಬೇಕಿದೆ’ ಎಂದು ಅವರು ತಿಳಿಸಿದರು.

‘ಮೊದಲು ಗಿಡ ನೆಡಿ’

‘ಹೆದ್ದಾರಿ ವಿಸ್ತರಣೆಗಾಗಿ ಕನಕಪುರ ರಸ್ತೆಯಲ್ಲಿ ಸಾಕಷ್ಟು ಮರಗಳನ್ನು ಕಡಿಯಲಾಗಿದೆ. ಬಿಎಂಆರ್‌ಸಿಎಲ್‌ ಕೂಡ ಆ ಕೆಲಸ ಮಾಡದೆ, ಆದಷ್ಟು ಮರಗಳನ್ನು ಉಳಿಸುವ ಕೆಲಸ ಮಾಡಬೇಕು. 200 ಮರಗಳನ್ನು ಕಡಿಯುವುದಕ್ಕೆ ಮುನ್ನ, 2,000 ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು’ ಎಂದು ‘ಇಕೊ ವಾಚ್‌’ ಸಂಸ್ಥೆಯ ನಿರ್ದೇಶಕ ಅಕ್ಷಯ್‌ ಹೆಬ್ಳೀಕರ್‌ ಹೇಳಿದರು. ಸಲಹೆ ನೀಡಿದರು.

‘ಹೆಚ್ಚು ಮರಗಳಿಗೆ ಹಾನಿಯಾಗದ ರೀತಿಯಲ್ಲಿಯೇ ಮಾರ್ಗದ ವಿನ್ಯಾಸ ಮಾಡಲಾಗಿದೆ. ಬೇರು ಸಹಿತ ತೆಗೆಯಲಾಗಿರುವ ಮರಗಳನ್ನು ಬೇರೆಡೆ ನೆಡಲಾಗುತ್ತಿದೆ’ ಎಂದು ಯಶವಂತಚೌಹಾಣ್‌ ಹೇಳಿದರು.

***

ನಮ್ಮ ಮೆಟ್ರೊ ವಿಸ್ತರಿಸಿದ ಮಾರ್ಗ ರೀಚ್-4ಬಿ:

ಯಲಚೇನಹಳ್ಳಿ-ಅಂಜನಾಪುರ

ಮಾರ್ಗದ ಉದ್ದ: 6.52 ಕಿ.ಮೀ.

ಒಟ್ಟು ನಿಲ್ದಾಣಗಳು 5

ಮಾರ್ಗದ ಯೋಜನಾ ವೆಚ್ಚ: ₹1,765 ಕೋಟಿ

ಸಿವಿಲ್ ಕಾಮಗಾರಿ ಯೋಜನೆ ವೆಚ್ಚ: ₹508.86 ಕೋಟಿ

ಕಾಮಗಾರಿ ಆರಂಭ: 2016ರ ಮೇ

ಕಾಮಗಾರಿ ಪೂರ್ಣಗೊಳಿಸುವ ಪರಿಷ್ಕೃತ ಗುರಿ: 2020ರ ಸೆಪ್ಟೆಂಬರ್‌

***

ಕಾಮಗಾರಿ ತ್ವರಿತಗತಿಯಿಂದ ನಡೆಯುತ್ತಿದೆ. ಕೋಣನಕುಂಟೆ ಕ್ರಾಸ್‌ ಬಳಿಯ ನಿಲ್ದಾಣಕ್ಕೆ ಬಣ್ಣ ಬಳಿಯಲಾಗುತ್ತಿದೆ.ನಮ್ಮಲ್ಲಿಗೂ ಮೆಟ್ರೊ ಬರುತ್ತದೆ ಎಂಬ ಖುಷಿ ನಮಗೆ

-ಸಂತೋಷ ಬಿಲ್ಲವ

ಮೊದಲಿಗಿಂತ ಇತ್ತೀಚೆಗೆ ಕಾಮಗಾರಿ ಸ್ವಲ್ಪ ವೇಗ ಪಡೆದುಕೊಂಡಿದೆ. ಆದರೆ, ಇನ್ನೂ ಬೇಗ ಕೆಲಸ ಮುಗಿಸಬಹುದಾಗಿತ್ತು

-ನಂದಕುಮಾರ್‌

ಶೇ 90ರಷ್ಟು ಕೆಲಸ ಮುಗಿದಂತೆ ಕಾಣುತ್ತದೆ. ರೈಲು ಸಂಚಾರ ಆದಷ್ಟು ಬೇಗ ಆರಂಭವಾದರೆ ಅನುಕೂಲವಾಗುತ್ತದೆ

-ಮಧುಗೌಡ

ದೂಳಿನಿಂದ ತೊಂದರೆಯಾಗುತ್ತಿದೆ. ಆದರೆ, ನಮ್ಮ ಅಂಗಡಿಯ ಮುಂದೆಯೇ ಮೆಟ್ರೊ ಬರುತ್ತಿರುವುದು ಸಂತಸ ತಂದಿದೆ

-ರಾಜೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT